ಲೂಕ 7:18-35
Kannada Holy Bible: Easy-to-Read Version
ಯೋಹಾನನು ಯೇಸುವಿಗೆ ಕೇಳಿದ ಪ್ರಶ್ನೆ
(ಮತ್ತಾಯ 11:2-19)
18 ಯೋಹಾನನ ಶಿಷ್ಯರು ಈ ಸಂಗತಿಗಳನ್ನೆಲ್ಲಾ ಯೋಹಾನನಿಗೆ ತಿಳಿಸಿದರು. ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, 19 “ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?” ಎಂದು ಕೇಳುವುದಕ್ಕಾಗಿ ಅವರನ್ನು ಪ್ರಭುವಿನ (ಯೇಸುವಿನ) ಬಳಿಗೆ ಕಳುಹಿಸಿದನು.
20 ಆದ್ದರಿಂದ ಅವರು ಯೇಸುವಿನ ಬಳಿಗೆ ಬಂದು, “ಸ್ನಾನಿಕ ಯೋಹಾನನು ‘ಬರಬೇಕಾದವನು ನೀನೋ ಅಥವಾ ಬೇರೊಬ್ಬ ವ್ಯಕ್ತಿಗಾಗಿ ನಾವು ಕಾಯಬೇಕೋ?’ ಎಂದು ನಿನ್ನನ್ನು ಕೇಳುವುದಕ್ಕಾಗಿ ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾನೆ” ಎಂದು ಹೇಳಿದರು.
21 ಅದೇ ಸಮಯದಲ್ಲಿ, ಯೇಸು ಅನೇಕ ಜನರನ್ನು ಅವರವರ ಕಾಯಿಲೆಗಳಿಂದ, ರೋಗಗಳಿಂದ ಗುಣಪಡಿಸಿದನು. ದೆವ್ವಗಳಿಂದ ಪೀಡಿತರಾಗಿದ್ದವರನ್ನು ಬಿಡಿಸಿದನು. ಅನೇಕ ಕುರುಡರಿಗೆ ದೃಷ್ಟಿಯನ್ನು ಕೊಟ್ಟನು. 22 ಬಳಿಕ ಯೇಸು ಯೋಹಾನನ ಶಿಷ್ಯರಿಗೆ, “ನೀವು ಇಲ್ಲಿ ಕಂಡು ಕೇಳಿದ ಸಂಗತಿಗಳನ್ನು ಹೋಗಿ ಯೋಹಾನನಿಗೆ ತಿಳಿಸಿರಿ. ಕುರುಡರಿಗೆ ದೃಷ್ಟಿ ಬರುತ್ತದೆ, ಕುಂಟರು ಕಾಲನ್ನು ಪಡೆದು ನಡೆಯುತ್ತಾರೆ. ಕುಷ್ಠರೋಗಿಗಳು ಗುಣಹೊಂದುತ್ತಾರೆ. ಕಿವುಡರು ಕೇಳುತ್ತಾರೆ, ಸತ್ತವರಿಗೆ ಜೀವ ಬರುತ್ತದೆ ಮತ್ತು ದೇವರ ರಾಜ್ಯದ ಸುವಾರ್ತೆಯು ಬಡವರಿಗೆ ಕೊಡಲ್ಪಡುತ್ತದೆ. 23 ಸಂಶಯಪಡದೆ ನನ್ನನ್ನು ಸ್ವೀಕರಿಸಿಕೊಳ್ಳುವವನೇ ಧನ್ಯನು!” ಎಂದು ಹೇಳಿ ಕಳುಹಿಸಿದನು.
24 ಯೋಹಾನನ ಶಿಷ್ಯರು ಹೊರಟುಹೋದಾಗ, ಯೇಸು ಜನರಿಗೆ ಯೋಹಾನನ ಕುರಿತು ಹೇಳತೊಡಗಿ, “ಏನನ್ನು ನೋಡುವುದಕ್ಕೆ ನೀವು ಮರಳುಗಾಡಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ? 25 ನೀವು ಏನನ್ನು ನೋಡಲು ಹೊರಗೆ ಹೋದಿರಿ? ನಯವಾದ ಉಡುಪನ್ನು ಧರಿಸಿರುವ ಮನುಷ್ಯನನ್ನೋ? ಇಲ್ಲ. ನಯವಾದ ಮತ್ತು ಚಂದವಾದ ಉಡುಪನ್ನು ಧರಿಸಿದವರು ಅರಮನೆಗಳಲ್ಲಿ ವಾಸಮಾಡುತ್ತಾರೆ. 26 ನಿಜವಾಗಿಯೂ, ನೀವು ಏನನ್ನು ನೋಡಲು ಹೊರಗೆ ಹೋದಿರಿ? ಪ್ರವಾದಿಯನ್ನೋ? ಹೌದು. ನಾನು ನಿಮಗೆ ಹೇಳುವುದೇನೆಂದರೆ, ಯೋಹಾನನು ಪ್ರವಾದಿಗಿಂತಲೂ ಶ್ರೇಷ್ಠನಾಗಿದ್ದಾನೆ.
27 ‘ಇಗೋ! ನಾನು (ದೇವರು) ನನ್ನ ದೂತನನ್ನು[a] ನಿನ್ನ ಮುಂದೆ ಕಳುಹಿಸುತ್ತೇನೆ.
ಅವನು ನಿನಗೋಸ್ಕರ ದಾರಿಯನ್ನು ಸಿದ್ಧಮಾಡುವನು’(A)
ಎಂದು ಯೋಹಾನನ ಕುರಿತು ಬರೆದಿದೆ. 28 ಈ ಲೋಕದಲ್ಲಿ ಹುಟ್ಟಿದ ಎಲ್ಲಾ ಮನುಷ್ಯರಲ್ಲಿ ಯೋಹಾನನೇ ದೊಡ್ಡವನು ಎಂದು ನಾನು ನಿಮಗೆ ಹೇಳುತ್ತೇನೆ. ಆದರೂ ದೇವರ ರಾಜ್ಯದಲ್ಲಿರುವ ಕನಿಷ್ಠನು ಸಹ ಅವನಿಗಿಂತ ಶ್ರೇಷ್ಠನೇ ಸರಿ” ಎಂದನು.
29 ಯೋಹಾನನು ಉಪದೇಶಿಸಿದ ದೇವರ ವಾಕ್ಯವನ್ನು ಜನರೆಲ್ಲರೂ ಸ್ವೀಕರಿಸಿಕೊಂಡರು. ಸುಂಕವಸೂಲಿಗಾರರೂ ಸ್ವೀಕರಿಸಿಕೊಂಡರು. ಇವರೆಲ್ಲರೂ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡರು. 30 ಆದರೆ ಫರಿಸಾಯರು[b] ಮತ್ತು ಧರ್ಮೋಪದೇಶಕರು ದೇವರ ಯೋಜನೆಯನ್ನು ತಿರಸ್ಕರಿಸಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲಿಲ್ಲ.
31 “ಈ ಕಾಲದ ಜನರ ಬಗ್ಗೆ ನಾನು ಏನು ಹೇಳಲಿ? ನಾನು ಅವರನ್ನು ಯಾವುದಕ್ಕೆ ಹೋಲಿಸಲಿ? ಅವರು ಯಾರನ್ನು ಹೋಲುತ್ತಾರೆ? 32 ಈ ಕಾಲದ ಜನರು ಮಾರುಕಟ್ಟೆಯಲ್ಲಿ ಕುಳಿತುಕೊಂಡಿರುವ ಮಕ್ಕಳಿಗೆ ಹೋಲುತ್ತಾರೆ. ಒಂದು ಗುಂಪಿನ ಮಕ್ಕಳು ಇನ್ನೊಂದು ಗುಂಪಿನ ಮಕ್ಕಳನ್ನು ಕರೆದು,
‘ನಾವು ನಿಮಗೋಸ್ಕರ ವಾದ್ಯಬಾರಿಸಿದೆವು,
ಆದರೆ ನೀವು ಕುಣಿಯಲಿಲ್ಲ;
ನಾವು ದುಃಖದ ಹಾಡನ್ನು ಹಾಡಿದೆವು,
ಆದರೆ ನೀವು ಅಳಲಿಲ್ಲ’
ಎಂದು ಹೇಳುತ್ತಾರೆ. 33 ಸ್ನಾನಿಕ ಯೋಹಾನನು ಬಂದನು. ಅವನು ಇತರರಂತೆ ತಿನ್ನಲಿಲ್ಲ ಅಥವಾ ದ್ರಾಕ್ಷಾರಸವನ್ನು ಕುಡಿಯಲಿಲ್ಲ. ಆದರೆ ನೀವು, ‘ಅವನಿಗೆ ದೆವ್ವ ಹಿಡಿದಿದೆ’ ಎಂದು ಹೇಳುತ್ತೀರಿ. 34 ಮನುಷ್ಯಕುಮಾರನು ಬಂದನು. ಅವನು ಇತರ ಜನರಂತೆ ಊಟಮಾಡುತ್ತಾನೆ ಮತ್ತು ದ್ರಾಕ್ಷಾರಸವನ್ನು ಕುಡಿಯುತ್ತಾನೆ. ಆದರೆ ನೀವು, ‘ನೋಡಿರಿ! ಅವನೊಬ್ಬ ಹೊಟ್ಟೆಬಾಕ, ಕುಡುಕ! ಸುಂಕವಸೂಲಿಗಾರರು ಮತ್ತು ಇತರ ಕೆಟ್ಟಜನರೇ ಅವನ ಸ್ನೇಹಿತರು!’ ಎನ್ನುತ್ತೀರಿ. 35 ಆದರೆ ಜ್ಞಾನವು ತನ್ನ ಕಾರ್ಯಗಳಿಂದಲೇ ತನ್ನನ್ನು ಸಮರ್ಥಿಸಿಕೊಳ್ಳುವುದು” ಎಂದು ಹೇಳಿದನು.
Read full chapterKannada Holy Bible: Easy-to-Read Version. All rights reserved. © 1997 Bible League International