Revised Common Lectionary (Semicontinuous)
ಇಸಾಕನ ಕುಟುಂಬ
19 ಇದು ಇಸಾಕನ ಚರಿತ್ರೆ. ಅಬ್ರಹಾಮನಿಗೆ ಇಸಾಕ ಎಂಬ ಹೆಸರಿನ ಮಗನಿದ್ದನು. 20 ಇಸಾಕನು ನಲವತ್ತು ವರ್ಷದವನಾಗಿದ್ದಾಗ ರೆಬೆಕ್ಕಳನ್ನು ಮದುವೆಯಾದನು. ರೆಬೆಕ್ಕಳು ಪದ್ದನ್ ಅರಾಮಿನವಳು. ಆಕೆ ಬೆತೂವೇಲನ ಮಗಳು ಮತ್ತು ಅರಾಮ್ಯನಾದ ಲಾಬಾನನ ತಂಗಿ. 21 ಇಸಾಕನ ಹೆಂಡತಿ ಮಕ್ಕಳನ್ನು ಪಡೆಯಲಾಗಲಿಲ್ಲ. ಆದ್ದರಿಂದ ಇಸಾಕನು ತನ್ನ ಹೆಂಡತಿಗೋಸ್ಕರ ಯೆಹೋವನಲ್ಲಿ ಪ್ರಾರ್ಥಿಸಿದನು. ಯೆಹೋವನು ಇಸಾಕನ ಪ್ರಾರ್ಥನೆಯನ್ನು ಕೇಳಿ ರೆಬೆಕ್ಕಳಿಗೆ ಗರ್ಭಧಾರಣೆಯನ್ನು ಅನುಗ್ರಹಿಸಿದನು.
22 ರೆಬೆಕ್ಕಳು ಗರ್ಭಿಣಿಯಾಗಿದ್ದಾಗ, ಅವಳ ಗರ್ಭದಲ್ಲಿದ್ದ ಕೂಸುಗಳು ಒಂದನ್ನೊಂದು ನೂಕಾಡಿದ್ದರಿಂದ ಅವಳು ಬಹಳ ತೊಂದರೆಪಡಬೇಕಾಯಿತು. ರೆಬೆಕ್ಕಳು ಯೆಹೋವನಿಗೆ ಪ್ರಾರ್ಥಿಸಿ, “ನನಗೇಕೆ ಹೀಗೆ ಆಗುತ್ತಿದೆ?” ಎಂದು ಕೇಳಿದಳು. 23 ಯೆಹೋವನು ಅವಳಿಗೆ,
“ನಿನ್ನ ಗರ್ಭದಲ್ಲಿ ಎರಡು ಜನಾಂಗಗಳಿವೆ.
ಎರಡು ಕುಟುಂಬಗಳನ್ನು ಆಳುವವರು ನಿನ್ನಲ್ಲಿ ಹುಟ್ಟುವರು;
ಅವರು ವಿಭಾಗವಾಗುವರು.
ಒಬ್ಬ ಮಗನು ಮತ್ತೊಬ್ಬನಿಗಿಂತ ಬಲಶಾಲಿಯಾಗಿರುವನು.
ದೊಡ್ಡ ಮಗನು ಚಿಕ್ಕ ಮಗನ ಸೇವೆ ಮಾಡುವನು”
ಎಂದು ಹೇಳಿದನು.
24 ದಿನ ತುಂಬಿದ ಮೇಲೆ ರೆಬೆಕ್ಕಳು ಅವಳಿಜವಳಿ ಮಕ್ಕಳನ್ನು ಹೆತ್ತಳು. 25 ಮೊದಲನೆಯ ಮಗುವು ಕೆಂಪಗಿತ್ತು. ಅವನ ಚರ್ಮವು ಕೂದಲಿನ ಉಡುಪಿನಂತಿತ್ತು. ಆದ್ದರಿಂದ ಅವನಿಗೆ “ಏಸಾವ್” ಎಂದು ಹೆಸರಿಡಲಾಯಿತು. 26 ಎರಡನೆಯ ಮಗು ಹುಟ್ಟಿದಾಗ ಅದು ಏಸಾವನ ಹಿಮ್ಮಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು. ಆದ್ದರಿಂದ ಆ ಮಗುವಿಗೆ “ಯಾಕೋಬ” ಎಂದು ಹೆಸರಿಡಲಾಯಿತು. ಯಾಕೋಬ ಮತ್ತು ಏಸಾವ ಹುಟ್ಟಿದಾಗ ಇಸಾಕನಿಗೆ ಅರವತ್ತು ವರ್ಷ ವಯಸ್ಸಾಗಿತ್ತು.
27 ಆ ಬಾಲಕರು ಬೆಳೆದು ದೊಡ್ಡವರಾದರು. ಏಸಾವನು ಚತುರ ಬೇಟೆಗಾರನಾದನು. ಹೊಲದಲ್ಲಿರುವುದು ಅವನಿಗೆ ಪ್ರಿಯವಾಗಿತ್ತು. ಆದರೆ ಯಾಕೋಬನು ಸಾಧು ಮನುಷ್ಯನಾಗಿದ್ದನು. ಅವನು ತನ್ನ ಗುಡಾರದಲ್ಲಿರುತ್ತಿದ್ದನು. 28 ಇಸಾಕನು ಏಸಾವನನ್ನು ಪ್ರೀತಿಸಿದನು. ಏಸಾವನು ಬೇಟೆಯಾಡಿ ತಂದ ಪ್ರಾಣಿಗಳ ಮಾಂಸ ಅವನಿಗೆ ಇಷ್ಟವಾಗಿತ್ತು. ಆದರೆ ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
29 ಒಂದು ಸಲ ಏಸಾವನು ಬೇಟೆಯಿಂದ ಹಿಂತಿರುಗಿ ಬಂದಾಗ ಹಸಿವೆಯಿಂದ ಆಯಾಸಗೊಂಡಿದ್ದನು ಮತ್ತು ಬಲಹೀನನಾಗಿದ್ದನು. ಯಾಕೋಬನು ಅಲಸಂಧಿ ಗುಗ್ಗರಿ ಮಾಡುತ್ತಿದ್ದನು. 30 ಆಗ ಏಸಾವನು ಯಾಕೋಬನಿಗೆ, “ಹಸಿವೆಯಿಂದ ನನಗೆ ಆಯಾಸವಾಗಿದೆ. ನನಗೆ ಕೆಂಪಾದ ಸ್ವಲ್ಪ ಅಲಸಂದಿ ಗುಗ್ಗರಿಯನ್ನು ಕೊಡು” ಎಂದು ಕೇಳಿದನು. (ಈ ಕಾರಣದಿಂದ ಜನರು ಅವನಿಗೆ “ಏದೋಮ್” ಎಂದು ಕರೆಯುತ್ತಾರೆ.)
31 ಆದರೆ ಯಾಕೋಬನು, “ನಿನ್ನ ಚೊಚ್ಚಲತನದ ಹಕ್ಕನ್ನು ನೀನು ನನಗೆ ಈ ದಿನ ಮಾರಬೇಕು” ಎಂದು ಹೇಳಿದನು.
32 ಏಸಾವನು, “ನನಗೆ ಹಸಿವೆಯಿಂದ ಸಾಯುವಂತಾಗಿದೆ. ನಾನು ಸತ್ತುಹೋದರೆ, ನನ್ನ ತಂದೆಯ ಐಶ್ವರ್ಯವೆಲ್ಲ ನನಗೆ ಸಹಾಯ ಮಾಡಲಾರದು. ಆದ್ದರಿಂದ ನಾನು ನನ್ನ ಹಕ್ಕನ್ನು ನಿನಗೆ ಕೊಡುವೆನು” ಎಂದು ಹೇಳಿದನು.
33 ಆದರೆ ಯಾಕೋಬನು, “ನೀನು ಅದನ್ನು ಕೊಡುವುದಾಗಿ ಪ್ರಮಾಣಮಾಡು” ಅಂದನು. ಆದ್ದರಿಂದ ಏಸಾವನು ಯಾಕೋಬನಿಗೆ ಪ್ರಮಾಣ ಮಾಡಿದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕನ್ನು ಯಾಕೋಬನಿಗೆ ಮಾರಿಕೊಂಡನು. 34 ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಕುದಿಸಿದ ಅಲಸಂಧಿ ಗುಗ್ಗರಿಯನ್ನೂ ಕೊಟ್ಟನು. ಏಸಾವನು ತಿಂದು ಕುಡಿದು ಅಲ್ಲಿಂದ ಹೊರಟುಹೋದನು. ಹೀಗೆ ಏಸಾವನು ತನ್ನ ಚೊಚ್ಚಲತನದ ಹಕ್ಕುಗಳ ಮೇಲೆ ತನಗೆ ಚಿಂತೆಯಿಲ್ಲದಿರುವುದನ್ನು ತೋರಿಸಿಕೊಂಡನು.
105 ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ
ದಾರಿಗೆ ಬೆಳಕೂ ಆಗಿದೆ.
106 ನಿನ್ನ ವಿಧಿನಿಯಮಗಳು ಒಳ್ಳೆಯವೇ.
ಅವುಗಳಿಗೆ ವಿಧೇಯನಾಗಿರುವುದಾಗಿ ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ಯೆಹೋವನೇ, ನಾನು ಬಹುಕಾಲ ಸಂಕಟಪಟ್ಟಿದ್ದೇನೆ;
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
108 ಯೆಹೋವನೇ, ನನ್ನ ಸ್ತೋತ್ರವನ್ನು ಸ್ವೀಕರಿಸು.
ನಿನ್ನ ವಿಧಿನಿಯಮಗಳನ್ನು ನನಗೆ ಉಪದೇಶಿಸು.
109 ನನ್ನ ಪ್ರಾಣವು ಯಾವಾಗಲೂ ಅಪಾಯದಲ್ಲಿದೆ.
ಆದರೂ ನಾನು ನಿನ್ನ ಉಪದೇಶಗಳನ್ನು ಮರೆತುಬಿಟ್ಟಿಲ್ಲ.
110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ.
ನಾನಾದರೋ ನಿನ್ನ ವಿಧಿನಿಯಮಗಳಿಗೆ ಅವಿಧೇಯನಾಗಲಿಲ್ಲ.
111 ನಿನ್ನ ಕಟ್ಟಳೆಗಳನ್ನು ಎಂದೆಂದಿಗೂ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ.
ಅವು ನನ್ನ ಹೃದಯಕ್ಕೆ ಆನಂದಕರವಾಗಿವೆ.
112 ನಿನ್ನ ಕಟ್ಟಳೆಗಳಿಗೆಲ್ಲಾ ಯಾವಾಗಲೂ
ವಿಧೇಯನಾಗಿರಲು ಮನಸ್ಸುಮಾಡಿದ್ದೇನೆ.
ಪವಿತ್ರಾತ್ಮನಿಗೆ ಅಧೀನವಾದ ಜೀವಿತ
8 ಆದ್ದರಿಂದ ಈಗ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಅಪರಾಧಿಗಳೆಂದು ತೀರ್ಪಾಗುವುದಿಲ್ಲ. 2 ನನಗೆ ಅಪರಾಧಿಯೆಂದು ತೀರ್ಪಾಗದಿರುವುದೇಕೆ? ಏಕೆಂದರೆ ಕ್ರಿಸ್ತ ಯೇಸುವಿನಲ್ಲಿರುವ ಜನರಿಗೆ ಜೀವವನ್ನು ತರುವ ಪವಿತ್ರಾತ್ಮನ ನಿಯಮವು ನನ್ನನ್ನು ಪಾಪ ಮತ್ತು ಮರಣಗಳನ್ನು ತರುವ ನಿಯಮದಿಂದ ಬಿಡುಗಡೆ ಮಾಡಿತು. 3 ಧರ್ಮಶಾಸ್ತ್ರವು ನಿರ್ಬಲವಾಗಿತ್ತು. ಏಕೆಂದರೆ ನಮ್ಮ ಪಾಪಾಧೀನಸ್ವಭಾವವೇ ಅದನ್ನು ಬಲಹೀನಗೊಳಿಸಿತು. ಹೀಗಿರಲಾಗಿ, ಧರ್ಮಶಾಸ್ತ್ರವು ಮಾಡಲಾಗದ್ದನ್ನು ದೇವರು ಮಾಡಿದನು. ದೇವರು ತನ್ನ ಸ್ವಂತ ಮಗನನ್ನೇ ಪಾಪಾಧೀನವಾದ ಮಾನವ ಸ್ವಭಾವದಲ್ಲಿ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕಳುಹಿಸಿಕೊಟ್ಟನು. ಆದಕಾರಣ ದೇವರು ಪಾಪಕ್ಕೆ ಮರಣದಂಡನೆಯನ್ನು ವಿಧಿಸಲು ಮಾನವ ಸ್ವಭಾವವನ್ನೇ ಉಪಯೋಗಿಸಿಕೊಂಡನು. 4 ಈಗ ನಮ್ಮ ಸ್ವಭಾವಕ್ಕನುಸಾರವಾಗಿ ಜೀವಿಸದೆ ಪವಿತ್ರಾತ್ಮನಿಗನುಸಾರವಾಗಿ ಜೀವಿಸುತ್ತಿರುವ ನಮ್ಮಲ್ಲಿ ಧರ್ಮಶಾಸ್ತ್ರದ ನಿಯಮಗಳು ನೆರವೇರಲೆಂದು ದೇವರು ಹೀಗೆ ಮಾಡಿದನು.
5 ತಮ್ಮ ಪಾಪಸ್ವಭಾವಕ್ಕನುಸಾರವಾಗಿ ಜೀವಿಸುವ ಜನರು ತಮ್ಮ ಪಾಪಸ್ವಭಾವವು ಬಯಸುವ ಸಂಗತಿಗಳ ಬಗ್ಗೆ ಮಾತ್ರ ಆಲೋಚಿಸುತ್ತಾರೆ. ಆದರೆ ಆತ್ಮನಿಗನುಸಾರವಾಗಿ ಜೀವಿಸುವ ಜನರು ತಮ್ಮಿಂದ ಆತ್ಮನು ಅಪೇಕ್ಷಿಸುವ ಕಾರ್ಯಗಳ ಬಗ್ಗೆ ಆಲೋಚಿಸುತ್ತಾರೆ. 6 ಒಬ್ಬನ ಆಲೋಚನೆಯು ಅವನ ಪಾಪ ಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ ಅವನಿಗೆ ಆತ್ಮಿಕ ಮರಣವಾಗುತ್ತದೆ. ಆದರೆ ಒಬ್ಬನ ಆಲೋಚನೆಯು ಪವಿತ್ರಾತ್ಮನ ಹತೋಟಿಗೆ ಒಳಪಟ್ಟಿದ್ದರೆ, ಅವನಲ್ಲಿ ಜೀವವೂ ಸಮಾಧಾನವೂ ಇರುತ್ತದೆ. 7 ಏಕೆಂದರೆ ಒಬ್ಬನ ಆಲೋಚನೆಯು ಅವನ ಪಾಪಾಧೀನಸ್ವಭಾವದ ಹಿಡಿತಕ್ಕೆ ಒಳಪಟ್ಟಿದ್ದರೆ, ಅವನು ದೇವರಿಗೆ ವಿರೋಧವಾಗಿದ್ದಾನೆ. ಅವನು ದೇವರ ನಿಯಮಕ್ಕೆ ವಿಧೇಯನಾಗುವುದೂ ಇಲ್ಲ್ಲ, ವಿಧೇಯನಾಗಲು ಸಾಧ್ಯವಿರುವುದೂ ಇಲ್ಲ. 8 ತಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಪಟ್ಟಿರುವ ಆ ಜನರು ದೇವರನ್ನು ಮೆಚ್ಚಿಸಲು ಸಾಧ್ಯವಿಲ್ಲ.
9 ಆದರೆ ನೀವು ನಿಮ್ಮ ಪಾಪಸ್ವಭಾವದ ಆಡಳಿತಕ್ಕೆ ಒಳಗಾಗಿಲ್ಲ. ದೇವರಾತ್ಮನು ನಿಮ್ಮಲ್ಲಿ ನಿಜವಾಗಿಯೂ ವಾಸವಾಗಿದ್ದರೆ, ನೀವು ಪವಿತ್ರಾತ್ಮನ ಆಡಳಿತಕ್ಕೆ ಒಳಗಾಗಿದ್ದೀರಿ ಯಾವನಲ್ಲಾದರೂ ಕ್ರಿಸ್ತನ ಆತ್ಮನು ಇಲ್ಲದಿದ್ದರೆ, ಅವನು ಕ್ರಿಸ್ತನಿಗೆ ಸೇರಿದವನಲ್ಲ. 10 ನಿಮ್ಮ ದೇಹವು ಪಾಪದ ದೆಸೆಯಿಂದಾಗಿ ಯಾವಾಗಲೂ ಸತ್ತದ್ದಾಗಿದೆ. ಆದರೆ ಕ್ರಿಸ್ತನು ನಿಮ್ಮಲ್ಲಿದ್ದರೆ ಆತ್ಮನು ನಿಮಗೆ ಜೀವವನ್ನು ಕೊಡುತ್ತಾನೆ. ಏಕೆಂದರೆ ಕ್ರಿಸ್ತನು ನಿಮ್ಮನ್ನು ನೀತಿವಂತರನ್ನಾಗಿ ಮಾಡಿದ್ದಾನೆ. 11 ಯೇಸುವನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ ದೇವರ ಆತ್ಮನು ನಿಮ್ಮಲ್ಲಿ ವಾಸವಾಗಿದ್ದರೆ, ಸತ್ತುಹೋಗುವ ನಿಮ್ಮ ದೇಹಗಳಿಗೆ ಆತನು ಜೀವವನ್ನು ಸಹ ಕೊಡುತ್ತಾನೆ. ಕ್ರಿಸ್ತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದಾತನು ದೇವರೇ. ನಿಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಆತನು ನಿಮ್ಮ ದೇಹಗಳಿಗೆ ಜೀವವನ್ನು ಕೊಡುತ್ತಾನೆ.
ಬಿತ್ತನೆಯನ್ನು ಉದಾಹರಿಸಿ ಯೇಸು ಹೇಳಿದ ಬೋಧನೆ
(ಮಾರ್ಕ 4:1-9; ಲೂಕ 8:4-8)
13 ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟು ಸರೋವರದ ತೀರದಲ್ಲಿ ಕುಳಿತುಕೊಂಡನು. 2 ಅನೇಕ ಜನರು ಯೇಸುವಿನ ಸುತ್ತಲೂ ನೆರೆದರು. ಆಗ ಯೇಸು ದೋಣಿಯೊಳಕ್ಕೆ ಹೋಗಿ ಕುಳಿತುಕೊಂಡನು. ಜನರೆಲ್ಲರೂ ದಡದಲ್ಲಿ ನಿಂತಿದ್ದರು. 3 ಆಗ ಯೇಸು ಸಾಮ್ಯಗಳ ಮೂಲಕ ಅನೇಕ ವಿಷಯಗಳನ್ನು ಅವರಿಗೆ ಬೋಧಿಸಿದನು. ಯೇಸು ಅವರಿಗೆ ಈ ಸಾಮ್ಯವನ್ನು ಹೇಳಿದನು:
“ಒಬ್ಬ ರೈತನು ಬೀಜ ಬಿತ್ತುವುದಕ್ಕೆ ಹೋದನು. 4 ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ರಸ್ತೆಯ ಮಗ್ಗುಲಲ್ಲಿ ಬಿದ್ದವು. ಹಕ್ಕಿಗಳು ಬಂದು ಬೀಜಗಳನ್ನೆಲ್ಲ ತಿಂದುಬಿಟ್ಟವು. 5 ಕೆಲವು ಬೀಜಗಳು ಬಂಡೆಯ ನೆಲದಲ್ಲಿ ಬಿದ್ದವು. ಅಲ್ಲಿಯ ನೆಲದಲ್ಲಿ ಸಾಕಷ್ಟು ಮಣ್ಣಿಲ್ಲದಿದ್ದುದರಿಂದ ಬೀಜಗಳು ಬೇಗ ಮೊಳೆತವು. 6 ಆದರೆ ಬಿಸಿಲೇರಿದಾಗ ಆ ಮೊಳಕೆಗಳು ಒಣಗಿಹೋದವು. ಏಕೆಂದರೆ ಅವುಗಳಿಗೆ ಆಳವಾದ ಬೇರಿರಲಿಲ್ಲ. 7 ಬೇರೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಮುಳ್ಳುಗಿಡಗಳು ಬೆಳೆದು ಒಳ್ಳೆಯ ಗಿಡಗಳು ಬೆಳೆಯುವುದನ್ನು ತಡೆದುಬಿಟ್ಟವು. 8 ಬೇರೆ ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಅವು ಬೆಳೆದು ಕಾಳುಬಿಟ್ಟವು. ಕೆಲವು ಗಿಡಗಳು ನೂರರಷ್ಟು, ಕೆಲವು ಗಿಡಗಳು ಅರವತ್ತರಷ್ಟು, ಇನ್ನು ಕೆಲವು ಮೂವತ್ತರಷ್ಟು ಕಾಳುಬಿಟ್ಟವು. 9 ನನಗೆ ಕಿವಿಗೊಡುವ ಜನರೇ, ಲಾಲಿಸಿರಿ!”
ಬಿತ್ತನೆಯ ಕುರಿತು ಯೇಸುವಿನ ವಿವರಣೆ
(ಮಾರ್ಕ 4:13-20; ಲೂಕ 8:11-15)
18 “ಹೀಗಿರಲು ಒಕ್ಕಲಿಗನ ಕುರಿತಾದ ಸಾಮ್ಯದ ಅರ್ಥವನ್ನು ಲಾಲಿಸಿರಿ.
19 “ಮಗ್ಗುಲಲ್ಲಿ ಬಿದ್ದ ಬೀಜ ಅಂದರೇನು? ಪರಲೋಕರಾಜ್ಯವನ್ನು ಕುರಿತು ಬೋಧಿಸಿದ್ದನ್ನು ಕೇಳಿ ಅದನ್ನು ಅರ್ಥಮಾಡಿಕೊಳ್ಳದೆ ಇರುವ ಮನುಷ್ಯನೇ ಬೀಜ ಬಿದ್ದ ದಾರಿ ಮಗ್ಗುಲಾಗಿರುವನು. ಕೆಡುಕನು (ಸೈತಾನನು) ಬಂದು ಆ ಮನುಷ್ಯನ ಹೃದಯದಲ್ಲಿ ಬಿತ್ತಿದ್ದ ಬೀಜಗಳನ್ನು ತೆಗೆದುಹಾಕುತ್ತಾನೆ.
20 “ಬಂಡೆನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದ ಕೂಡಲೇ ಅದನ್ನು ಸಂತೋಷದಿಂದ ಅಂಗೀಕರಿಸುವ ಮನುಷ್ಯನೇ ಬೀಜ ಬಿದ್ದ ಬಂಡೆನೆಲವಾಗಿರುವನು. 21 ಆದರೆ ಆ ಮನುಷ್ಯನು ಬೋಧನೆಯನ್ನು ತನ್ನ ಜೀವಿತದಲ್ಲಿ ಬೇರೂರಿಸಿಕೊಳ್ಳುವುದಿಲ್ಲ. ಅವನು ಆ ಬೋಧನೆಯನ್ನು ಸ್ವಲ್ಪಕಾಲ ಮಾತ್ರ ಅನುಸರಿಸುವನು. ಆ ಬೋಧನೆಯನ್ನು ಅಂಗೀಕರಿಸಿದ್ದರಿಂದ ತನಗೆ ಕಷ್ಟವಾಗಲಿ ಹಿಂಸೆಯಾಗಲಿ ಬಂದಾಗ ಅದನ್ನು ಬೇಗನೆ ಬಿಟ್ಟುಬಿಡುವನು.
22 “ಮುಳ್ಳುಗಿಡಗಳ ನಡುವೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿದರೂ ಜೀವನದ ಚಿಂತೆಗಳಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬೋಧನೆಯನ್ನು ತನ್ನಲ್ಲಿ ಬೆಳೆಯದಂತೆ ಮಾಡುವವನೇ ಬೀಜ ಬಿದ್ದ ಮುಳ್ಳುಗಿಡಗಳ ನೆಲವಾಗಿರವನು. ಆದ್ದರಿಂದ ಬೋಧನೆಯು ಆ ಮನುಷ್ಯನ ಜೀವಿತದಲ್ಲಿ ಫಲ ಕೊಡುವುದಿಲ್ಲ.
23 “ಒಳ್ಳೆಯ ನೆಲದ ಮೇಲೆ ಬಿದ್ದ ಬೀಜ ಅಂದರೇನು? ಬೋಧನೆಯನ್ನು ಕೇಳಿ ಅದನ್ನು ಅರ್ಥಮಾಡಿಕೊಂಡ ವ್ಯಕ್ತಿಯೇ ಬೀಜ ಬಿದ್ದ ಒಳ್ಳೆಯ ನೆಲವಾಗಿರುವನು. ಆ ಮನುಷ್ಯನು ಬೆಳೆದು ಕೆಲವು ಸಾರಿ ನೂರರಷ್ಟು ಕೆಲವು ಸಾರಿ ಅರವತ್ತರಷ್ಟು ಮತ್ತು ಕೆಲವು ಸಾರಿ ಮೂವತ್ತರಷ್ಟು ಫಲ ಕೊಡುವನು” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International