ಯೋಹಾನ 18:39-19:16
Kannada Holy Bible: Easy-to-Read Version
39 ಆದರೆ ಪಸ್ಕಹಬ್ಬದ ಕಾಲದಲ್ಲಿ ನಾನು ನಿಮಗೋಸ್ಕರ ಕೈದಿಗಳಲ್ಲಿ ಒಬ್ಬನನ್ನು ಬಿಡುಗಡೆ ಮಾಡುವುದು ನಿಮ್ಮ ಪದ್ಧತಿಯಾಗಿದೆ. ನಾನು ಯೆಹೂದ್ಯರ ರಾಜನನ್ನು ಬಿಡುಗಡೆ ಮಾಡಬೇಕೆಂದು ನೀವು ಬಯಸುತ್ತೀರಾ?” ಎಂದು ಕೇಳಿದನು.
40 ಯೆಹೂದ್ಯರು, “ಇಲ್ಲ, ಅವನನ್ನಲ್ಲ! ಬರಬ್ಬನಿಗೆ ಬಿಡುಗಡೆಯಾಗಲಿ!” ಎಂದು ಕೂಗಿದರು. (ಬರಬ್ಬನು ಒಬ್ಬ ದರೋಡೆಕೋರ.)
19 ಬಳಿಕ, ಯೇಸುವನ್ನು ಕರೆದುಕೊಂಡು ಹೋಗಿ, ಕೊರಡೆಯಿಂದ ಹೊಡೆಯಬೇಕೆಂದು ಪಿಲಾತನು ಆಜ್ಞಾಪಿಸಿದನು. 2 ಸೈನಿಕರು ಮುಳ್ಳುಬಳ್ಳಿಗಳಿಂದ ಒಂದು ಕಿರೀಟವನ್ನು ಮಾಡಿ ಯೇಸುವಿನ ತಲೆಯ ಮೇಲೆ ಇಟ್ಟರು. ಬಳಿಕ ಸೈನಿಕರು ಯೇಸುವಿಗೆ ಕಡುಕೆಂಪಾದ ಅಂಗಿಯನ್ನು ತೊಡಿಸಿದರು. 3 ಸೈನಿಕರು ಪದೇಪದೇ ಯೇಸುವಿನ ಬಳಿಗೆ ಬಂದು, “ಯೆಹೂದ್ಯರ ರಾಜನೇ, ನಿನಗೆ ನಮಸ್ಕಾರ!” ಎಂದು ಹೇಳುತ್ತಾ ಆತನ ಕೆನ್ನೆಗೆ ಹೊಡೆದರು.
4 ಪಿಲಾತನು ಮತ್ತೆ ಹೊರಗೆ ಬಂದು, ಯೆಹೂದ್ಯರಿಗೆ, “ನೋಡಿ! ನಾನು ಯೇಸುವನ್ನು ನಿಮ್ಮ ಬಳಿಗೆ ತರುತ್ತಿದ್ದೇನೆ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ ಎಂಬುದು ನಿಮಗೆ ತಿಳಿದಿರಲಿ” ಎಂದು ಹೇಳಿದನು. 5 ಆಗ ಯೇಸು ಹೊರಗೆ ಬಂದನು. ಆತನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ಇಟ್ಟಿದ್ದರು ಮತ್ತು ಕೆಂಪು ಅಂಗಿಯನ್ನು ಆತನಿಗೆ ತೊಡಿಸಿದ್ದರು. ಪಿಲಾತನು ಯೆಹೂದ್ಯರಿಗೆ, “ಇಗೋ, ಈ ಮನುಷ್ಯನು!” ಎಂದು ಹೇಳಿದನು.
6 ಮಹಾಯಾಜಕರು ಮತ್ತು ಯೆಹೂದ್ಯ ಕಾವಲುಗಾರರು ಯೇಸುವನ್ನು ಕಂಡು, “ಅವನನ್ನು ಶಿಲುಬೆಗೆ ಹಾಕಿಸು! ಅವನನ್ನು ಶಿಲುಬೆಗೆ ಹಾಕಿಸು!” ಎಂದು ಕೂಗಿದರು.
ಆದರೆ ಪಿಲಾತನು, “ನೀವೇ ಆತನನ್ನು ಶಿಲುಬೆಗೆ ಹಾಕಿರಿ. ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಲಿಲ್ಲ” ಎಂದು ಉತ್ತರಕೊಟ್ಟನು.
7 ಯೆಹೂದ್ಯರು, “ನಮಗೊಂದು ನಿಯಮವಿದೆ. ಅದರ ಪ್ರಕಾರ ಇವನಿಗೆ ಮರಣದಂಡನೆ ಆಗಲೇಬೇಕು. ಯಾಕೆಂದರೆ ಇವನು ತನ್ನನ್ನು ದೇವರ ಮಗನೆಂದು ಹೇಳಿಕೊಂಡಿದ್ದಾನೆ” ಎಂದು ಉತ್ತರಕೊಟ್ಟರು.
8 ಪಿಲಾತನು ಇದನ್ನು ಕೇಳಿ ಬಹು ಭಯಗೊಂಡು, 9 ಮತ್ತೆ ಭವನದೊಳಗೆ ಹೋಗಿ, ಯೇಸುವಿಗೆ, “ನೀನು ಎಲ್ಲಿಯವನು?” ಎಂದು ಕೇಳಿದನು. ಆದರೆ ಯೇಸು ಮೌನವಾಗಿದ್ದನು. 10 ಪಿಲಾತನು, “ನೀನು ನನ್ನೊಂದಿಗೆ ಮಾತಾಡುವುದಿಲ್ಲವೇ? ನಿನ್ನನ್ನು ಬಿಡಿಸುವ ಅಧಿಕಾರವೂ ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗಿದೆ ಎಂಬುದು ನಿನಗೆ ತಿಳಿಯದೋ?” ಎಂದನು.
11 ಯೇಸು “ನನ್ನ ಮೇಲೆ ನಿನಗಿರುವ ಅಧಿಕಾರವೆಂದರೆ ದೇವರು ನಿನಗೆ ಕೊಟ್ಟಿರುವ ಅಧಿಕಾರವೊಂದೇ. ಆದ್ದರಿಂದ ನನ್ನನ್ನು ನಿನ್ನ ಕೈಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪದೋಷವಿರುವುದು” ಎಂದು ಉತ್ತರಕೊಟ್ಟನು.
12 ಇದಾದ ಮೇಲೆ, ಯೇಸುವನ್ನು ಬಿಡುಗಡೆ ಮಾಡಲು ಪಿಲಾತನು ಪ್ರಯತ್ನಿಸಿದನು. ಆದರೆ ಯೆಹೂದ್ಯರು, “ತನ್ನನ್ನು ರಾಜನೆಂದು ಹೇಳಿಕೊಳ್ಳುವ ಯಾವ ವ್ಯಕ್ತಿಯಾಗಲಿ ಸೀಸರನ ವಿರೋಧಿಯಾಗಿದ್ದಾನೆ. ಆದ್ದರಿಂದ ನೀನು ಈ ಮನುಷ್ಯನನ್ನು (ಯೇಸುವನ್ನು) ಬಿಡುಗಡೆ ಮಾಡಿದರೆ, ನೀನು ಸೀಸರನ ಮಿತ್ರನಲ್ಲವೆಂದೇ ಅದರ ಅರ್ಥ” ಎಂದು ಕೂಗಿದರು.
13 ಯೆಹೂದ್ಯರು ಹೇಳಿದ್ದನ್ನು ಕೇಳಿ ಪಿಲಾತನು ಯೇಸುವನ್ನು ಹೊರಗೆ ಕರೆಯಿಸಿ, “ಹಾಸುಗಲ್ಲು” ಎಂಬ ಕಟ್ಟೆಯ (ಯೆಹೂದ್ಯರ ಭಾಷೆ[a] ಯಲ್ಲಿ ಅದರ ಹೆಸರು ಗಬ್ಬಥ.) ಮೇಲಿದ್ದ ನ್ಯಾಯಪೀಠದಲ್ಲಿ ಕುಳಿತುಕೊಂಡನು. 14 ಅಂದು ಪಸ್ಕಹಬ್ಬದ ಸಿದ್ಧತೆಯ ದಿನ ಮತ್ತು ಆಗಲೇ ಮಧ್ಯಾಹ್ನವಾಗಿತ್ತು. ಪಿಲಾತನು ಯೆಹೂದ್ಯರಿಗೆ, “ಇಗೋ, ನಿಮ್ಮ ರಾಜನು!” ಎಂದು ಹೇಳಿದನು.
15 ಯೆಹೂದ್ಯರು, “ಕೊಲ್ಲಿರಿ, ಕೊಲ್ಲಿರಿ; ಅವನನ್ನು ಶಿಲುಬೆಗೇರಿಸಿರಿ!” ಎಂದು ಕಿರುಚಿದರು.
ಪಿಲಾತನು ಯೆಹೂದ್ಯರಿಗೆ, “ನಿಮ್ಮ ರಾಜನನ್ನು ಶಿಲುಬೆಗೇರಿಸಬೇಕೇ?” ಎಂದು ಕೇಳಿದನು.
ಮಹಾಯಾಜಕರು, “ನಮಗಿರುವ ಒಬ್ಬನೇ ರಾಜನೆಂದರೆ ಸೀಸರ್!” ಎಂದು ಉತ್ತರಕೊಟ್ಟರು.
16 ಆಗ ಪಿಲಾತನು, ಯೇಸುವನ್ನು ಶಿಲುಬೆಗೇರಿಸಲು ಅವರಿಗೆ ಒಪ್ಪಿಸಿಕೊಟ್ಟನು.
ಯೇಸುವನ್ನು ಶಿಲುಬೆಗೇರಿಸಿದರು
(ಮತ್ತಾಯ 27:32-44; ಮಾರ್ಕ 15:21-32; ಲೂಕ 23:26-39)
ಸೈನಿಕರು ಯೇಸುವನ್ನು ಕರೆದೊಯ್ದರು.
Footnotes
- 19:13 ಯೆಹೂದ್ಯರ ಭಾಷೆ ಅಂದರೆ ಅರಮೇಯಿಕ್ ಭಾಷೆ.
Kannada Holy Bible: Easy-to-Read Version. All rights reserved. © 1997 Bible League International