Revised Common Lectionary (Semicontinuous)
105 ನಿನ್ನ ವಾಕ್ಯವು ನನ್ನ ಕಾಲಿಗೆ ದೀಪವೂ
ದಾರಿಗೆ ಬೆಳಕೂ ಆಗಿದೆ.
106 ನಿನ್ನ ವಿಧಿನಿಯಮಗಳು ಒಳ್ಳೆಯವೇ.
ಅವುಗಳಿಗೆ ವಿಧೇಯನಾಗಿರುವುದಾಗಿ ಪ್ರಮಾಣಮಾಡಿದ್ದೇನೆ, ಅದನ್ನು ನೆರವೇರಿಸುವೆನು.
107 ಯೆಹೋವನೇ, ನಾನು ಬಹುಕಾಲ ಸಂಕಟಪಟ್ಟಿದ್ದೇನೆ;
ನಿನ್ನ ವಾಗ್ದಾನಕ್ಕನುಸಾರವಾಗಿ ನನ್ನನ್ನು ಉಜ್ಜೀವಿಸಮಾಡು.
108 ಯೆಹೋವನೇ, ನನ್ನ ಸ್ತೋತ್ರವನ್ನು ಸ್ವೀಕರಿಸು.
ನಿನ್ನ ವಿಧಿನಿಯಮಗಳನ್ನು ನನಗೆ ಉಪದೇಶಿಸು.
109 ನನ್ನ ಪ್ರಾಣವು ಯಾವಾಗಲೂ ಅಪಾಯದಲ್ಲಿದೆ.
ಆದರೂ ನಾನು ನಿನ್ನ ಉಪದೇಶಗಳನ್ನು ಮರೆತುಬಿಟ್ಟಿಲ್ಲ.
110 ದುಷ್ಟರು ನನಗೆ ಬಲೆಯೊಡ್ಡಿದ್ದಾರೆ.
ನಾನಾದರೋ ನಿನ್ನ ವಿಧಿನಿಯಮಗಳಿಗೆ ಅವಿಧೇಯನಾಗಲಿಲ್ಲ.
111 ನಿನ್ನ ಕಟ್ಟಳೆಗಳನ್ನು ಎಂದೆಂದಿಗೂ ನಿತ್ಯಸ್ವಾಸ್ತ್ಯವನ್ನಾಗಿ ಆರಿಸಿಕೊಂಡಿದ್ದೇನೆ.
ಅವು ನನ್ನ ಹೃದಯಕ್ಕೆ ಆನಂದಕರವಾಗಿವೆ.
112 ನಿನ್ನ ಕಟ್ಟಳೆಗಳಿಗೆಲ್ಲಾ ಯಾವಾಗಲೂ
ವಿಧೇಯನಾಗಿರಲು ಮನಸ್ಸುಮಾಡಿದ್ದೇನೆ.
32 “ಆಕಾಶವೇ, ನಾನು ಹೇಳುವುದನ್ನು ಕೇಳು.
ಭೂಮಿಯೇ, ನನ್ನ ಬಾಯಿಯ ಮಾತುಗಳನ್ನು ಆಲಿಸು.
2 ನನ್ನ ಬೋಧನೆಯು ಮಳೆಯಂತೆ ಬರುವುದು.
ನೆಲದ ಮೇಲೆ ಬೀಳುವ ಇಬ್ಬನಿಯಂತಿರುವುದು;
ಮೃದುವಾದ ಹುಲ್ಲಿನ ಮೇಲೆ ಬೀಳುವ ಹದವಾದ ಮಳೆಯಂತಿರುವುದು;
ಹಸಿರು ಸಸಿಗಳ ಮೇಲೆ ಬೀಳುವ ಮಳೆಯ ಹನಿಯಂತಿರುವುದು.
3 ಯೆಹೋವನ ಹೆಸರಿನಲ್ಲಿ
ಮಾತಾಡುವಂತೆ ಮಾಡಿದ ದೇವರಿಗೆ ಸ್ತೋತ್ರ!
4 “ಯೆಹೋವನ ಕಾರ್ಯವು ನಿಷ್ಕಳಂಕವಾದದ್ದು.
ಯಾಕೆಂದರೆ ಆತನ ಮಾರ್ಗವೆಲ್ಲವೂ ಸರಿಯಾದದ್ದೇ.
ದೇವರು ಸತ್ಯವಂತನೂ ನಂಬಿಗಸ್ತನೂ ಆಗಿದ್ದಾನೆ.
ಆತನು ಒಳ್ಳೆಯವನೂ ಪ್ರಾಮಾಣಿಕನೂ ಆಗಿದ್ದಾನೆ.
5 ನೀವು ದ್ರೋಹಿಗಳೇ, ನೀವು ಆತನ ಮಕ್ಕಳಲ್ಲ.
ನಿಮ್ಮ ಪಾಪಗಳು ಆತನನ್ನು ಮಲಿನ ಮಾಡುವವು.
ನೀವು ಡೊಂಕಾದ ಸುಳ್ಳುಗಾರರು.
6 ಹೀಗೆ ಆತನು ನಿಮಗೆ ಮಾಡಿದ ಒಳ್ಳೆಯದಕ್ಕೆ ಉಪಕಾರ ತೋರಿಸುವಿರಾ?
ಇಲ್ಲ! ನೀವು ಬುದ್ಧಿಹೀನರಾಗಿದ್ದೀರಿ.
ಯೆಹೋವನು ನಿಮ್ಮ ತಂದೆಯಾಗಿದ್ದಾನೆ. ಆತನೇ ನಿಮ್ಮನ್ನು ನಿರ್ಮಿಸಿದಾತನು.
ಆತನೇ ನಿಮ್ಮನ್ನು ಉಂಟುಮಾಡಿದಾತನು. ಆತನೇ ಆಧಾರ ನೀಡುವಾತನು.
7 “ಹಿಂದೆ ಏನಾಯಿತೆಂದು ಜ್ಞಾಪಕಕ್ಕೆ ತಂದುಕೊಳ್ಳಿರಿ.
ಬಹಳ ವರ್ಷಗಳ ಹಿಂದೆ ನಡೆದದ್ದನ್ನು ಜ್ಞಾಪಕ ಮಾಡಿಕೊಳ್ಳಿರಿ.
ನಿಮ್ಮ ತಂದೆಗಳನ್ನು ಕೇಳಿ, ಅವರು ಹೇಳುವರು.
ನಿಮ್ಮ ಹಿರಿಯರನ್ನು ವಿಚಾರಿಸಿ, ಅವರು ಹೇಳುವರು.
8 ಪರಲೋಕದಲ್ಲಿರುವ ದೇವರು ಭೂಮಿಯ ಮೇಲಿದ್ದ ಜನರನ್ನು ಪ್ರತ್ಯೇಕಿಸಿದನು.
ಪ್ರತಿಯೊಂದು ಜನಾಂಗಕ್ಕೆ ಅದರದೇ ಆದ ದೇಶವನ್ನು ಕೊಟ್ಟನು.
ಅದಕ್ಕೆ ಮೇರೆಯನ್ನು ಆತನು ಮಾಡಿಕೊಟ್ಟನು.
ಇಸ್ರೇಲರಲ್ಲಿ ಎಷ್ಟು ಜನರು ಇದ್ದಾರೋ ಅಷ್ಟು ಜನಾಂಗಗಳಿವೆ.
9 ಯೆಹೋವನ ಪಾಲು ಆತನ ಜನರೇ.
ಇಸ್ರೇಲನ ವಂಶಸ್ಥರು ದೇವಜನರಾಗಿದ್ದಾರೆ.
10 “ಮರುಭೂಮಿಯಲ್ಲಿ ಯೆಹೋವನು ಇಸ್ರೇಲನನ್ನು ಕಂಡನು.
ಅದು ಬರಿದಾದ ಗಾಳಿ ಬೀಸುತ್ತಿದ್ದ ಸ್ಥಳವಾಗಿತ್ತು.
ಯೆಹೋವನು ಅದನ್ನು ಸುತ್ತುವರಿದು ಇಸ್ರೇಲನ್ನು ಸಂರಕ್ಷಿಸಿದನು;
ತನ್ನ ಕಣ್ಣುಗುಡ್ಡೆಯಂತೆ ಅವರನ್ನು ಕಾಪಾಡಿದನು.
ತನ್ನ ಸೇವೆಯ ಬಗ್ಗೆ ಪೌಲನ ವಿವರಣೆ
14 ನನ್ನ ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಳ್ಳೆಯತನವು ತುಂಬಿದೆಯೆಂದು ನನಗೆ ನಿಶ್ಚಯವಾಗಿ ಗೊತ್ತಿದೆ. ಅಗತ್ಯವಾದ ಸಕಲ ಜ್ಞಾನವು ನಿಮಗಿದೆಯೆಂದು ಮತ್ತು ಒಬ್ಬರಿಗೊಬ್ಬರು ಸಲಹೆ ನೀಡಬಲ್ಲಿರೆಂದು ನನಗೆ ಗೊತ್ತಿದೆ. 15 ನೀವು ಜ್ಞಾಪಕದಲ್ಲಿ ಇಟ್ಟುಕೊಳ್ಳಬೇಕೆಂದು ನಾನು ಅಪೇಕ್ಷಿಸಿದ ಕೆಲವು ಸಂಗತಿಗಳನ್ನು ನಾನು ನಿಮಗೆ ಧೈರ್ಯವಾಗಿ ಬರೆದಿರುವೆ. ಕ್ರಿಸ್ತ ಯೇಸುವಿನ ಸೇವಕ ಎಂಬ ವಿಶೇಷವಾದ ವರವನ್ನು ದೇವರು ನನಗೆ ಕೊಟ್ಟಿರುವುದರಿಂದ ನಾನು ಹೀಗೆ ಬರೆದಿದ್ದೇನೆ. 16 ಯೆಹೂದ್ಯರಲ್ಲದ ಜನರಿಗೆ ಸಹಾಯ ಮಾಡುವುದಕ್ಕಾಗಿ ದೇವರು ನನ್ನನ್ನು ತನ್ನ ಸೇವಕನನ್ನಾಗಿ ಮಾಡಿಕೊಂಡನು. ದೇವರ ಸುವಾರ್ತೆಯನ್ನು ಉಪದೇಶಿಸುವುದರ ಮೂಲಕ ನಾನು ಆತನ ಸೇವೆ ಮಾಡುವವನಾಗಿದ್ದೇನೆ. ಯೆಹೂದ್ಯರಲ್ಲದ ಜನರು ಸಹ ದೇವರು ಸ್ವೀಕರಿಸಿಕೊಳ್ಳುವ ಕಾಣಿಕೆಯಂತಾಗಬೇಕೆಂದು ನಾನು ಈ ಸೇವೆ ಮಾಡುವವನಾಗಿದ್ದೇನೆ. ಆ ಜನರು ದೇವರಿಗೋಸ್ಕರವಾಗಿ ಪವಿತ್ರಾತ್ಮನ ಮೂಲಕ ಪವಿತ್ರರಾಗಿದ್ದಾರೆ.
17 ಆದ್ದರಿಂದ ಕ್ರಿಸ್ತ ಯೇಸುವಿನಲ್ಲಿ ನಾನು ದೇವರಿಗೋಸ್ಕರ ಮಾಡುವ ಕಾರ್ಯಗಳ ಬಗ್ಗೆ ಹೆಮ್ಮೆಪಡುತ್ತೇನೆ. 18 ನಾನು ನನ್ನ ಸ್ವಕಾರ್ಯಗಳ ಬಗ್ಗೆಯೂ ಮಾತಾಡುವುದಿಲ್ಲ. ಯೆಹೂದ್ಯರಲ್ಲದ ಜನರನ್ನು ತನಗೆ ವಿಧೇಯರನ್ನಾಗಿ ಮಾಡಿಕೊಳ್ಳಲು ಕ್ರಿಸ್ತನು ನನ್ನ ಮೂಲಕ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ ಮಾಡಿದ ಕಾರ್ಯಗಳನ್ನು ಹೇಳಿಕೊಳ್ಳುತ್ತೇನೆ. 19 ಅದ್ಭುತಕಾರ್ಯಗಳ ಶಕ್ತಿಯನ್ನು ಮತ್ತು ಮಹಾಕಾರ್ಯಗಳನ್ನು ನೋಡಿದ್ದರಿಂದಲೂ ಪವಿತ್ರಾತ್ಮನ ಶಕ್ತಿಯ ನಿಮಿತ್ತದಿಂದಲೂ ಅವರು ದೇವರಿಗೆ ವಿಧೇಯರಾದರು. ನಾನು ಜೆರುಸಲೇಮಿನಿಂದ ಇಲ್ಲುರಿಕ ಪ್ರಾಂತ್ಯದವರೆಗೂ ಸುವಾರ್ತೆಯನ್ನು ಬೋಧಿಸಿ, ನನ್ನ ಆ ಕರ್ತವ್ಯವನ್ನು ಪೂರೈಸಿದ್ದೇನೆ. 20 ಕ್ರಿಸ್ತನ ಬಗ್ಗೆ ಜನರು ಎಂದೂ ಕೇಳಿಲ್ಲದ ಸ್ಥಳಗಳಲ್ಲಿ ಸುವಾರ್ತೆಯನ್ನು ಬೋಧಿಸಲು ನಾನು ಯಾವಾಗಲೂ ಅಪೇಕ್ಷಿಸುತ್ತೇನೆ; ಏಕೆಂದರೆ ಮತ್ತೊಬ್ಬನು ಆಗಲೇ ಆರಂಭಿಸಿರುವ ಕೆಲಸದ ಮೇಲೆ ಕಟ್ಟಲು ನನಗೆ ಇಷ್ಟವಿಲ್ಲ. 21 ಆದರೆ ಇದು ಸಹ ಪವಿತ್ರ ಗ್ರಂಥದಲ್ಲಿ ಬರೆಯಲ್ಪಟ್ಟಿದೆ:
“ಆತನ ಬಗ್ಗೆ ತಿಳಿಯದ ಜನರು ಆತನನ್ನು (ಕ್ರಿಸ್ತನನ್ನು) ನೋಡುವರು.
ಆತನ ಬಗ್ಗೆ ಕೇಳಿಲ್ಲದ ಜನರು ಆತನನ್ನು ಅರ್ಥಮಾಡಿಕೊಳ್ಳುವರು.”(A)
Kannada Holy Bible: Easy-to-Read Version. All rights reserved. © 1997 Bible League International