Add parallel Print Page Options

ನೆಲಸಮವಾಗಲಿರುವ ಮಹಾದೇವಾಲಯ

(ಮಾರ್ಕ 13:1-31; ಲೂಕ 21:5-33)

24 ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು. ಆಗ ಯೇಸು “ಈ ಕಟ್ಟಡಗಳನ್ನೆಲ್ಲ ನೋಡುತ್ತಿದ್ದೀರಾ? ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಇವುಗಳೆಲ್ಲಾ ನಾಶವಾಗುತ್ತವೆ. ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದಂತೆ ಎಲ್ಲಾ ಕಲ್ಲುಗಳು ಕೆಡವಲ್ಪಡುತ್ತವೆ” ಎಂದು ಹೇಳಿದನು.

ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.

ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ. ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಪಡಿಸುವರು. ನಿಮ್ಮ ಸಮೀಪದಲ್ಲಿ ನಡೆಯುತ್ತಿರುವ ಯುದ್ಧಗಳ ಶಬ್ದವನ್ನೂ ಬಹು ದೂರದಲ್ಲಿ ನಡೆಯುತ್ತಿರುವ ಯುದ್ಧಗಳ ಸುದ್ದಿಯನ್ನೂ ನೀವು ಕೇಳುವಿರಿ. ಆದರೆ ಹೆದರಬೇಡಿ. ಅಂತ್ಯವು ಬರುವುದಕ್ಕಿಂತ ಮುಂಚೆ ಇವುಗಳು ಸಂಭವಿಸಲೇಬೇಕು. ಜನಾಂಗಗಳು ಬೇರೆ ಜನಾಂಗಗಳಿಗೆ ವಿರೋಧವಾಗಿ ಯುದ್ದ ಮಾಡುತ್ತವೆ. ರಾಜ್ಯಗಳು ಬೇರೆಬೇರೆ ರಾಜ್ಯಗಳಿಗೆ ವಿರೋಧವಾಗಿ ಯುದ್ಧ ಮಾಡುತ್ತವೆ. ಬರಗಾಲಗಳು ಬರುತ್ತವೆ. ಬೇರೆಬೇರೆ ಸ್ಥಳಗಳಲ್ಲಿ ಭೂಕಂಪಗಳು ಆಗುತ್ತವೆ. ಇವೆಲ್ಲಾ ಪ್ರಸವವೇದನೆಯ ಆರಂಭವಷ್ಟೇ.

“ಆಗ ಜನರು ನಿಮ್ಮನ್ನು ಹಿಂಸಿಸಿ, ಮರಣದಂಡನೆ ವಿಧಿಸಲು ಅಧಿಕಾರಿಗಳಿಗೆ ಒಪ್ಪಿಸಿಕೊಡುವರು. ಜನರೆಲ್ಲರೂ ನಿಮ್ಮನ್ನು ವಿರೋಧಿಸುವರು. ನೀವು ನನ್ನಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ಇವುಗಳೆಲ್ಲಾ ನಿಮಗೆ ಸಂಭವಿಸುವವು. 10 ಆ ಸಮಯದಲ್ಲಿ ಅನೇಕ ವಿಶ್ವಾಸಿಗಳು ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ಅವರು ಒಬ್ಬರಿಗೊಬ್ಬರಿಗೆ ವಿರೋಧವಾಗಿ ತಿರುಗಿಕೊಂಡು ಒಬ್ಬರನ್ನೊಬ್ಬರು ದ್ವೇಷಿಸುವರು. 11 ಅನೇಕ ಸುಳ್ಳುಪ್ರವಾದಿಗಳು ಬಂದು ಎಷ್ಟೋ ಜನರನ್ನು ವಂಚಿಸುವರು. 12 ಲೋಕದಲ್ಲಿ ದುಷ್ಟತನವು ಹೆಚ್ಚಾಗಿ ಬಹುಜನ ವಿಶ್ವಾಸಿಗಳ ಪ್ರೀತಿಯು ಅಡಗಿಹೋಗುವುದು. 13 ಆದರೆ ಕಡೆಯವರೆಗೂ ದೃಢವಾಗಿರುವವನು ರಕ್ಷಣೆಹೊಂದುತ್ತಾನೆ. 14 ದೇವರ ರಾಜ್ಯದ ಶುಭವಾರ್ತೆಯನ್ನು ಲೋಕದಲ್ಲೆಲ್ಲಾ ಪ್ರತಿ ಜನಾಂಗಕ್ಕೂ ಸಾರಲಾಗುವುದು. ಆಗ ಅಂತ್ಯವು ಬರುತ್ತದೆ.

Read full chapter