Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಪರಮ ಗೀತ 2:8-13

ಪ್ರಿಯತಮೆ

ಅಗೋ, ನನ್ನ ಪ್ರಿಯನ ಸ್ವರ!
    ಅವನು ಬೆಟ್ಟಗಳ ಮೇಲೆ ನೆಗೆಯುತ್ತಾ
    ಗುಡ್ಡಗಳ ಮೇಲೆ ಕುಪ್ಪಳಿಸುತ್ತಾ ಬರುತ್ತಿದ್ದಾನೆ.
ನನ್ನ ಪ್ರಿಯನು ಸಾರಂಗದಂತೆಯೂ
    ಪ್ರಾಯದ ಜಿಂಕೆಯಂತೆಯೂ ಇದ್ದಾನೆ.
ಅಗೋ, ಅವನು ನಮ್ಮ ಗೋಡೆಯ ಆಚೆ ನಿಂತಿದ್ದಾನೆ;
    ತಡಕೆಗಳಿಂದ ಇಣಿಕಿಹಾಕುತ್ತಿದ್ದಾನೆ;
    ಕಿಟಕಿಗಳಿಂದ ನೋಡುತ್ತಿದ್ದಾನೆ.
10 ನನ್ನ ಪ್ರಿಯನು ನನಗೆ ಹೀಗೆಂದನು:
“ನನ್ನ ಪ್ರಿಯಳೇ, ನನ್ನ ಸುಂದರಿಯೇ,
    ಎದ್ದೇಳು, ನಾವು ದೂರ ಹೋಗೋಣ!
11 ಇಗೋ, ಚಳಿಗಾಲ ಕಳೆಯಿತು;
    ಮಳೆಗಾಲ ಮುಗಿದುಹೋಯಿತು.
12 ಭೂಮಿಯ ಮೇಲೆ ಹೂವುಗಳು ಕಾಣುತ್ತವೆ;
    ಪಕ್ಷಿಗಳು ಹಾಡುವ ಸಮಯವು ಬಂದಿದೆ.
    ದೇಶದಲ್ಲಿ ಪಾರಿವಾಳದ ಸ್ವರವು ಕೇಳಿಸುತ್ತದೆ.
13 ಅಂಜೂರದ ಮರ ಕಾಯಿಗಳನ್ನು ಬಿಡುತ್ತಿದೆ;
    ದ್ರಾಕ್ಷಿಬಳ್ಳಿಯ ಹೂವುಗಳಿಂದ ಸುವಾಸನೆಯು ಬರುತ್ತಿದೆ.
ನನ್ನ ಪ್ರಿಯಳೇ, ನನ್ನ ಸುಂದರಿಯೇ, ಎದ್ದೇಳು,
    ನಾವು ದೂರ ಹೋಗೋಣ!”

ಆದಿಕಾಂಡ 29:1-14

ಯಾಕೋಬನು ರಾಹೇಲಳನ್ನು ಭೇಟಿಯಾದದ್ದು

29 ಬಳಿಕ ಯಾಕೋಬನು ತನ್ನ ಪ್ರಯಾಣವನ್ನು ಮುಂದುವರಿಸಿದನು. ಅವನು ಪೂರ್ವ ದಿಕ್ಕಿನಲ್ಲಿದ್ದ ನಾಡಿಗೆ ಹೋದನು. ಯಾಕೋಬನು ದೃಷ್ಟಿಸಿ ನೋಡಿದಾಗ, ಹೊಲದಲ್ಲಿ ಅವನಿಗೆ ಒಂದು ಬಾವಿ ಕಾಣಿಸಿತು. ಬಾವಿಯ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿಕೊಂಡಿದ್ದವು. ಕುರಿಗಳಿಗೆ ಆ ಬಾವಿಯ ನೀರನ್ನೇ ಕುಡಿಸುತ್ತಿದ್ದರು. ಬಾವಿಯ ಮೇಲೆ ಅಗಲವಾದ ದೊಡ್ಡ ಕಲ್ಲನ್ನು ಮುಚ್ಚಲಾಗಿತ್ತು. ಕುರಿಮಂದೆಗಳೆಲ್ಲ ಒಟ್ಟಿಗೆ ಸೇರಿದ ಮೇಲೆ, ಕುರುಬರು ಬಾವಿಯ ಮೇಲಿನ ಕಲ್ಲನ್ನು ಉರುಳಿಸುತ್ತಿದ್ದರು. ಆಮೇಲೆ ಎಲ್ಲಾ ಕುರಿಗಳು ಬಾವಿಯ ನೀರನ್ನು ಕುಡಿಯುತ್ತಿದ್ದವು. ಕುರಿಗಳು ನೀರು ಕುಡಿದಾದ ಮೇಲೆ ಕುರುಬರು ಕಲ್ಲನ್ನು ಮತ್ತೆ ಮುಚ್ಚುತ್ತಿದ್ದರು.

ಯಾಕೋಬನು ಅಲ್ಲಿದ್ದ ಕುರುಬರಿಗೆ, “ಸಹೋದರರೇ, ನೀವು ಎಲ್ಲಿಯವರು?” ಎಂದು ಕೇಳಿದನು.

ಅವರು “ನಾವು ಹಾರಾನಿನವರು” ಎಂದು ಉತ್ತರಕೊಟ್ಟರು.

ನಂತರ ಯಾಕೋಬನು ಅವರಿಗೆ, “ನಾಹೋರನ ಮೊಮ್ಮಗನಾದ ಲಾಬಾನನು ನಿಮಗೆ ಗೊತ್ತೆ?” ಎಂದು ಕೇಳಿದನು.

ಕುರುಬರು, “ನಮಗೆ ಗೊತ್ತು” ಎಂದು ಉತ್ತರಿಸಿದರು.

ಯಾಕೋಬನು, “ಅವನು ಕ್ಷೇಮವಾಗಿರುವನೇ?” ಎಂದು ಕೇಳಿದನು.

ಅವರು, “ಅವನು ಕ್ಷೇಮವಾಗಿದ್ದಾನೆ. ಅಗೋ, ಆ ಕುರಿಗಳೊಂದಿಗೆ ಬರುತ್ತಿರುವವಳೇ ಅವನ ಮಗಳಾದ ರಾಹೇಲಳು” ಎಂದು ಉತ್ತರಿಸಿದರು.

ಯಾಕೋಬನು, “ನೋಡಿ, ಇನ್ನೂ ಹೊತ್ತಾಗಿಲ್ಲ; ರಾತ್ರಿಗಾಗಿ ಕುರಿಗಳನ್ನು ಒಟ್ಟಿಗೆ ಸೇರಿಸುವ ಸಮಯವಾಗಿಲ್ಲ; ನೀರು ಕುಡಿಸಿ ಅವುಗಳನ್ನು ಮೇಯಿಸಿರಿ” ಎಂದನು.

ಆ ಕುರುಬರು, “ಕುರಿಮಂದೆಗಳೆಲ್ಲ ಒಟ್ಟಿಗೆ ಸೇರುವವರೆಗೆ ನಾವು ಬಾವಿಯ ಮೇಲಿರುವ ಕಲ್ಲನ್ನು ತೆಗೆದು ಕುರಿಗಳಿಗೆ ನೀರು ಕುಡಿಸುವಂತಿಲ್ಲ; ಅವು ಒಟ್ಟಿಗೆ ಕೂಡಿಬಂದಾಗಲೇ ನೀರು ಕುಡಿಸುತ್ತೇವೆ” ಎಂದು ಹೇಳಿದರು.

ಯಾಕೋಬನು ಕುರುಬರೊಡನೆ ಮಾತಾಡುತ್ತಿರುವಾಗ ರಾಹೇಲಳು ತನ್ನ ತಂದೆಯ ಕುರಿಗಳೊಡನೆ ಬಂದಳು. (ಕುರಿಗಳನ್ನು ನೋಡಿಕೊಳ್ಳುವುದು ರಾಹೇಲಳ ಕೆಲಸವಾಗಿತ್ತು.) 10 ರಾಹೇಲಳು ಲಾಬಾನನ ಮಗಳು. ಲಾಬಾನನು ಯಾಕೋಬನ ತಾಯಿಯಾದ ರೆಬೆಕ್ಕಳ ಅಣ್ಣ. ಯಾಕೋಬನು ರಾಹೇಲಳನ್ನು ನೋಡಿದಾಗ ಬಾವಿಯ ಮೇಲಿದ್ದ ಕಲ್ಲನ್ನು ತೆಗೆದುಹಾಕಿ ತನ್ನ ತಾಯಿಯ ಅಣ್ಣನಾದ ಲಾಬಾನನ ಕುರಿಗಳಿಗೆ ನೀರು ಕೊಟ್ಟನು. 11 ಬಳಿಕ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ಅತ್ತನು. 12 ಯಾಕೋಬನು ರಾಹೇಲಳಿಗೆ, ತಾನು ಅವಳ ತಂದೆಯ ಕುಟುಂಬದವನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ರಾಹೇಲಳು ಮನೆಗೆ ಓಡಿಹೋಗಿ ತನ್ನ ತಂದೆಗೆ ಈ ಸುದ್ದಿಯನ್ನು ತಿಳಿಸಿದಳು.

13 ಲಾಬಾನನು ತನ್ನ ತಂಗಿಯ ಮಗನಾದ ಯಾಕೋಬನ ವಿಷಯವನ್ನು ಕೇಳಿ ಭೇಟಿಯಾಗಲು ಓಡಿಬಂದನು. ಲಾಬಾನನು ಅವನನ್ನು ಅಪ್ಪಿಕೊಂಡು ಮುದ್ದಿಟ್ಟು ಮನೆಗೆ ಕರೆದುಕೊಂಡು ಬಂದನು. ಯಾಕೋಬನು ನಡೆದ ಪ್ರತಿಯೊಂದನ್ನೂ ಲಾಬಾನನಿಗೆ ತಿಳಿಸಿದನು.

14 ನಂತರ ಲಾಬಾನನು, “ಇದು ಆಶ್ಚರ್ಯವಾಗಿದೆ; ನೀನು ನನ್ನ ಸ್ವಂತ ಕುಟುಂಬದವನು” ಎಂದು ಹೇಳಿದನು. ಆದ್ದರಿಂದ ಯಾಕೋಬನು ಲಾಬಾನನೊಡನೆ ಒಂದು ತಿಂಗಳವರೆಗೆ ಇದ್ದನು.

ರೋಮ್ನಗರದವರಿಗೆ 3:1-8

ಹೀಗಿರಲು, ಯೆಹೂದ್ಯರ ವೈಶಿಷ್ಟವೇನು? ಸುನ್ನತಿ ಮಾಡಿಸಿಕೊಂಡಿರುವುದರಲ್ಲಿ ಏನಾದರೂ ವಿಶೇಷತೆಯಿದೆಯೇ? ಹೌದು, ಯೆಹೂದ್ಯರಿಗೆ ಅನೇಕ ವಿಶೇಷತೆಗಳಿವೆ. ಎಲ್ಲಕ್ಕಿಂತಲೂ ಅತಿಮುಖ್ಯವಾದದ್ದೇನೆಂದರೆ, ದೇವರು ಯೆಹೂದ್ಯರಲ್ಲಿ ಭರವಸವಿಟ್ಟು ತನ್ನ ಉಪದೇಶಗಳನ್ನು ಅವರಿಗೆ ಕೊಟ್ಟನು. ಕೆಲವು ಯೆಹೂದ್ಯರು ದೇವರಿಗೆ ನಂಬಿಗಸ್ತರಾಗಿರಲಿಲ್ಲ ಎಂಬುದೇನೊ ಸತ್ಯ. ಆದರೆ ದೇವರು ತಾನು ಮಾಡಿದ ವಾಗ್ದಾನವನ್ನು ನೆರವೇರಿಸದಂತೆ ಅದು ಮಾಡುತ್ತದೆಯೇ? ಇಲ್ಲ! ಪ್ರತಿಯೊಬ್ಬ ವ್ಯಕ್ತಿ ಸುಳ್ಳುಗಾರನಾದರೂ ದೇವರು ಸತ್ಯವಂತನಾಗಿಯೇ ಇರುತ್ತಾನೆ. ಪವಿತ್ರ ಗ್ರಂಥವು ಹೀಗೆಂದು ಹೇಳುತ್ತದೆ:

“ನಿನ್ನ ಮಾತುಗಳಲ್ಲಿ ನೀನು ನ್ಯಾಯಸ್ಥನೆಂದು ನಿರೂಪಿತನಾಗಬೇಕು.
    ನಿನಗೆ ತೀರ್ಪಾಗುವಾಗ ನೀನು ಜಯಗಳಿಸಬೇಕು.”(A)

ದೇವರು ನ್ಯಾಯವಂತನೆಂಬುದನ್ನು ನಾವು ಮಾಡುವ ತಪ್ಪು ಮತ್ತಷ್ಟು ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಹೀಗಿರಲು, ದೇವರು ನಮ್ಮನ್ನು ಶಿಕ್ಷಿಸುವಾಗ, ಆತನು ಅನ್ಯಾಯ ಮಾಡುತ್ತಿದ್ದಾನೆಂದು ನಾವು ಹೇಳಲು ಸಾಧ್ಯವೇ? (ಬೇರೆ ಕೆಲವು ಜನರಿಗೆ ಇರಬಹುದಾದ ಆಲೋಚನೆಯನ್ನೇ ನಾನು ಇಲ್ಲಿ ಹೇಳುತ್ತಿದ್ದೇನೆ.) ಇಲ್ಲ! ದೇವರು ನಮ್ಮನ್ನು ದಂಡಿಸಲಾಗದಿದ್ದರೆ, ದೇವರು ಲೋಕಕ್ಕೆ ತೀರ್ಪುಮಾಡಲಾಗುವುದಿಲ್ಲ.

“ನಾನಾಡುವ ಸುಳ್ಳು ದೇವರ ಸತ್ಯವನ್ನು ತೋರಿಸುವುದಾದರೆ ನನ್ನ ಸುಳ್ಳಿನಿಂದ ದೇವರಿಗೆ ನಿಜವಾಗಿಯೂ ಮಹಿಮೆಯಾಗುತ್ತದೆ. ಹೀಗಿರಲು ನನಗೆ ‘ಪಾಪಿ’ ಎಂಬ ತೀರ್ಪಾಗುವುದೇಕೆ?” ಎಂದು ಒಬ್ಬನು ಕೇಳಬಹುದು. “ಒಳ್ಳೆಯದಾಗುವಂತೆ ನಾವು ಕೇಡುಮಾಡೋಣ” ಎಂದು ಹೇಳುವುದಕ್ಕೂ ಅದಕ್ಕೂ ಯಾವ ವ್ಯತ್ಯಾಸವಿಲ್ಲ. ಅನೇಕ ಜನರು ನಮ್ಮನ್ನು ಟೀಕಿಸುತ್ತಾರೆ ಮತ್ತು ನಾವು ಅಂಥ ಸಂಗತಿಗಳನ್ನು ಬೋಧಿಸುತ್ತೇವೆ ಎಂದು ಹೇಳುತ್ತಾರೆ. ಆ ಜನರು ತಪ್ಪಿತಸ್ಥರಾಗಿದ್ದಾರೆ. ಅವರಿಗೆ ದಂಡನೆಯಾಗಲೇಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International