Add parallel Print Page Options

ಯೇಸುವಿನ ಅಧಿಕಾರವನ್ನು ಕುರಿತು ಯೆಹೂದ್ಯ ನಾಯಕರ ಸಂಶಯ

(ಮತ್ತಾಯ 21:23-27; ಲೂಕ 20:1-8)

27 ಯೇಸು ಮತ್ತು ಆತನ ಶಿಷ್ಯರು ಜೆರುಸಲೇಮಿಗೆ ಮತ್ತೆ ಹೋದರು. ಯೇಸು ದೇವಾಲಯದಲ್ಲಿ ತಿರುಗಾಡುತ್ತಿದ್ದಾಗ, ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯನಾಯಕರು ಆತನ ಬಳಿಗೆ ಬಂದು, 28 “ಇವುಗಳನ್ನೆಲ್ಲ ಮಾಡಲು ನಿನಗೆ ಯಾವ ಅಧಿಕಾರವಿದೆ? ಈ ಅಧಿಕಾರವನ್ನು ನಿನಗೆ ಯಾರು ಕೊಟ್ಟರು? ನಮಗೆ ತಿಳಿಸು!” ಎಂದರು.

29 ಯೇಸು, “ನಾನೂ ನಿಮಗೊಂದು ಪ್ರಶ್ನೆಯನ್ನು ಕೇಳುತ್ತೇನೆ. ನೀವು ನನ್ನ ಪ್ರಶ್ನೆಗೆ ಉತ್ತರಿಸಿದರೆ ನಾನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತಿದ್ದೇನೆ ಎಂಬುದನ್ನು ನಿಮಗೆ ತಿಳಿಸುತ್ತೇನೆ. 30 ಯೋಹಾನನು ಜನರಿಗೆ ದೀಕ್ಷಾಸ್ನಾನ ಮಾಡಿಸಿದ್ದು ದೇವರಿಂದ ಬಂದ ಅಧಿಕಾರದಿಂದಲೋ ಅಥವಾ ಮನುಷ್ಯರಿಂದ ಬಂದ ಅಧಿಕಾರದಿಂದಲೋ? ನನಗೆ ತಿಳಿಸಿ!” ಎಂದನು.

31 ಯೆಹೂದ್ಯನಾಯಕರು ಈ ಪ್ರಶ್ನೆಯ ಬಗ್ಗೆ ಚರ್ಚಿಸಿ ಒಬ್ಬರಿಗೊಬ್ಬರು, “‘ಯೋಹಾನನು ದೀಕ್ಷಾಸ್ನಾನ ಕೊಟ್ಟದ್ದು ದೇವರಿಂದ ಬಂದ ಅಧಿಕಾರದಿಂದ’ ಎಂದು ನಾವು ಉತ್ತರಿಸಿದರೆ, ಆಗ ‘ಮತ್ತೆ ನೀವು ಏಕೆ ಯೋಹಾನನನ್ನು ನಂಬಲಿಲ್ಲ?’ ಎಂದು ಯೇಸು ಕೇಳುತ್ತಾನೆ. 32 ಆದರೆ ‘ಯೋಹಾನನು ದೀಕ್ಷಾಸ್ನಾನ ಮಾಡಿಸಿದ್ದು ಮನುಷ್ಯನಿಂದ ಬಂದ ಅಧಿಕಾರದಿಂದ’ ಎಂದು ಹೇಳಿದರೆ, ಆಗ ಜನರು ನಮ್ಮ ಮೇಲೆ ಕೋಪಗೊಳ್ಳುತ್ತಾರೆ” ಎಂದು ಮಾತಾಡಿಕೊಂಡರು. ಜನರೆಲ್ಲರೂ ಯೋಹಾನನನ್ನು ಒಬ್ಬ ಪ್ರವಾದಿಯೆಂದು ನಂಬಿದ್ದರಿಂದ ಅವರು ಜನರಿಗೆ ಭಯಪಟ್ಟರು.

33 ಆದಕಾರಣ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದು ಉತ್ತರಿಸಿದರು.

ಯೇಸು ಅವರಿಗೆ, “ಹಾಗಾದರೆ ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತಿದ್ದೇನೆಂದು ನಿಮಗೆ ಹೇಳುವುದಿಲ್ಲ” ಎಂದನು.

Read full chapter