ಆದಿಕಾಂಡ 1:1-13
Kannada Holy Bible: Easy-to-Read Version
ಭೂಲೋಕದ ಸೃಷ್ಟಿ
1 ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು. 2 ಭೂಮಿಯು ಅಸ್ತವ್ಯಸ್ತವಾಗಿಯೂ ಬರಿದಾಗಿಯೂ ಇತ್ತು. ಭೂಮಿಯ ಮೇಲೆ ಏನೂ ಇರಲಿಲ್ಲ. ಸಾಗರದ ಮೇಲೆ ಕತ್ತಲು ಕವಿದಿತ್ತು. ದೇವರಾತ್ಮನು ಜಲಸಮೂಹಗಳ ಮೇಲೆ ಚಲಿಸುತ್ತಿದ್ದನು.[a]
ಮೊದಲನೆ ದಿನ—ಬೆಳಕು
3 ಆಗ ದೇವರು, “ಬೆಳಕಾಗಲಿ” ಅನ್ನಲು ಬೆಳಕಾಯಿತು. 4 ದೇವರಿಗೆ ಬೆಳಕು ಒಳ್ಳೆಯದಾಗಿ ಕಂಡಿತು. ಬಳಿಕ ದೇವರು ಕತ್ತಲೆಯಿಂದ ಬೆಳಕನ್ನು ಬೇರ್ಪಡಿಸಿದನು. 5 ದೇವರು ಬೆಳಕಿಗೆ ಹಗಲೆಂದೂ ಕತ್ತಲೆಗೆ ರಾತ್ರಿಯೆಂದೂ ಹೆಸರಿಟ್ಟನು.
ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಮೊದಲನೆ ದಿನವಾಯಿತು.
ಎರಡನೆ ದಿನ—ಆಕಾಶ
6 ಬಳಿಕ ದೇವರು, “ಜಲಸಮೂಹಗಳ ನಡುವೆ ಗುಮಟ[b] ಉಂಟಾಗಲಿ. ಅದು ಕೆಳಭಾಗದ ನೀರುಗಳನ್ನು ಮೇಲ್ಭಾಗದ ನೀರುಗಳಿಂದ ಬೇರ್ಪಡಿಸಲಿ” ಅಂದನು. 7 ಹೀಗೆ ದೇವರು ಗುಮಟವನ್ನು ಉಂಟುಮಾಡಿ ಅದರ ಕೆಳಭಾಗದ ನೀರುಗಳನ್ನು ಅದರ ಮೇಲ್ಭಾಗದ ನೀರುಗಳಿಂದ ಬೇರ್ಪಡಿಸಿದನು. 8 ದೇವರು ಆ ಗುಮಟಕ್ಕೆ ಆಕಾಶವೆಂದು ಹೆಸರಿಟ್ಟನು. ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಎರಡನೆ ದಿನವಾಯಿತು.
ಮೂರನೆ ದಿನ—ಒಣನೆಲ ಮತ್ತು ಸಸ್ಯಗಳು
9 ಬಳಿಕ ದೇವರು, “ಆಕಾಶದ ಕೆಳಗಿರುವ ನೀರೆಲ್ಲಾ ಒಟ್ಟಿಗೆ ಸೇರಿಕೊಂಡು ಒಣನೆಲವು ಕಾಣಿಸಲಿ” ಅಂದನು. ಹಾಗೆಯೇ ಆಯಿತು. 10 ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟಿಗೆ ಸೇರಿಕೊಂಡಿದ್ದ ನೀರಿಗೆ ಸಮುದ್ರವೆಂದೂ ಹೆಸರಿಟ್ಟನು. ದೇವರಿಗೆ ಇವು ಒಳ್ಳೆಯದಾಗಿ ಕಂಡವು.
11 ಬಳಿಕ ದೇವರು, “ಭೂಮಿಯು ಸಸ್ಯರಾಶಿಯನ್ನು ಬೆಳೆಸಲಿ; ಬೀಜಗಳನ್ನು ಫಲಿಸುವ ಸಸ್ಯಗಳು ಬೆಳೆಯಲಿ; ತನ್ನತನ್ನ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣುಗಳನ್ನು ಫಲಿಸುವ ಹಣ್ಣಿನ ಮರಗಳು ಭೂಮಿಯ ಮೇಲೆ ಬೆಳೆಯಲಿ” ಅಂದನು. ಹಾಗೆಯೇ ಆಯಿತು. 12 ಸಸಿಗಳು ಭೂಮಿಯ ಮೇಲೆ ಬೆಳೆದವು. ಅವುಗಳಲ್ಲಿ ಬೀಜ ಫಲಿಸುವ ಗಿಡಗಳೂ ಬೀಜವುಳ್ಳ ಹಣ್ಣುಗಳನ್ನು ಫಲಿಸುವ ಮರಗಳೂ ಇದ್ದವು. ಪ್ರತಿಯೊಂದು ಸಸಿಯು ತನ್ನದೇ ಆದ ರೀತಿಯ ಬೀಜವನ್ನು ಫಲಿಸಿತು. ದೇವರಿಗೆ ಇವು ಒಳ್ಳೆಯದಾಗಿ ಕಂಡವು.
13 ಹೀಗೆ ಸಾಯಂಕಾಲವೂ ಮುಂಜಾನೆಯೂ ಆಗಿ ಮೂರನೆ ದಿನವಾಯಿತು.
Read full chapterKannada Holy Bible: Easy-to-Read Version. All rights reserved. © 1997 Bible League International