Revised Common Lectionary (Semicontinuous)
ಪ್ರಾರ್ಥನೆ. ರಚನೆಗಾರ: ದಾವೀದ.
17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
2 ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
3 ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
4 ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
5 ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
6 ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
ಆದ್ದರಿಂದ ಈಗಲೂ ನನಗೆ ಕಿವಿಗೊಡು.
7 ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
15 ನಾನು ನ್ಯಾಯಕ್ಕಾಗಿ ಪ್ರಾರ್ಥಿಸಿದ್ದರಿಂದ ನನಗೆ ನಿನ್ನ ಮುಖದ ದರ್ಶನವಾಗುವುದು.
ಎಚ್ಚೆತ್ತಾಗ ನಿನ್ನ ಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.
ಯಾಕೋಬನ ಪಲಾಯನ
31 ಒಂದು ದಿನ ಲಾಬಾನನ ಗಂಡುಮಕ್ಕಳು ಮಾತಾಡುತ್ತಿರುವುದನ್ನು ಯಾಕೋಬನು ಕೇಳಿಸಿಕೊಂಡನು. ಅವರು, “ನಮ್ಮ ತಂದೆ ಹೊಂದಿದ್ದ ಪ್ರತಿಯೊಂದನ್ನೂ ಯಾಕೋಬನು ತೆಗೆದುಕೊಂಡು ಐಶ್ವರ್ಯವಂತನಾಗಿದ್ದಾನೆ; ಅವನು ನಮ್ಮ ತಂದೆಯ ಐಶ್ವರ್ಯವನ್ನೆಲ್ಲ ತೆಗೆದುಕೊಂಡಿದ್ದಾನೆ” ಎಂದು ಹೇಳುತ್ತಿದ್ದರು. 2 ಲಾಬಾನನು ಮೊದಲಿನಂತೆ ಸ್ನೇಹದಿಂದ ಇಲ್ಲದಿರುವುದನ್ನು ಸಹ ಯಾಕೋಬನು ಗಮನಿಸಿದನು. 3 ಯೆಹೋವನು ಯಾಕೋಬನಿಗೆ, “ನಿನ್ನ ಪೂರ್ವಿಕರು ವಾಸಿಸಿದ ನಿನ್ನ ಸ್ವಂತ ಸ್ಥಳಕ್ಕೆ ಹಿಂತಿರುಗಿ ಹೋಗು. ನಾನು ನಿನ್ನ ಸಂಗಡವಿರುತ್ತೇನೆ” ಎಂದು ಹೇಳಿದನು.
4 ಆದ್ದರಿಂದ ಯಾಕೋಬನು ರಾಹೇಲಳಿಗೆ ಮತ್ತು ಲೇಯಳಿಗೆ ತನ್ನ ಆಡುಕುರಿಗಳು ಮೇಯುತ್ತಿರುವ ಹೊಲದಲ್ಲಿ ತನ್ನನ್ನು ಭೇಟಿಯಾಗಬೇಕೆಂದು ಹೇಳಿದನು. 5 ಯಾಕೋಬನು, ರಾಹೇಲಳಿಗೆ ಮತ್ತು ಲೇಯಾಳಿಗೆ, “ನಿಮ್ಮ ತಂದೆ ನನ್ನ ಮೇಲೆ ಕೋಪದಿಂದಿರುವುದನ್ನು ನಾನು ಗಮನಿಸಿದ್ದೇನೆ. ಮೊದಲು ಅವನು ನನ್ನೊಂದಿಗೆ ಸ್ನೇಹದಿಂದಿದ್ದನು. ಆದರೆ ಈಗ ಅವನು ಸ್ನೇಹದಿಂದಿಲ್ಲ. ಆದರೆ ನನ್ನ ತಂದೆಯ ದೇವರು ನನ್ನೊಂದಿಗಿದ್ದಾನೆ. 6 ನಿಮ್ಮಿಬ್ಬರಿಗೂ ತಿಳಿದಿರುವಂತೆ, ನಾನು ನಿಮ್ಮ ತಂದೆಗಾಗಿ ನನ್ನಿಂದಾದಷ್ಟು ಕಷ್ಟಪಟ್ಟು ದುಡಿದಿದ್ದೇನೆ. 7 ಆದರೆ ನಿಮ್ಮ ತಂದೆ ನನಗೆ ಮೋಸ ಮಾಡಿದನು. ನಿಮ್ಮ ತಂದೆ ನನ್ನ ಸಂಬಳವನ್ನು ಹತ್ತು ಸಲ ಬದಲಾಯಿಸಿದನು. ಆದರೆ ಆ ಸಮಯದಲ್ಲೆಲ್ಲ ದೇವರು ನನ್ನನ್ನು ಲಾಬಾನನ ಎಲ್ಲಾ ಮೋಸಗಳಿಂದ ಕಾಪಾಡಿದನು.
8 “ಒಂದು ಸಲ ಲಾಬಾನನು, ‘ಚುಕ್ಕೆಯಿರುವ ಆಡುಕುರಿಗಳನ್ನೆಲ್ಲ ನೀನು ಇಟ್ಟುಕೊಳ್ಳಬಹುದು. ಇದೇ ನಿನಗೆ ಸಂಬಳ’ ಎಂದು ಹೇಳಿದನು. ಅವನು ಹೀಗೆ ಹೇಳಿದ ಮೇಲೆ ಎಲ್ಲಾ ಆಡುಕುರಿಗಳು ಚುಕ್ಕೆಯಿರುವ ಮರಿಗಳನ್ನು ಈಯ್ದವು. ಆದ್ದರಿಂದ ಅವೆಲ್ಲ ನನ್ನದಾದವು. ಆಗ ಲಾಬಾನನು, ‘ನಾನು ಚುಕ್ಕೆಯಿರುವ ಆಡುಕುರಿಗಳನ್ನು ತೆಗೆದುಕೊಳ್ಳುವೆ. ನೀನು ಮಚ್ಚೆಯಿರುವ ಆಡುಕುರಿಗಳನ್ನು ತೆಗೆದುಕೊಳ್ಳಬಹುದು. ಅದೇ ನಿನಗೆ ಸಂಬಳ’ ಎಂದು ಹೇಳಿದನು. ಅವನು ಹೀಗೆ ಹೇಳಿದ ಮೇಲೆ, ಎಲ್ಲಾ ಆಡುಕುರಿಗಳು ಮಚ್ಚೆಯಿರುವ ಮರಿಗಳನ್ನು ಈಯ್ದವು. 9 ಹೀಗೆ ದೇವರು ನಿಮ್ಮ ತಂದೆಯಿಂದ ಆಡುಕುರಿಗಳನ್ನು ತೆಗೆದುಕೊಂಡು ಅವುಗಳನ್ನು ನನಗೆ ಕೊಟ್ಟನು.
10 “ಪ್ರಾಣಿಗಳು ಸಂಗಮಿಸುವಾಗ ನನಗೆ ಒಂದು ಕನಸಾಯಿತು. ಸಂಗಮಿಸುತ್ತಿದ್ದ ಹೋತಗಳೆಲ್ಲ ಚುಕ್ಕೆಗಳನ್ನು ಮತ್ತು ಮಚ್ಚೆಗಳನ್ನು ಹೊಂದಿದ್ದವು. 11 ದೇವದೂತನು ಕನಸಿನಲ್ಲಿ ನನ್ನ ಚೊತೆ ಮಾತಾಡಿ ‘ಯಾಕೋಬನೇ’ ಎಂದು ಕರೆದನು.
“ನಾನು ‘ಇಗೋ ಇದ್ದೇನೆ’ ಎಂದು ಉತ್ತರಿಸಿದೆ.
12 “ದೇವದೂತನು ನನಗೆ, ‘ನೋಡು ಚುಕ್ಕೆಮಚ್ಚೆಗಳಿರುವ ಆಡುಕುರಿಗಳು ಮಾತ್ರ ಸಂಗಮಿಸುತ್ತವೆ. ಹೀಗಾಗುವಂತೆ ನಾನೇ ಮಾಡಿರುವೆನು. ನಿನಗೆ ಲಾಬಾನನು ಮಾಡುತ್ತಿರುವ ಅನ್ಯಾಯಗಳನ್ನೆಲ್ಲ ನಾನು ನೋಡಿರುವೆನು. ಆದ್ದರಿಂದ ಹುಟ್ಟುವ ಮರಿಗಳೆಲ್ಲ ನಿನ್ನದಾಗುವಂತೆ ನಾನೇ ಮಾಡಿದ್ದೇನೆ. 13 ಬೇತೇಲಿನಲ್ಲಿ ನಿನ್ನ ಬಳಿಗೆ ಬಂದಿದ್ದ ದೇವರು ನಾನೇ. ಆ ಸ್ಥಳದಲ್ಲಿ ನೀನು ಒಂದು ಯಜ್ಞವೇದಿಕೆಯನ್ನು ಕಟ್ಟಿದೆ. ನೀನು ಯಜ್ಞವೇದಿಕೆಯ ಮೇಲೆ ಆಲಿವ್ ಎಣ್ಣೆಯನ್ನು ಸುರಿದು ನನಗೆ ಒಂದು ಪ್ರಮಾಣವನ್ನು ಮಾಡಿದೆ. ಈಗ ನೀನು ನಿನ್ನ ಹುಟ್ಟುಸ್ಥಳಕ್ಕೆ ಹಿಂತಿರುಗಿ ಹೋಗಬೇಕೆಂಬುದು ನನ್ನ ಅಪೇಕ್ಷೆ’ ಎಂದು ತಿಳಿಸಿದನು” ಎಂಬುದಾಗಿ ಹೇಳಿದನು.
14 ರಾಹೇಲಳು ಮತ್ತು ಲೇಯಳು ಯಾಕೋಬನಿಗೆ, “ನಮ್ಮ ತಂದೆ ಸಾಯುವಾಗ ನಮಗೆ ಕೊಡಲು ಅವನಲ್ಲಿ ಏನೂ ಇಲ್ಲ. 15 ಅವನು ನಮ್ಮನ್ನು ಅನ್ಯರಂತೆ ಕಂಡನು; ಅವನು ನಮ್ಮನ್ನು ನಿನಗೆ ಮಾರಿದ್ದಾನೆ; ನಮ್ಮ ಐಶ್ವರ್ಯವನ್ನೆಲ್ಲ ಅವನು ಉಪಯೋಗಿಸಿದನು. 16 ದೇವರು ಈ ಐಶ್ವರ್ಯವನ್ನೆಲ್ಲ ನಮ್ಮ ತಂದೆಯಿಂದ ತೆಗೆದುಕೊಂಡಿದ್ದಾನೆ. ಈಗ ಅದು ನಮಗೂ ನಮ್ಮ ಮಕ್ಕಳಿಗೂ ಸೇರಿದೆ. ಆದ್ದರಿಂದ ದೇವರು ನಿನಗೆ ಹೇಳಿದಂತೆಯೇ ಮಾಡು” ಅಂದರು.
17 ಆದ್ದರಿಂದ ಯಾಕೋಬನು ತನ್ನ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿದನು. ಅವನು ತನ್ನ ಗಂಡುಮಕ್ಕಳನ್ನು ಮತ್ತು ಹೆಂಡತಿಯರನ್ನು ಒಂಟೆಗಳ ಮೇಲೆ ಕುಳ್ಳಿರಿಸಿದನು. 18 ನಂತರ ಅವರೆಲ್ಲರೂ, ಯಾಕೋಬನ ತಂದೆ ವಾಸಿಸಿದ ಸ್ಥಳವಾದ ಕಾನಾನಿಗೆ ಮರಳಿ ಪ್ರಯಾಣ ಬೆಳೆಸಿದರು. ಯಾಕೋಬನು ಹೊಂದಿದ್ದ ಎಲ್ಲಾ ಆಡುಕುರಿಗಳ ಮಂದೆಗಳು ಅವರ ಮುಂದೆ ನಡೆದವು. ಅವನು ಪದ್ದನ್‌ಅರಾಮಿನಲ್ಲಿದ್ದಾಗ ಹೊಂದಿಕೊಂಡಿದ್ದ ಪ್ರತಿಯೊಂದನ್ನೂ ಅವರು ತೆಗೆದುಕೊಂಡು ಹೋದರು.
19 ಆ ಸಮಯದಲ್ಲಿ ಲಾಬಾನನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸಲು ಹೋಗಿದ್ದನು. ಅವನು ಇಲ್ಲದಿದ್ದಾಗ, ರಾಹೇಲಳು ಅವನ ಮನೆಯೊಳಗೆ ಹೋಗಿ, ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
20 ಅರಾಮ್ಯನಾದ ಲಾಬಾನನಿಗೆ ಯಾಕೋಬನು ಮೋಸ ಮಾಡಿದನು. ತಾನು ಹೋಗುತ್ತಿರುವುದಾಗಿ ಯಾಕೋಬನು ಅವನಿಗೆ ತಿಳಿಸಲಿಲ್ಲ. 21 ಯಾಕೋಬನು ತನ್ನ ಕುಟುಂಬವನ್ನು ಕರೆದುಕೊಂಡು, ತನ್ನ ಪ್ರತಿಯೊಂದು ಸ್ವತ್ತನ್ನು ತೆಗೆದುಕೊಂಡು ಬೇಗನೆ ಅಲ್ಲಿಂದ ಹೊರಟನು. ಅವರು ಯೂಫ್ರೇಟೀಸ್ ಮಹಾನದಿಯನ್ನು ದಾಟಿ, ಬೆಟ್ಟಗಳ ಸೀಮೆಯಿಂದ ಗಿಲ್ಯಾದ್ ದೇಶದ ಕಡೆಗೆ ಪ್ರಯಾಣ ಮಾಡಿದರು.
ಪ್ರಾರ್ಥನೆಯ ಪ್ರತಿಫಲ
(ಲೂಕ 11:9-13)
7 “ಬೇಡಿಕೊಳ್ಳಿರಿ, ಆಗ ದೇವರು ನಿಮಗೆ ಕೊಡುತ್ತಾನೆ. ಹುಡುಕಿರಿ, ಆಗ ನೀವು ಕಂಡುಕೊಳ್ಳುವಿರಿ. ಬಾಗಿಲು ತಟ್ಟಿರಿ, ಆಗ ಅದು ನಿಮಗೆ ತೆರೆಯುವುದು. 8 ಹೌದು, ಕೇಳುತ್ತಲೇ ಇರುವವನು ಪಡೆದುಕೊಳ್ಳುತ್ತಾನೆ, ಹುಡುಕುತ್ತಲೇ ಇರುವವನು ಕಂಡುಕೊಳ್ಳುತ್ತಾನೆ, ತಟ್ಟುತ್ತಲೇ ಇರುವವನಿಗೆ ಬಾಗಿಲು ತೆರೆಯುತ್ತದೆ.
9 “ನಿಮ್ಮ ಮಗನು ರೊಟ್ಟಿಯನ್ನು ಕೇಳಿದರೆ ಕಲ್ಲನ್ನು ಕೊಡುವಿರೋ? 10 ಮೀನನ್ನು ಕೇಳಿದರೆ, ಹಾವನ್ನು ಕೊಡುವಿರೋ? 11 ನೀವು ದೇವರಂತೆ ಒಳ್ಳೆಯವರಲ್ಲ, ಕೆಟ್ಟವರು. ಆದರೂ ನಿಮ್ಮ ಮಕ್ಕಳಿಗೆ ಒಳ್ಳೆಯ ವಸ್ತುಗಳನ್ನು ಕೊಡಬೇಕೆಂಬುದು ನಿಮಗೆ ತಿಳಿದಿದೆ. ಹೀಗಿರಲಾಗಿ ಪರಲೋಕದ ನಿಮ್ಮ ತಂದೆಯು ಸಹ ತನ್ನನ್ನು ಕೇಳುವವರಿಗೆ ಒಳ್ಳೆಯ ವಸ್ತುಗಳನ್ನು ನಿಶ್ಚಯವಾಗಿಯೂ ಕೊಡುತ್ತಾನೆ.
Kannada Holy Bible: Easy-to-Read Version. All rights reserved. © 1997 Bible League International