Revised Common Lectionary (Semicontinuous)
8 ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
9 ದೇವರೇ, ಭೂಪಾಲಕನು ನೀನೇ.
ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.
37 ಆದ್ದರಿಂದ ಯಾಕೋಬನು ಲಿಬ್ನೆ, ಲೂಜ್ ಮತ್ತು ಅರ್ಮೋನ್ ಎಂಬ ಮರಗಳಿಂದ ಹಸಿರುಕೊಂಬೆಗಳನ್ನು ಕತ್ತರಿಸಿದನು. ಅವುಗಳನ್ನು ಪಟ್ಟಿಪಟ್ಟಿಯಾಗಿ ತೊಗಟೆ ಸುಲಿದು ಅವುಗಳಲ್ಲಿರುವ ಬಿಳುಪುಬಣ್ಣವು ಕಾಣಿಸುವಂತೆ ಮಾಡಿದನು. 38 ಯಾಕೋಬನು ಆ ಕೊಂಬೆಗಳನ್ನು ಮಂದೆಗಳ ಎದುರಿಗೆ ನೀರು ಕುಡಿಯುವ ಸ್ಥಳದಲ್ಲಿಟ್ಟನು. ಪ್ರಾಣಿಗಳು ನೀರು ಕುಡಿಯುವುದಕ್ಕೆ ಬಂದಾಗ ಆ ಸ್ಥಳದಲ್ಲಿ ಸಂಗಮ ಮಾಡುತ್ತಿದ್ದವು. 39 ಮೇಕೆಗಳು ಆ ಕೊಂಬೆಗಳ ಎದುರಿನಲ್ಲಿ ಸಂಗಮ ಮಾಡಿದಾಗ, ಅವುಗಳಲ್ಲಿ ಹುಟ್ಟಿದ ಮರಿಗಳೆಲ್ಲ ಚುಕ್ಕೆಮಚ್ಚೆಗಳಿಂದಲೂ ಕಪ್ಪು ಬಣ್ಣದಿಂದಲೂ ಕೂಡಿದ್ದವು.
40 ಯಾಕೋಬನು ಚುಕ್ಕೆಯುಳ್ಳ ಮತ್ತು ಕಪ್ಪಾಗಿರುವ ಆಡುಕುರಿಗಳನ್ನು ಮಂದೆಯ ಇತರ ಆಡುಕುರಿಗಳಿಂದ ಬೇರ್ಪಡಿಸಿದನು. ಯಾಕೋಬನು ತನ್ನ ಪಶುಗಳನ್ನು ಲಾಬಾನನ ಪಶುಗಳಿಂದ ಪ್ರತ್ಯೇಕವಾಗಿರಿಸಿದನು. 41 ಬಲವಾದ ಆಡುಕುರಿಗಳು ಸಂಗಮ ಮಾಡುವಾಗಲೆಲ್ಲ ಯಾಕೋಬನು ಆ ಕೊಂಬೆಗಳನ್ನು ಅವುಗಳ ಕಣ್ಣಿಗೆ ಎದುರಾಗಿಡುತ್ತಿದ್ದನು. ಅವುಗಳು ಆ ಕೊಂಬೆಗಳ ಸಮೀಪದಲ್ಲಿ ಸಂಗಮ ಮಾಡುತ್ತಿದ್ದವು. 42 ಆದರೆ ಬಲಹೀನವಾದ ಪ್ರಾಣಿಗಳು ಸಂಗಮ ಮಾಡುವಾಗ ಯಾಕೋಬನು ಆ ಕೊಂಬೆಗಳನ್ನು ಅಲ್ಲಿ ಇಡುತ್ತಿರಲಿಲ್ಲ. ಆದ್ದರಿಂದ ಬಲಹೀನವಾದ ಆಡುಕುರಿಗಳಿಗೆ ಹುಟ್ಟಿದ ಮರಿಗಳೆಲ್ಲ ಲಾಬಾನನಿಗೆ ಸೇರಿಕೊಂಡವು. ಬಲವಾದ ಆಡುಕುರಿಗಳಿಗೆ ಹುಟ್ಟಿದ ಮರಿಗಳೆಲ್ಲ ಯಾಕೋಬನಿಗೆ ಸೇರಿಕೊಂಡವು. 43 ಹೀಗೆ ಯಾಕೋಬನು ತುಂಬ ಐಶ್ವರ್ಯವಂತನಾದನು. ಅವನಿಗೆ ದೊಡ್ಡ ಮಂದೆಗಳಿದ್ದವು. ಅನೇಕ ಸೇವಕರಿದ್ದರು; ಒಂಟೆಗಳಿದ್ದವು ಮತ್ತು ಕತ್ತೆಗಳಿದ್ದವು.
ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ
10 ಕಡೇ ಮಾತೇನೆಂದರೆ, ಪ್ರಭುವಿನಲ್ಲಿಯೂ ಆತನ ಮಹಾಶಕ್ತಿಯಲ್ಲಿಯೂ ಬಲವಾಗಿರಿ. 11 ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ. ಆಗ ಸೈತಾನನ ಕುತಂತ್ರಗಳಿಗೆ ವಿರುದ್ಧವಾಗಿ ಹೋರಾಡಲು ನಿಮಗೆ ಸಾಧ್ಯವಾಗುವುದು. 12 ನಮ್ಮ ಹೋರಾಟವು ಜನರ ವಿರುದ್ಧವಲ್ಲ. ನಾವು ಅಂಧಕಾರದ ಅಧಿಪತಿಗಳಿಗೂ ಅಧಿಕಾರಿಗಳಿಗೂ ಮತ್ತು ಈ ಲೋಕದ ಕತ್ತಲೆಯ ಶಕ್ತಿಗಳಿಗೂ ಆಕಾಶಮಂಡಲದ ದುಷ್ಟಶಕ್ತಿಗಳಿಗೂ ವಿರುದ್ಧವಾಗಿ ಹೋರಾಡುತ್ತಿದ್ದೇವೆ. 13 ಆದಕಾರಣವೇ ನೀವು ದೇವರ ಸರ್ವಾಯುಧಗಳನ್ನು ಧರಿಸಿಕೊಳ್ಳಬೇಕು. ಆಗ ಯುದ್ಧದ ದಿನದಲ್ಲಿಯೂ ಹೋರಾಟವು ಸಂಪೂರ್ಣವಾಗಿ ಮುಗಿದಾದ ಮೇಲೆಯೂ ದೃಢವಾಗಿನಿಂತುಕೊಳ್ಳಲು ನಿಮಗೆ ಸಾಧ್ಯವಾಗುವುದು.
14 ಆದ್ದರಿಂದ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಎದೆಗೆ ಬಿಗಿದುಕೊಂಡು 15 ಸಮಾಧಾನದ ಸುವಾರ್ತೆಯೆಂಬ ಪಾದರಕ್ಷೆಯನ್ನು ಹಾಕಿಕೊಂಡು ದೃಢವಾಗಿ ನಿಂತುಕೊಳ್ಳಿರಿ. 16 ಅಲ್ಲದೆ ನಂಬಿಕೆಯೆಂಬ ಗುರಾಣಿಯನ್ನೂ ಹಿಡಿದುಕೊಳ್ಳಿರಿ. ಕೆಡುಕನ ಅಗ್ನಿಬಾಣಗಳನ್ನೆಲ್ಲಾ ತಡೆಯಲು ನಿಮಗೆ ಇದರಿಂದ ಸಾಧ್ಯವಾಗುವುದು. 17 ದೇವರ ರಕ್ಷಣೆಯನ್ನು ಶಿರಸ್ತ್ರಾಣವನ್ನಾಗಿ ಧರಿಸಿಕೊಳ್ಳಿರಿ. ಪವಿತ್ರಾತ್ಮನ ಖಡ್ಗವನ್ನು ಅಂದರೆ ದೇವರ ವಾಕ್ಯವನ್ನು ತೆಗೆದುಕೊಳ್ಳಿರಿ. 18 ನೀವು ಪವಿತ್ರಾತ್ಮನ ಸಹಾಯದಿಂದ ಯಾವಾಗಲೂ ದೇವರಲ್ಲಿ ಪ್ರಾರ್ಥಿಸುತ್ತಾ ಸಕಲವಿಧವಾದ ವಿಜ್ಞಾಪನೆಗಳನ್ನು ಮಾಡಿರಿ ಮತ್ತು ನಿಮಗೆ ಅಗತ್ಯವಾದವುಗಳಿಗಾಗಿ ಬೇಡಿಕೊಳ್ಳಿರಿ. ಇದಕ್ಕಾಗಿ ಯಾವಾಗಲೂ ಸಿದ್ಧರಾಗಿರಿ. ಪ್ರಾರ್ಥನೆಯನ್ನು ಬಿಟ್ಟುಕೊಡಬೇಡಿರಿ. ದೇವಜನರೆಲ್ಲರಿಗೋಸ್ಕರ ಯಾವಾಗಲೂ ಪ್ರಾರ್ಥಿಸಿರಿ.
Kannada Holy Bible: Easy-to-Read Version. All rights reserved. © 1997 Bible League International