Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 87

ತುತಿಗೀತೆ. ರಚನೆಗಾರರು: ಕೋರಹೀಯರು.

87 ದೇವರು ತನ್ನ ಆಲಯವನ್ನು ಜೆರುಸಲೇಮಿನ ಪವಿತ್ರ ಪರ್ವತಗಳ ಮೇಲೆ ಕಟ್ಟಿದ್ದಾನೆ.
    ಯೆಹೋವನು ಚೀಯೋನಿನ ಬಾಗಿಲುಗಳನ್ನು ಇಸ್ರೇಲಿನ ಇತರ ಸ್ಥಳಗಳಿಗಿಂತಲೂ ಹೆಚ್ಚಾಗಿ ಪ್ರೀತಿಸುವನು.
ದೇವರ ಪಟ್ಟಣವೇ, ಜನರು ನಿನ್ನ ಬಗ್ಗೆ ಆಶ್ಚರ್ಯಕರವಾದ ಸಂಗತಿಗಳನ್ನು ಹೇಳುವರು.

ದೇವಜನರು ಪ್ರಪಂಚದ ಅನೇಕ ಕಡೆಗಳಲ್ಲಿ ಈಗ ವಾಸವಾಗಿದ್ದಾರೆ.
    ಅವರಲ್ಲಿ ಕೆಲವರು ಈಜಿಪ್ಟಿನಲ್ಲಿಯೂ ಬಾಬಿಲೋನಿನಲ್ಲಿಯೂ ನೆಲೆಸಿದ್ದಾರೆ.
    ಇನ್ನು ಕೆಲವರು ಫಿಲಿಷ್ಟಿಯದಲ್ಲಿಯೂ ತೂರಿನಲ್ಲಿಯೂ ಇಥಿಯೋಪಿಯದಲ್ಲಿಯೂ ನೆಲೆಸಿದ್ದಾರೆ.
ಚೀಯೋನಿನಲ್ಲಿ ಜನಿಸಿದ ಪ್ರತಿಯೊಬ್ಬರೂ ದೇವರಿಗೆ ಗೊತ್ತು.
    ಮಹೋನ್ನತನಾದ ದೇವರೇ ಆ ಪಟ್ಟಣವನ್ನು ಕಟ್ಟಿದನು.
ದೇವರು ತನ್ನ ಜನರೆಲ್ಲರ ಬಗ್ಗೆ ಪಟ್ಟಿಮಾಡಿದ್ದಾನೆ.
    ಪ್ರತಿಯೊಬ್ಬನ ಹುಟ್ಟಿದ ಸ್ಥಳವು ದೇವರಿಗೆ ತಿಳಿದಿದೆ.

ದೇವರ ಮಕ್ಕಳು ಹಬ್ಬಗಳನ್ನು ಆಚರಿಸಲು ಜೆರುಸಲೇಮಿಗೆ ಹೋಗುವರು.
    ಅವರು ಸಂತೋಷದಿಂದ ಹಾಡುತ್ತಾ ಕುಣಿದಾಡುವರು.
    “ಒಳ್ಳೆಯವುಗಳೆಲ್ಲ ಬರುವುದು ಜೆರುಸಲೇಮಿನಿಂದಲೇ” ಎಂದು ಅವರು ಹೇಳುವರು.

ಯೋವೇಲ 3:1-8

ಯೆಹೂದದ ವೈರಿಗೆ ಯೆಹೋವನ ಶಿಕ್ಷೆಯ ವಾಗ್ದಾನ

“ಆ ಸಮಯದಲ್ಲಿ ನಾನು ಯೆಹೂದ ಮತ್ತು ಜೆರುಸಲೇಮನ್ನು ಸೆರೆಯಿಂದ ಹಿಂದಕ್ಕೆ ತರಿಸುವೆನು. ಮತ್ತು ಎಲ್ಲಾ ಜನಾಂಗಗಳನ್ನು ನಾನು ಒಟ್ಟುಗೂಡಿಸುವೆನು. ಆ ದೇಶಗಳನ್ನು ಯೆಹೋಷಾಫಾಟ್ ತಗ್ಗಿಗೆ[a] ಕರೆತರುವೆನು. ಅಲ್ಲಿ ಅವರಿಗೆ ನ್ಯಾಯತೀರಿಸುವೆನು. ಆ ದೇಶಗಳವರು ನನ್ನ ಜನರಾದ ಇಸ್ರೇಲರನ್ನು ಚದರಿಸಿದ್ದರು. ಅವರನ್ನು ಪರದೇಶಗಳಲ್ಲಿ ವಾಸಿಸುವಂತೆ ಮಾಡಿದರು. ಆದ್ದರಿಂದ ಆ ದೇಶಗಳವರನ್ನು ನಾನು ಶಿಕ್ಷಿಸುವೆನು. ಆ ದೇಶದವರು ನನ್ನ ದೇಶವನ್ನು ವಿಭಜಿಸಿದರು. ನನ್ನ ಜನರಿಗಾಗಿ ಚೀಟು ಹಾಕಿದರು. ಅವರು ಹುಡುಗರನ್ನು ಮಾರಿ ಸೂಳೆಯನ್ನು ಕೊಂಡುಕೊಂಡರು; ಹುಡುಗಿಯರನ್ನು ಮಾರಿ ದ್ರಾಕ್ಷಾರಸವನ್ನು ಕೊಂಡುಕೊಂಡರು.

“ತೂರೇ, ಸೀದೋನೇ, ಫಿಲಿಷ್ಟಿಯ ದೇಶಗಳೇ, ನೀವು ನನಗೆ ಎಷ್ಟರವರು? ನಾನು ಮಾಡಿದುದಕ್ಕೆ ನೀವು ನನ್ನನ್ನು ಶಿಕ್ಷಿಸುತ್ತೀರಾ? ನೀವು ಒಂದುವೇಳೆ ನನ್ನನ್ನು ಶಿಕ್ಷಿಸುತ್ತಿದ್ದೀರಿ ಎಂದು ನೆನಸಬಹುದು. ಆದರೆ ನಾನು ಬೇಗನೇ ನಿಮ್ಮನ್ನು ಶಿಕ್ಷಿಸುವೆನು. ನೀವು ನನ್ನ ಬೆಳ್ಳಿಬಂಗಾರವನ್ನು ಕದ್ದುಕೊಂಡು ಹೋದಿರಿ. ನನ್ನ ಅಮೂಲ್ಯವಾದ ಸಂಪತ್ತನ್ನು ಕೊಂಡು ಹೋಗಿ ನಿಮ್ಮ ಪೂಜಾಸ್ಥಳಗಳಲ್ಲಿ ಇಟ್ಟಿರಿ.

“ನೀವು ಯೆಹೂದ ಮತ್ತು ಜೆರುಸಲೇಮಿನ ಜನರನ್ನು ಗ್ರೀಕರಿಗೆ ಮಾರಿಬಿಟ್ಟಿರಿ. ಆ ರೀತಿಯಾಗಿ ಅವರನ್ನು ಅವರ ದೇಶದಿಂದ ಬಹಳ ದೂರ ತೆಗೆದುಬಿಟ್ಟಿರಿ. ಆ ದೂರದ ಸ್ಥಳಗಳಿಗೆ ನನ್ನ ಜನರನ್ನು ಕಳುಹಿಸಿದಿರಿ, ಆದರೆ ನಾನು ಅವರನ್ನು ಹಿಂದೆ ತರುವೆನು. ಮತ್ತು ನೀವು ಮಾಡಿದ ಕೃತ್ಯಕ್ಕೆ ನಾನು ನಿಮ್ಮನ್ನು ಶಿಕ್ಷಿಸುವೆನು. ನಿಮ್ಮ ಗಂಡು ಹೆಣ್ಣುಮಕ್ಕಳನ್ನು ನಾನು ಯೆಹೂದದ ಜನರಿಗೆ ಮಾರುವೆನು. ಅವರು ಅವರನ್ನು ಬಹುದೂರದಲ್ಲಿ ಶೆಬದ ಜನರಿಗೆ ಮಾರಿಬಿಡುವರು.” ಇದು ಯೆಹೋವನ ನುಡಿ.

1 ಪೇತ್ರನು 4:12-19

ಕ್ರೈಸ್ತನಾಗಿ ಸಂಕಟಪಡುವುದು

12 ನನ್ನ ಸ್ನೇಹಿತರೇ, ನೀವು ಈಗ ಅನುಭವಿಸುತ್ತಿರುವ ಸಂಕಟಗಳ ವಿಷಯದಲ್ಲಿ ಆಶ್ಚರ್ಯಪಡದಿರಿ. ಅವು ನಿಮ್ಮ ನಂಬಿಕೆಯನ್ನು ಪರೀಕ್ಷಿಸುತ್ತಿವೆ. ವಿಪರೀತವಾದದ್ದು ನಿಮಗೆ ಸಂಭವಿಸುತ್ತಿದೆಯೆಂದು ಯೋಚಿಸದಿರಿ. 13 ಆದರೆ ನೀವು ಕ್ರಿಸ್ತನ ಸಂಕಟಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಂತೋಷಿಸಿರಿ. ಕ್ರಿಸ್ತನು ತನ್ನ ಮಹಿಮೆಯನ್ನು ತೋರ್ಪಡಿಸುವಾಗ ನೀವು ಸಂತೋಷಪಡುವಿರಿ ಮತ್ತು ಆನಂದಿಸುವಿರಿ. 14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ. 15 ನೀವು ಕೆಡುಕರಾಗಬಾರದು ಅಂದರೆ ಕೊಲೆಗಾರರಾಗಬಾರದು, ಕಳ್ಳರಾಗಬಾರದು ಮತ್ತು ಇತರರಿಗೆ ತೊಂದರೆ ಕೊಡಬಾರದು. ಇಂಥವುಗಳನ್ನು ಮಾಡುವವನು ಸಂಕಟಕ್ಕೆ ಒಳಗಾಗುವನು. ನಿಮ್ಮಲ್ಲಿ ಯಾರೂ ಆ ರೀತಿಯ ಸಂಕಟಕ್ಕೆ ಒಳಗಾಗಬಾರದು. 16 ನೀವು ಕ್ರೈಸ್ತರಾಗಿರುವುದರಿಂದ ಸಂಕಟಪಟ್ಟರೆ, ನಾಚಿಕೊಳ್ಳಬಾರದು. ಆ (ಕ್ರೈಸ್ತ) ಹೆಸರಿನ ನಿಮಿತ್ತ ನೀವು ದೇವರಿಗೆ ಸ್ತೋತ್ರ ಮಾಡಬೇಕು. 17 ನಿಮ್ಮ ನ್ಯಾಯನಿರ್ಣಯದ ಕಾಲ ಬಂದಿದೆ. ಅದು ದೇವರ ಕುಟುಂಬದಿಂದಲೇ ಆರಂಭವಾಗುವುದು. ನಮ್ಮಲ್ಲಿಯೇ ಅದು ಆರಂಭವಾದರೆ, ದೇವರ ಸುವಾರ್ತೆಗೆ ವಿಧೇಯರಾಗದ ಜನರಿಗೆ ಏನಾಗಬಹುದು?

18 “ನೀತಿವಂತನೇ ರಕ್ಷಣೆ ಹೊಂದಲು ಕಷ್ಟವಾದರೆ,
    ಭಕ್ತಿಹೀನನ ಮತ್ತು ಪಾಪಿಷ್ಠನ ಗತಿಯೇನು?”(A)

19 ಆದ್ದರಿಂದ ದೇವರ ಅಪೇಕ್ಷೆಯಂತೆ ಸಂಕಟಪಡುವವರು ತಮ್ಮ ಜೀವಾತ್ಮಗಳನ್ನು ಆತನಿಗೆ ಒಪ್ಪಿಸಿಕೊಡಬೇಕು. ಅವರನ್ನು ಸೃಷ್ಟಿಸಿದಾತನು ದೇವರೇ. ಆದ್ದರಿಂದ ಅವರು ಆತನಲ್ಲಿ ಭರವಸವಿಡತಕ್ಕದ್ದು. ಹೀಗಿರಲಾಗಿ ಅವರು ಒಳ್ಳೆಯದನ್ನು ಮಾಡುತ್ತಲೇ ಇರಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International