Add parallel Print Page Options

ಯೇಸುವನ್ನು ಶಿಲುಬೆಗೇರಿಸಿದರು

(ಮತ್ತಾಯ 27:32-44; ಮಾರ್ಕ 15:21-32; ಯೋಹಾನ 19:17-19)

26 ಸೈನಿಕರು ಯೇಸುವನ್ನು ಕೊಲ್ಲಲು ಕರೆದೊಯ್ಯುವಾಗ ಹೊಲದಿಂದ ಪಟ್ಟಣದೊಳಗೆ ಬರುತ್ತಿದ್ದ ಸೀಮೋನ ಎಂಬವನನ್ನು ಕಂಡರು. ಸೀಮೋನನು ಸಿರೇನ್ ಪಟ್ಟಣದವನು. ಯೇಸುವಿನ ಶಿಲುಬೆಯನ್ನು ಹೊತ್ತುಕೊಂಡು ಯೇಸುವಿನ ಹಿಂದೆ ಬರುವಂತೆ ಸೈನಿಕರು ಸೀಮೋನನನ್ನು ಬಲವಂತ ಮಾಡಿದರು.

27 ಅನೇಕಾನೇಕ ಜನರು ಯೇಸುವನ್ನು ಹಿಂಬಾಲಿಸಿದರು. ದೊಡ್ಡಗುಂಪಾಗಿ ಸೇರಿದ್ದ ಸ್ತ್ರೀಯರು ಯೇಸುವಿಗಾಗಿ ದುಃಖಪಟ್ಟು ಎದೆ ಬಡಿದುಕೊಂಡು ಗೋಳಾಡುತ್ತಿದ್ದರು. 28 ಆದರೆ ಯೇಸು, ಆ ಸ್ತ್ರೀಯರಿಗೆ, “ಜೆರುಸಲೇಮಿನ ಸ್ತ್ರೀಯರೇ, ನನಗಾಗಿ ಅಳಬೇಡಿರಿ. ನಿಮಗಾಗಿಯೂ ನಿಮ್ಮ ಮಕ್ಕಳಿಗಾಗಿಯೂ ಅಳಿರಿ! 29 ‘ಬಂಜೆಯರೇ ಭಾಗ್ಯವಂತರು! ಹೆರದವಳೇ ಹಾಲುಕುಡಿಸದವಳೇ ಭಾಗ್ಯವಂತಳು’ ಎಂದು ಜನರು ಹೇಳುವ ಸಮಯ ಬರುತ್ತದೆ. 30 ಆಗ ಜನರು ಬೆಟ್ಟಕ್ಕೆ, ‘ನಮ್ಮ ಮೇಲೆ ಬೀಳು!’ ಎಂತಲೂ ಗುಡ್ಡಗಳಿಗೆ, ‘ನಮ್ಮನ್ನು ಮುಚ್ಚಿಕೊಳ್ಳಿರಿ!’(A) ಎಂತಲೂ ಕೂಗಿಕೊಳ್ಳುವರು. 31 ಜೀವನ ಸುಖಕರವಾಗಿರುವಾಗ ಜನರು ಈ ರೀತಿ ವರ್ತಿಸಿದರೆ, ಜೀವನ ಕಷ್ಟಕರವಾದಾಗ ಏನು ಮಾಡುವರು?”[a] ಎಂದು ಹೇಳಿದನು.

32 ಯೇಸುವಿನ ಸಂಗಡ ಇಬ್ಬರು ದುಷ್ಕರ್ಮಿಗಳನ್ನು ಕೊಲ್ಲಬೇಕೆಂದು ಅವರು ನಿರ್ಧರಿಸಿದರು. 33 ಯೇಸುವನ್ನು ಮತ್ತು ಇಬ್ಬರು ದುಷ್ಕರ್ಮಿಗಳನ್ನು ಅವರು “ಕಪಾಲ”ವೆಂಬ ಸ್ಥಳಕ್ಕೆ ಕರೆದುಕೊಂಡು ಹೋದರು. ಅಲ್ಲಿ ಸೈನಿಕರು ಯೇಸುವನ್ನೂ ಆ ದುಷ್ಕರ್ಮಿಗಳನ್ನೂ ಶಿಲುಬೆಗಳಿಗೆ ಜಡಿದರು. ಒಬ್ಬನನ್ನು ಯೇಸುವಿನ ಬಲಗಡೆಯಲ್ಲಿಯೂ ಇನ್ನೊಬ್ಬನನ್ನು ಯೇಸುವಿನ ಎಡಗಡೆಯಲ್ಲಿಯೂ ಹಾಕಿದರು.

34 ಯೇಸು, “ತಂದೆಯೇ, ಇವರನ್ನು ಕ್ಷಮಿಸು. ಇವರಿಗೆ ತಾವು ಮಾಡುತ್ತಿರುವುದು ತಿಳಿದಿಲ್ಲ” ಎಂದು ಪ್ರಾರ್ಥಿಸಿದನು.

ಸೈನಿಕರು ಚೀಟುಹಾಕಿ ಯೇಸುವಿನ ಬಟ್ಟೆಗಳು ಯಾರಿಗೆ ಸೇರಬೇಕೆಂದು ತೀರ್ಮಾನಿಸಿದರು. 35 ಜನರು ನೋಡುತ್ತಾ ಅಲ್ಲಿ ನಿಂತಿದ್ದರು. ಯೆಹೂದ್ಯನಾಯಕರು ಯೇಸುವನ್ನು ನೋಡಿ ಗೇಲಿಮಾಡಿದರು. ಅವರು, “ಇವನು ದೇವರಿಂದ ಆರಿಸಲ್ಪಟ್ಟ ಕ್ರಿಸ್ತನಾಗಿದ್ದರೆ ತನ್ನನ್ನು ರಕ್ಷಿಸಿಕೊಳ್ಳಲಿ. ಇವನು ಬೇರೆಯವರನ್ನು ರಕ್ಷಿಸಿದನಲ್ಲವೇ?” ಅಂದರು.

36 ಸೈನಿಕರೂ ಯೇಸುವನ್ನು ಗೇಲಿಮಾಡಿದರು. ಅವರು ಯೇಸುವಿನ ಬಳಿಗೆ ಬಂದು, ಸ್ವಲ್ಪ ಹುಳಿದ್ರಾಕ್ಷಾರಸವನ್ನು ನೀಡಿ, 37 “ನೀನು ಯೆಹೂದ್ಯರ ಅರಸನಾಗಿದ್ದರೆ, ನಿನ್ನನ್ನು ರಕ್ಷಿಸಿಕೊ!” ಎಂದು ಹೇಳಿದರು. 38 (ಶಿಲುಬೆಯ ಮೇಲ್ಭಾಗದಲ್ಲಿ, “ಈತನು ಯೆಹೂದ್ಯರ ಅರಸನು” ಎಂದು ಬರೆಯಲಾಗಿತ್ತು.)

39 ದುಷ್ಕರ್ಮಿಗಳಲ್ಲೊಬ್ಬನು ಯೇಸುವನ್ನು ದೂಷಿಸಿ, “ನೀನು ಕ್ರಿಸ್ತನಲ್ಲವೋ? ಹಾಗಾದರೆ ನಿನ್ನನ್ನು ರಕ್ಷಿಸಿಕೊ! ನಮ್ಮನ್ನೂ ರಕ್ಷಿಸು!” ಅಂದನು.

40 ಆದರೆ ಇನ್ನೊಬ್ಬ ದುಷ್ಕರ್ಮಿಯು ಅವನನ್ನು ಗದರಿಸಿ, “ನೀನು ದೇವರಿಗೆ ಹೆದರಬೇಕು! ನಾವೆಲ್ಲರೂ ಬೇಗನೆ ಸಾಯುವೆವು! 41 ನೀನೂ ನಾನೂ ಅಪರಾಧಿಗಳಾಗಿದ್ದೇವೆ. ನಾವು ತಪ್ಪು ಮಾಡಿದ್ದರಿಂದ ಶಿಕ್ಷಿಸಲ್ಪಡಬೇಕು. ಆದರೆ ಈ ಮನುಷ್ಯನು (ಯೇಸು) ಯಾವ ತಪ್ಪನ್ನೂ ಮಾಡಲಿಲ್ಲ!” ಎಂದು ಹೇಳಿದನು. 42 ಬಳಿಕ ಆ ದುಷ್ಕರ್ಮಿಯು ಆತನಿಗೆ, “ಯೇಸುವೇ ನೀನು ನಿನ್ನ ರಾಜ್ಯವನ್ನು ಸ್ಥಾಪಿಸುವಾಗ ನನ್ನನ್ನು ನೆನಸಿಕೊ!” ಎಂದು ಹೇಳಿದನು.

43 ಆಗ ಯೇಸು ಅವನಿಗೆ, “ಕೇಳು! ನಾನು ಸತ್ಯವನ್ನೇ ಹೇಳುತ್ತೇನೆ. ಈ ದಿನವೇ ನೀನು ನನ್ನ ಸಂಗಡ ಪರದೈಸಿನಲ್ಲಿರುವಿ” ಎಂದು ಹೇಳಿದನು.

Read full chapter

Footnotes

  1. 23:31 ಜೀವನ … ಮಾಡುವರು ಅಕ್ಷರಶಃ, “ನೀವು ಇದನ್ನು ಮರ ಹಸಿರಾಗಿರುವಾಗ ಮಾಡಿದರೆ, ಒಣಗಿದಲ್ಲಿ ಏನಾಗುವುದು.”