Add parallel Print Page Options

ಸೇಡಿನ ಬಗ್ಗೆ ಯೇಸುವಿನ ಉಪದೇಶ

(ಲೂಕ 6:29-30)

38 “‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು’(A) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 39 ಆದರೆ ನಾನು ನಿಮಗೆ ಹೇಳುವುದೇನೆಂದರೆ, ದುಷ್ಟನಿಗೆ ವಿರೋಧವಾಗಿ ನಿಂತುಕೊಳ್ಳಬೇಡಿ. ಯಾವನಾದರೂ ನಿಮ್ಮ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡಿರಿ. 40 ಯಾವನಾದರೂ ನಿಮ್ಮ ಮೇಲಂಗಿಗಾಗಿ ನಿಮ್ಮನ್ನು ನ್ಯಾಯಾಲಯಕ್ಕೆ ಎಳೆದೊಯ್ಯಬೇಕೆಂದಿದ್ದರೆ, ನಿಮ್ಮ ಒಳಂಗಿಯನ್ನು ಸಹ ಅವನಿಗೆ ಕೊಟ್ಟುಬಿಡಿರಿ. 41 ಯಾವ ಸೈನಿಕನಾದರೂ ತನ್ನೊಂದಿಗೆ ಒಂದು ಮೈಲಿ ದೂರ ಬರಬೇಕೆಂದು ನಿಮ್ಮನ್ನು ಒತ್ತಾಯಿಸಿದರೆ, ಅವನೊಂದಿಗೆ ಎರಡು ಮೈಲಿ ದೂರ ಹೋಗಿ. 42 ಯಾವನಾದರೂ ನಿಮ್ಮಲ್ಲಿರುವ ಯಾವುದನ್ನಾದರೂ ಕೇಳಿದರೆ, ಅವನಿಗೆ ಕೊಡಿ. ನಿಮ್ಮಿಂದ ಸಾಲ ತೆಗೆದುಕೊಳ್ಳಬೇಕೆಂದು ಬಂದವನಿಗೆ ಕೊಡದಿರಬೇಡಿ.

ಎಲ್ಲರನ್ನು ಪ್ರೀತಿಸಿರಿ

(ಲೂಕ 6:27-28,32-36)

43 “‘ನಿನ್ನ ಸ್ನೇಹಿತರನ್ನು ಪ್ರೀತಿಸು ಮತ್ತು ನಿನ್ನ ಶತ್ರುಗಳನ್ನು ದ್ವೇಷಿಸು’(B) ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ಶತ್ರುಗಳನ್ನು ಪ್ರೀತಿಸಿರಿ. ನಿಮಗೆ ಕೆಟ್ಟದ್ದನ್ನು ಮಾಡುವ ಜನರಿಗಾಗಿ ಪ್ರಾರ್ಥಿಸಿರಿ. 45 ಆಗ ನೀವು ಪರಲೋಕದಲ್ಲಿರುವ ನಿಮ್ಮ ತಂದೆಯ ನಿಜವಾದ ಮಕ್ಕಳಾಗುವಿರಿ. ನಿಮ್ಮ ತಂದೆಯು ಒಳ್ಳೆಯವರಿಗಾಗಿ ಮತ್ತು ಕೆಟ್ಟವರಿಗಾಗಿ ಸೂರ್ಯನನ್ನು ಉದಯಿಸುತ್ತಾನೆ ಮತ್ತು ಮಳೆಯನ್ನು ಸುರಿಸುತ್ತಾನೆ. 46 ನಿಮ್ಮನ್ನು ಪ್ರೀತಿಸುವ ಜನರನ್ನೇ ನೀವು ಪ್ರೀತಿಸಿದರೆ, ಅದರಿಂದ ನಿಮಗೇನು ಪ್ರತಿಫಲ ದೊರೆಯುವುದು? ಸುಂಕದವರು ಸಹ ಹಾಗೆ ಮಾಡುತ್ತಾರೆ. 47 ನೀವು ನಿಮ್ಮ ಸ್ನೇಹಿತರಿಗೆ ಮಾತ್ರ ಒಳ್ಳೆಯವರಾಗಿದ್ದರೆ, ನೀವು ಬೇರೆಯವರಿಗಿಂತ ಉತ್ತಮರೇನೂ ಅಲ್ಲ. ದೇವರನ್ನರಿಯದ ಜನರು ಸಹ ತಮ್ಮ ಸ್ನೇಹಿತರಿಗೆ ಒಳ್ಳೆಯವರಾಗಿರುತ್ತಾರೆ. 48 ಆದ್ದರಿಂದ ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.

Read full chapter