ಮಾರ್ಕ 10:1-12
Kannada Holy Bible: Easy-to-Read Version
ವಿವಾಹವಿಚ್ಛೇದನದ ಬಗ್ಗೆ ಯೇಸುವಿನ ಉಪದೇಶ
(ಮತ್ತಾಯ 19:1-12)
10 ನಂತರ ಯೇಸು ಆ ಸ್ಥಳವನ್ನು ಬಿಟ್ಟು ಜುದೇಯ ಪ್ರಾಂತ್ಯಕ್ಕೆ ಹಾಗೂ ಜೋರ್ಡನ್ ನದಿಯ ಆಚೆದಡಕ್ಕೆ ಹೋದನು. ಅನೇಕ ಜನರು ಮತ್ತೆ ಆತನ ಬಳಿಗೆ ಬಂದರು. ಯೇಸು ಎಂದಿನಂತೆ ಆ ಜನರಿಗೆ ಉಪದೇಶಿಸಿದನು.
2 ಕೆಲವು ಫರಿಸಾಯರು ಯೇಸುವಿನ ಬಳಿಗೆ ಬಂದು ಆತನನ್ನು ಪರೀಕ್ಷಿಸಲು, “ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಸರಿಯೇ?” ಎಂದು ಕೇಳಿದರು.
3 ಯೇಸು, “ಮೋಶೆ ನಿಮಗೆ ಏನು ಆಜ್ಞಾಪಿಸಿದ್ದಾನೆ?” ಎಂದು ಉತ್ತರಿಸಿದನು.
4 ಫರಿಸಾಯರು, “ಒಬ್ಬನು ತನ್ನ ಹೆಂಡತಿಗೆ ವಿಚ್ಛೇದನ ಪತ್ರ ಬರೆದುಕೊಟ್ಟು ಆಕೆಯನ್ನು ಬಿಟ್ಟುಬಿಡಬಹುದೆಂದು ಮೋಶೆಯು ಹೇಳಿದ್ದಾನೆ” ಎಂದರು.[a]
5 ಯೇಸು, “ನಿಮ್ಮ ಮೊಂಡುತನದ ನಿಮಿತ್ತ ಮೋಶೆಯು ನಿಮಗೆ ಆ ಆಜ್ಞೆಯನ್ನು ಕೊಟ್ಟನು. 6 ಆದರೆ ದೇವರು ಪ್ರಪಂಚವನ್ನು ಸೃಷ್ಟಿಸಿದಾಗ, ‘ಮನುಷ್ಯರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ನಿರ್ಮಿಸಿದನು.’(A) 7 ‘ಆದಕಾರಣ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. 8 ಮತ್ತು ಅವರಿಬ್ಬರು ಒಂದೇ ಶರೀರವಾಗುವರು.’(B) ಆದ್ದರಿಂದ ಅವರು ಇಬ್ಬರಲ್ಲ, ಒಬ್ಬರೇ. 9 ಹೀಗಿರಲು ದೇವರು ಸೇರಿಸಿದ್ದನ್ನು ಮನುಷ್ಯನು ಅಗಲಿಸಬಾರದು” ಎಂದು ಹೇಳಿದನು.
10 ಶಿಷ್ಯರು ಮತ್ತು ಯೇಸು ಒಂದು ಮನೆಯಲ್ಲಿದ್ದಾಗ, ವಿವಾಹವಿಚ್ಛೇದನ ಪ್ರಶ್ನೆಯ ಬಗ್ಗೆ ಶಿಷ್ಯರು ಯೇಸುವನ್ನು ಮತ್ತೆ ಕೇಳಿದರು. 11 ಅದಕ್ಕೆ ಯೇಸು, “ತನ್ನ ಹೆಂಡತಿಯನ್ನು ಬಿಟ್ಟು, ಬೇರೆ ಸ್ತ್ರೀಯನ್ನು ಮದುವೆಯಾಗುವವನು ತನ್ನ ಹೆಂಡತಿಗೆ ದ್ರೋಹಮಾಡಿ ವ್ಯಭಿಚಾರಿಯಾಗಿದ್ದಾನೆ. 12 ತನ್ನ ಗಂಡನಿಗೆ ವಿಚ್ಛೇದನಪತ್ರ ಕೊಟ್ಟು ಬೇರೆ ಪುರುಷನನ್ನು ಮದುವೆಯಾಗುವ ಸ್ತ್ರೀಯೂ ವ್ಯಭಿಚಾರಿಣಿಯಾಗಿದ್ದಾಳೆ” ಎಂದು ಉತ್ತರಿಸಿದನು.
Read full chapterFootnotes
- 10:4 ನೋಡಿರಿ: ಧರ್ಮೋಪ. 24:1.
Kannada Holy Bible: Easy-to-Read Version. All rights reserved. © 1997 Bible League International