Revised Common Lectionary (Semicontinuous)
ರಚನೆಗಾರ: ದಾವೀದ.
65 ದೇವರೇ, ಚೀಯೋನಿನಲ್ಲಿ ನಾವು ನಿನ್ನನ್ನು ಸ್ತುತಿಸುವೆವು.
ನಾವು ಮಾಡಿದ ಹರಕೆಗಳನ್ನು ನಿನಗೆ ಸಲ್ಲಿಸುವೆವು.
2 ಪ್ರಾರ್ಥನೆಯನ್ನು ಕೇಳುವಾತನೇ,
ಜನರೆಲ್ಲರೂ ನಿನ್ನ ಬಳಿಗೆ ಬರುವರು.
3 ನಮ್ಮ ಪಾಪಗಳು ಹೊರಲಾರದಷ್ಟು ಭಾರವಾಗಿವೆ;
ನಮ್ಮನ್ನು ಆ ಪಾಪಗಳಿಂದ ಬಿಡಿಸು.
4 ನಿನ್ನ ಸೇವಕರನ್ನು ಆರಿಸಿಕೊಂಡಾತನು ನೀನೇ.
ನಿನ್ನ ಆಲಯಕ್ಕೆ ಬಂದು ನಿನ್ನನ್ನು ಆರಾಧಿಸಲು
ನಮ್ಮನ್ನು ಆರಿಸಿಕೊಂಡಾತನು ನೀನೇ.
ನಿನ್ನ ಮಹಾಪವಿತ್ರ ಆಲಯದ ಸೌಭಾಗ್ಯದಿಂದ
ನಾವು ಉಲ್ಲಾಸಗೊಂಡಿದ್ದೇವೆ.
5 ನಮ್ಮ ರಕ್ಷಕನಾದ ದೇವರೇ,
ನೀತಿವಂತರ ಪ್ರಾರ್ಥನೆಗೆ ಸದುತ್ತರವನ್ನು ದಯಪಾಲಿಸು;
ಅವರಿಗೋಸ್ಕರ ಮಹತ್ಕಾರ್ಯಗಳನ್ನು ನಡೆಸು.
ಸರ್ವಭೂನಿವಾಸಿಗಳ ನಂಬಿಕೆಗೆ ನೀನೇ ಆಧಾರ.
6 ಸ್ವಬಲದಿಂದ ಪರ್ವತಗಳನ್ನು ನಿರ್ಮಿಸಿದಾತನು ದೇವರೇ.
ಆತನು “ಶೌರ್ಯ” ಎಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾನೆ.
7 ಭೋರ್ಗರೆಯುವ ಸಮುದ್ರಗಳನ್ನೂ
ಅನ್ಯಜನಾಂಗಗಳ ದಂಗೆಯನ್ನೂ ಶಾಂತಗೊಳಿಸುವಾತನು ದೇವರೇ.
8 ಭೂಲೋಕದಾದ್ಯಂತದಲ್ಲಿರುವ ಜನರು ನಿನ್ನ ಮಹತ್ಕಾರ್ಯಗಳಿಂದ ಆಶ್ಚರ್ಯಚಕಿತರಾಗಿದ್ದಾರೆ.
ಸೂರ್ಯೋದಯವೂ ಸೂರ್ಯಸ್ತಮಾನವೂ ನಮ್ಮನ್ನು ಹರ್ಷಗೊಳಿಸುತ್ತವೆ.
9 ದೇವರೇ, ಭೂಪಾಲಕನು ನೀನೇ.
ಭೂಮಿಗೆ ನೀರೆರೆದು ಹದಗೊಳಿಸುವಾತನು ನೀನೇ.
ತೊರೆಗಳನ್ನು ತುಂಬಿಸಿ
ಸುಗ್ಗಿಯನ್ನು ಬರಮಾಡುವಾತನು ನೀನೇ.
10 ಉತ್ತಿರುವ ಹೊಲಗಳ ಮೇಲೆ ಮಳೆ ಸುರಿಸಿ,
ಹೆಂಟೆಗಳನ್ನು ಕರಗಿಸಿ,
ಭೂಮಿಯನ್ನು ಮೃದುಗೊಳಿಸಿ,
ಎಳೆ ಸಸಿಗಳನ್ನು ಬೆಳೆಸುವಾತನು ನೀನೇ.
11 ಹೊಸ ವರ್ಷವನ್ನು ಸಮೃದ್ಧಿಕರವಾದ ಸುಗ್ಗಿಯೊಂದಿಗೆ ಆರಂಭಿಸುವಾತನು ನೀನೇ.
ಅನೇಕ ಬೆಳೆಗಳಿಂದ ಬಂಡಿಗಳನ್ನು ತುಂಬಿಸುವಾತನು ನೀನೇ.
12 ಅರಣ್ಯವು ಹುಲ್ಲಿನಿಂದ ಆವೃತವಾಗಿದೆ.
ಬೆಟ್ಟಗುಡ್ಡಗಳು ಸಮೃದ್ಧಿಕರ ಫಸಲಿನಿಂದ ಕಂಗೊಳಿಸುತ್ತವೆ.
13 ಹುಲ್ಲುಗಾವಲುಗಳು ಕುರಿಗಳಿಂದ ತುಂಬಿಹೋಗಿವೆ.
ಕಣಿವೆಗಳು ಧಾನ್ಯದಿಂದ ತುಂಬಿತುಳುಕುತ್ತಿವೆ.
ಎಲ್ಲರೂ ಹಾಡುತ್ತಾ ಆನಂದಘೋಷ ಮಾಡುತ್ತಿದ್ದಾರೆ.
ಮಿಡತೆಗಳು ಬೆಳೆಯನ್ನು ನಾಶಮಾಡುವವು
1 ಪೆತೂವೇಲನ ಮಗನಾದ ಯೋವೇಲನು ಯೆಹೋವನಿಂದ ಈ ಸಂದೇಶವನ್ನು ಪಡೆದನು.
2 ನಾಯಕರೇ, ಈ ಸಂದೇಶಕ್ಕೆ ಕಿವಿಗೊಡಿರಿ.
ದೇಶದಲ್ಲಿ ವಾಸಿಸುವ ಎಲ್ಲಾ ಜನರೇ, ನನ್ನ ಮಾತುಗಳನ್ನು ಆಲೈಸಿರಿ.
ನಿಮ್ಮ ಜೀವಮಾನಕಾಲದಲ್ಲಿ ಇಂಥಾ ಸಂಗತಿ ಎಂದಾದರೂ ಸಂಭವಿಸಿದೆಯೋ? ಇಲ್ಲ!
ನಿಮ್ಮ ತಂದೆಗಳ ಕಾಲದಲ್ಲಿಯಾದರೂ ಇಂಥಾ ಸಂಗತಿಗಳು ಸಂಭವಿಸಿದೆಯೋ? ಇಲ್ಲ!
3 ಇವುಗಳನ್ನು ನೀವು ನಿಮ್ಮ ಮಕ್ಕಳಿಗೆ ತಿಳಿಸುವಿರಿ.
ಮತ್ತು ನಿಮ್ಮ ಮಕ್ಕಳು ಅವರ ಮಕ್ಕಳಿಗೆ ತಿಳಿಸುವರು.
ಮತ್ತು ನಿಮ್ಮ ಮೊಮ್ಮಕ್ಕಳು ಅವರ ನಂತರದ ಪೀಳಿಗೆಗೆ ತಿಳಿಸುವರು.
4 ಚೂರಿ ಮಿಡತೆ ತಿಂದುಬಿಟ್ಟಿದ್ದನ್ನು
ಗುಂಪು ಮಿಡತೆ ತಿಂದಿತು.
ಗುಂಪು ಮಿಡತೆ ತಿಂದುಬಿಟ್ಟದ್ದನ್ನು
ಹಾರುವ ಮಿಡತೆ ತಿಂದಿತು.
ಹಾರುವ ಮಿಡತೆ ತಿಂದು ಉಳಿದದ್ದನ್ನು
ನಾಶಮಾಡುವ ಮಿಡತೆ ತಿಂದುಬಿಟ್ಟಿತು.
ಮಿಡತೆಗಳು ಆಗಮಿಸಿದವು
5 ಅಮಲೇರಿದವರೇ, ಎಚ್ಚರಗೊಂಡು ಅಳಿರಿ.
ದ್ರಾಕ್ಷಾರಸವನ್ನು ಕುಡಿಯುವವರೇ, ಅಳಿರಿ.
ಯಾಕೆಂದರೆ ನಿಮ್ಮ ಸಿಹಿಯಾದ ದ್ರಾಕ್ಷಾರಸವು ಮುಗಿದುಹೋಯಿತು.
ಆ ದ್ರಾಕ್ಷಾರಸದ ಸವಿಯು ನಿಮಗೆ ಇನ್ನು ಸಿಗದು.
6 ನನ್ನ ಜನಾಂಗಕ್ಕೆ ವಿರುದ್ಧವಾಗಿ ಬಲಶಾಲಿಯಾದ ದೊಡ್ಡ ರಾಜ್ಯವು ಯುದ್ಧಕ್ಕೆ ಬರುವದು.
ಅವರು ಸೈನಿಕರನ್ನು ಲೆಕ್ಕಿಸಲು ಸಾಧ್ಯವಿಲ್ಲ.
ಆ ಮಿಡತೆಗಳಂತಿರುವ ಸೈನಿಕರು ನಿಮ್ಮನ್ನು ಸೀಳಿಬಿಡುವರು.
ಅವರ ಹಲ್ಲುಗಳು ಸಿಂಹದ ಹಲ್ಲಿನಂತಿವೆ.
7 ಆ ಮಿಡತೆಗಳು ನನ್ನ ದ್ರಾಕ್ಷಿತೋಟದ
ಹಣ್ಣುಗಳನ್ನೆಲ್ಲಾ ತಿಂದುಬಿಡುವವು.
ನನ್ನ ಅಂಜೂರದ ಮರಗಳನ್ನು ನಾಶಮಾಡುವವು.
ನನ್ನ ಮರಗಳ ತೊಗಟೆಗಳನ್ನು ಮಿಡತೆಗಳು ತಿಂದುಬಿಡುವವು.
ಅದರ ಕೊಂಬೆಗಳು ಬಿಳುಪಾಗುವವು.
ಮರಗಳು ನಾಶವಾಗುವವು.
ಜನರು ಬೊಬ್ಬಿಡುತ್ತಾರೆ
8 ಮದುಮಗನು ಸತ್ತುಹೋದಾಗ
ಮದುಮಗಳು ಗೋಳಾಡುವಂತೆ ನೀವು ಗೋಳಾಡಿರಿ.
9 ಯಾಜಕರೇ, ಯೆಹೋವನ ಸೇವಕರೇ, ಗೋಳಾಡಿರಿ.
ಯಾಕೆಂದರೆ ಇನ್ನು ಮುಂದೆ ಯೆಹೋವನ ಆಲಯದಲ್ಲಿ ಪಾನ ಮತ್ತು ಧಾನ್ಯಾರ್ಪಣೆ ಇರದು.
10 ಹೊಲಗದ್ದೆಗಳೆಲ್ಲಾ ನಾಶವಾದವು.
ಭೂಮಿಯೂ ಗೋಳಾಡುತ್ತಿರುವುದು.
ಯಾಕೆಂದರೆ ಧಾನ್ಯವು ನಾಶವಾದವು.
ಹೊಸ ದ್ರಾಕ್ಷಾರಸವು ಬತ್ತಿಹೋಯಿತು.
ಎಣ್ಣೆಯು ಇಲ್ಲದೆಹೋಯಿತು.
11 ರೈತರೇ, ದುಃಖಿಸಿರಿ,
ದ್ರಾಕ್ಷಿತೋಟ ಮಾಡಿದವರೇ, ಗಟ್ಟಿಯಾಗಿ ಬೊಬ್ಬಿಡಿರಿ.
ಗೋದಿಗಾಗಿಯೂ, ಜವೆಗೋದಿಗಾಗಿಯೂ ಅಳಿರಿ.
ಯಾಕೆಂದರೆ ಬೆಳೆಯು ನಾಶವಾಯಿತು.
12 ದ್ರಾಕ್ಷಿಬಳ್ಳಿಗಳು ಒಣಗಿಹೋಗಿವೆ
ಮತ್ತು ಅಂಜೂರದ ಮರವು ಸಾಯುತ್ತಲಿದೆ.
ದಾಳಿಂಬದ ಮರ, ಖರ್ಜೂರದ ಮರ, ಸೇಬಿನ ಮರ,
ತೋಟದಲ್ಲಿರುವ ಎಲ್ಲಾ ಮರಗಳು ಒಣಗಿಹೋಗಿವೆ.
ಜನರಲ್ಲಿರುವ ಸಂತೋಷವೂ ಬತ್ತಿಹೋಗಿದೆ.
13 ಯಾಜಕರೇ, ನೀವು ನಿಮ್ಮ ಶೋಕವಸ್ತ್ರವನ್ನು ಧರಿಸಿ ಗಟ್ಟಿಯಾಗಿ ರೋಧಿಸಿರಿ.
ವೇದಿಕೆಯಲ್ಲಿ ಸೇವೆಮಾಡುವವರೇ, ಗಟ್ಟಿಯಾಗಿ ರೋಧಿಸಿರಿ.
ನನ್ನ ದೇವರ ಸೇವಕರೇ, ನೀವು ನಿಮ್ಮ ಶೋಕವಸ್ತ್ರಗಳಲ್ಲಿಯೇ ನಿದ್ರೆಮಾಡಿರಿ.
ಯಾಕೆಂದರೆ ಇನ್ನು ದೇವಾಲಯದಲ್ಲಿ ಧಾನ್ಯ ಮತ್ತು ಪಾನಸಮರ್ಪಣೆ ಇಲ್ಲ.
ಮಿಡತೆಗಳ ಭಯಂಕರ ನಾಶನ
14 ಉಪವಾಸ ದಿನವನ್ನು ಗೊತ್ತುಪಡಿಸಿರಿ. ಆ ದಿನಕ್ಕಾಗಿ ಜನರನ್ನು ಒಟ್ಟುಗೂಡಿಸಿರಿ. ದೇಶದಲ್ಲಿ ವಾಸವಾಗಿರುವ ನಾಯಕರುಗಳೆಲ್ಲರನ್ನೂ ಜನರನ್ನೂ ಒಟ್ಟುಗೂಡಿಸಿರಿ; ನಿಮ್ಮ ದೇವರಾದ ಯೆಹೋವನ ಆಲಯಕ್ಕೆ ಅವರನ್ನೆಲ್ಲ ಪ್ರಾರ್ಥನೆಗಾಗಿ ಕರೆದುಕೊಂಡು ಬನ್ನಿರಿ.
15 ಶೋಕಿಸಿರಿ. ಯಾಕೆಂದರೆ ಯೆಹೋವನ ಮಹಾದಿನವು ಹತ್ತಿರ ಬಂತು. ಆ ಸಮಯದಲ್ಲಿ ಸರ್ವಶಕ್ತನಾದ ದೇವರ ಸನ್ನಿಧಾನದಿಂದ ದಂಡನೆಯು ಬರುವುದು. 16 ನಮಗೆ ಆಹಾರವು ಇಲ್ಲದೆ ಹೋಯಿತು. ಆನಂದವೂ ಸಂತೋಷವೂ ನಮ್ಮ ದೇವಾಲಯದಿಂದ ಹೊರಟುಹೋದವು. 17 ನಾವು ಬೀಜ ಬಿತ್ತಿದೆವು. ಆದರೆ ಅವು ಒಣಗಿ, ಸತ್ತು ಈಗ ನೆಲದ ಮೇಲೆ ಬಿದ್ದಿವೆ. ನಮ್ಮ ಗಿಡಗಳೆಲ್ಲಾ ಒಣಗಿ ಸತ್ತಿವೆ. ನಮ್ಮ ಉಗ್ರಾಣವು ಬರಿದಾಗಿದ್ದು ಬೀಳುತ್ತಲಿದೆ.
18 ಪ್ರಾಣಿಗಳು ಹಸಿವಿನಿಂದ ನರಳಾಡುತ್ತಿವೆ. ಪ್ರಾಣಿಗಳ ಹಿಂಡು ಗಲಿಬಿಲಿಗೊಂಡು ಅಡ್ಡಾಡುತ್ತವೆ. ಅವುಗಳಿಗೆ ತಿನ್ನಲು ಹುಲ್ಲು ಇಲ್ಲ. ಕುರಿಗಳು ಸಾಯುತ್ತಿವೆ. 19 ಯೆಹೋವನೇ, ಸಹಾಯಕ್ಕಾಗಿ ನಾನು ನಿನಗೆ ಮೊರೆಯಿಡುತ್ತಿದ್ದೇನೆ. ನಮ್ಮ ಹಸಿರು ಹೊಲಗದ್ದೆಗಳು ಬೆಂಕಿಯಿಂದ ಮರುಭೂಮಿಯಾದವು. ಹೊಲದಲ್ಲಿದ್ದ ಮರಗಳನ್ನೆಲ್ಲಾ ಬೆಂಕಿಯು ದಹಿಸಿತು. 20 ಕಾಡುಪ್ರಾಣಿಗಳೂ ಬಾಯಾರಿ ನಿನ್ನ ಕಡೆಗೆ ನೋಡುತ್ತಿವೆ. ನೀರಿನ ತೊರೆಗಳು ಬತ್ತಿಹೋಗಿವೆ. ನೀರೇ ಇಲ್ಲ. ನಮ್ಮ ಹಸಿರು ಹುಲ್ಲುಗಾವಲು ಬೆಂಕಿಯ ದೆಸೆಯಿಂದ ಮರುಭೂಮಿಯಾಗಿರುತ್ತದೆ.
ಕೊನೆಯ ದಿನಗಳು
3 ನೆನಪಿನಲ್ಲಿಡಿರಿ! ಕಡೇ ದಿನಗಳಲ್ಲಿ ಅನೇಕ ತೊಂದರೆಗಳು ಬರುತ್ತವೆ. 2 ಆ ಕಾಲದಲ್ಲಿ ಜನರು ಸ್ವಾರ್ಥಿಗಳಾಗಿರುತ್ತಾರೆ, ಹಣದಾಸೆ ಉಳ್ಳವರಾಗಿರುತ್ತಾರೆ; ಬಡಾಯಿಕೊಚ್ಚುವವರಾಗಿರುತ್ತಾರೆ; ಗರ್ವಿಷ್ಠರಾಗಿರುತ್ತಾರೆ; ಚಾಡಿಕೋರರಾಗಿರುತ್ತಾರೆ; ತಂದೆತಾಯಿಗಳಿಗೆ ಅವಿಧೇಯರಾಗಿರುತ್ತಾರೆ; ಕೃತಜ್ಞತೆಯಿಲ್ಲದವರಾಗಿರುತ್ತಾರೆ; ಅಪವಿತ್ರರಾಗಿರುತ್ತಾರೆ; 3 ಇತರರನ್ನು ಪ್ರೀತಿಸದವರಾಗಿರುತ್ತಾರೆ; ಕ್ಷಮಿಸದವರಾಗಿರುತ್ತಾರೆ; ದೂಷಿಸುವವರಾಗಿರುತ್ತಾರೆ. ತಮ್ಮ ಮೇಲೆ ತಮಗೇ ಹತೋಟಿಯಿಲ್ಲದವರಾಗಿರುತ್ತಾರೆ; ಉತ್ತಮವಾದದ್ದನ್ನು ದ್ವೇಷಿಸುವವರಾಗಿರುತ್ತಾರೆ; ಕೋಪಿಷ್ಠರಾಗಿರುತ್ತಾರೆ; ಸಂಕುಚಿತ ಗುಣವುಳ್ಳವರಾಗಿರುತ್ತಾರೆ. 4 ಕೊನೆಯ ದಿನಗಳಲ್ಲಿ ಜನರು ಮಿತ್ರದ್ರೋಹಿಗಳಾಗಿರುತ್ತಾರೆ; ದುಡುಕಿ ಮೂರ್ಖ ಕೆಲಸಗಳನ್ನು ಮಾಡುವವರಾಗಿರುತ್ತಾರೆ; ಜಂಬದಿಂದ ಉಬ್ಬಿಕೊಂಡವರಾಗಿರುತ್ತಾರೆ; ದೇವರನ್ನು ಪ್ರೀತಿಸದೆ ವಿಲಾಸಪ್ರಿಯರಾಗಿರುತ್ತಾರೆ; 5 ಆ ಜನರು ತಾವು ದೇವರ ಸೇವೆ ಮಾಡುತ್ತಿರುವುದಾಗಿ ನಟಿಸುತ್ತಲೇ ಇರುವರು. ಆದರೆ ಅವರು ನಿಜವಾಗಿಯೂ ದೇವರ ಸೇವೆ ಮಾಡುತ್ತಿಲ್ಲವೆಂಬುದನ್ನು ಅವರ ಜೀವಿತವೇ ತೋರ್ಪಡಿಸುತ್ತದೆ. ತಿಮೊಥೆಯನೇ, ಅಂತಹ ಜನರಿಂದ ದೂರವಾಗಿರು.
6 ಅವರಲ್ಲಿ ಕೆಲವರು ಮನೆಗಳಿಗೆ ನುಸುಳಿಕೊಂಡು ಹೋಗಿ, ಪಾಪಿಷ್ಠರಾದ ಸ್ತ್ರೀಯರನ್ನು ವಶಪಡಿಸಿಕೊಳ್ಳುತ್ತಾರೆ. ಆ ಸ್ತ್ರೀಯರು ಅನೇಕ ಪಾಪದೋಷಗಳಿಂದ ತುಂಬಿದವರಾಗಿದ್ದಾರೆ. 7 ಆ ಸ್ತ್ರೀಯರು ಯಾವಾಗಲೂ ಹೊಸ ಉಪದೇಶಗಳನ್ನು ಕಲಿಯಲು ಪ್ರಯತ್ನಿಸಿದರೂ ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅವರಿಗೆ ಸಾಧ್ಯವೇ ಇಲ್ಲ. 8 ಯನ್ನ ಮತ್ತು ಯಂಬ್ರರನ್ನು ನೆನಪುಮಾಡಿಕೊ. ಅವರು ಮೋಶೆಯನ್ನು ವಿರೋಧಿಸಿದರು. ಈ ಜನರೂ ಅವರಂತೆಯೇ. ಅವರು ಸತ್ಯವನ್ನು ವಿರೋಧಿಸುತ್ತಾರೆ. ಆ ಜನರ ಆಲೋಚನೆಗಳೆಲ್ಲ ಗಲಿಬಿಲಿಗೊಂಡಿವೆ. ಅವರು ನಂಬಿಕೆಯನ್ನು ಅನುಸರಿಸುವ ತಮ್ಮ ಪ್ರಯತ್ನದಲ್ಲಿ ಸೋತುಹೋಗಿದ್ದಾರೆ. 9 ಅವರ ಕಾರ್ಯಗಳಲ್ಲಿ ಅವರಿಗೆ ಯಶಸ್ಸಾಗುವುದಿಲ್ಲ. ಅವರು ಮೂರ್ಖರೆಂಬುದು ಜನರೆಲ್ಲರಿಗೂ ಕಾಣುತ್ತದೆ. ಯನ್ನ, ಯಂಬ್ರರಿಗೆ ಹೀಗೆಯೇ ಆಯಿತು.
Kannada Holy Bible: Easy-to-Read Version. All rights reserved. © 1997 Bible League International