Revised Common Lectionary (Semicontinuous)
ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ.
129 ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು.
ಇಸ್ರೇಲೇ, ಆ ಶತ್ರುಗಳ ಬಗ್ಗೆ ನಮಗೆ ಹೇಳು.
2 ನನ್ನ ಜೀವಮಾನವೆಲ್ಲಾ ನನಗೆ ಅನೇಕ ಶತ್ರುಗಳಿದ್ದರು.
ಆದರೆ ಅವರೆಂದೂ ಗೆಲ್ಲಲಿಲ್ಲ.
3 ನನ್ನ ಬೆನ್ನಿನ ಮೇಲೆ ಹೊಡೆದು
ಹೊಲವನ್ನು ಉಳುವಂತೆ ಗಾಯ ಮಾಡಿದರು.
4 ಆದರೆ ನೀತಿಸ್ವರೂಪನಾದ ಯೆಹೋವನು ಹಗ್ಗಗಳನ್ನು ಕತ್ತರಿಸಿ
ಆ ದುಷ್ಟರಿಂದ ನನ್ನನ್ನು ಬಿಡುಗಡೆ ಮಾಡಿದನು.
5 ಚೀಯೋನನ್ನು ದ್ವೇಷಿಸಿದ ಜನರು ಸೋತುಹೋದರು.
ಅವರು ಹೋರಾಟವನ್ನು ನಿಲ್ಲಿಸಿ ಓಡಿಹೋದರು.
6 ಅವರು ಮನೆಯ ಮೇಲೆ ಬೆಳೆಯುವ ಹುಲ್ಲಿನಂತಿದ್ದರು.
ಅದು ಬೆಳೆಯುವುದಕ್ಕಿಂತ ಮೊದಲೇ ಒಣಗಿಹೋಗುವುದು.
7 ಅದನ್ನು ಕೊಯ್ಯುವವನ ಹಿಡಿಯೂ ತುಂಬುವುದಿಲ್ಲ
ಸಿವುಡು ಕಟ್ಟುವವನ ಉಡಿಲೂ ತುಂಬುವುದಿಲ್ಲ.
8 ಅವರ ಸಮೀಪದಲ್ಲಿ ನಡೆದುಹೋಗುವವರು,
“ಯೆಹೋವನು ನಿಮ್ಮನ್ನು ಆಶೀರ್ವದಿಸಲಿ” ಎಂದು ಹೇಳುವುದಿಲ್ಲ.
“ಯೆಹೋವನ ಹೆಸರಿನಲ್ಲಿ ನಿಮಗೆ ಆಶೀರ್ವಾದವಾಗಲಿ”
ಎಂದು ಜನರು ಅವರನ್ನು ಆಶೀರ್ವದಿಸುವುದಿಲ್ಲ.
ಚಿದ್ಕೀಯನು ಯೆರೆಮೀಯನಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದು
14 ರಾಜನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ಒಬ್ಬನ ಮೂಲಕ ಯೆಹೋವನ ಆಲಯದ ಮೂರನೇ ಪ್ರವೇಶದ್ವಾರಕ್ಕೆ ಕರೆಸಿದನು. ರಾಜನು ಅವನಿಗೆ, “ಯೆರೆಮೀಯನೇ, ನಾನು ನಿನಗೆ ಒಂದು ವಿಷಯವನ್ನು ಕೇಳಲಿದ್ದೇನೆ. ನನ್ನಿಂದ ಏನನ್ನೂ ಮುಚ್ಚಿಡಬೇಡ. ಎಲ್ಲವನ್ನು ಪ್ರಾಮಾಣಿಕವಾಗಿ ನನಗೆ ಹೇಳು” ಎಂದನು.
15 ಅದಕ್ಕೆ ಯೆರೆಮೀಯನು, “ನಾನು ಉತ್ತರಕೊಟ್ಟರೆ ನೀನು ಬಹುಶಃ ನನ್ನನ್ನು ಕೊಂದುಬಿಡುವೆ, ಸಲಹೆ ಕೊಟ್ಟರೆ ನೀನು ನನ್ನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವದಿಲ್ಲ” ಎಂದು ಹೇಳಿದನು.
16 ಆದರೆ ರಾಜನಾದ ಚಿದ್ಕೀಯನು ಯೆರೆಮೀಯನಿಗೆ ರಹಸ್ಯವಾಗಿ, “ಯೆರೆಮೀಯನೇ, ನಮಗೆ ಉಸಿರನ್ನೂ ಜೀವವನ್ನೂ ದಯಪಾಲಿಸಿದ ಯೆಹೋವನ ಆಣೆಯಾಗಿ ಹೇಳುತ್ತೇನೆ, ನಾನು ನಿನ್ನನ್ನು ಕೊಲ್ಲುವುದಿಲ್ಲ. ಕೊಲ್ಲಬಯಸುವ ಅಧಿಕಾರಿಗಳ ಕೈಗೂ ನಿನ್ನನ್ನು ಕೊಡುವದಿಲ್ಲವೆಂದು ನಾನು ಮಾತು ಕೊಡುತ್ತೇನೆ” ಎಂದು ಹೇಳಿದನು.
17 ಆಗ ಯೆರೆಮೀಯನು ರಾಜನಾದ ಚಿದ್ಕೀಯನಿಗೆ ಹೀಗೆಂದನು: “ಇಸ್ರೇಲರ ದೇವರಾದ ಮತ್ತು ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: ‘ನೀನು ಬಾಬಿಲೋನಿನ ರಾಜನ ಅಧಿಕಾರಿಗಳಿಗೆ ಶರಣಾಗತನಾದರೆ ನಿನ್ನ ಪ್ರಾಣವನ್ನು ಉಳಿಸಲಾಗುವುದು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲ್ಪಡುವುದಿಲ್ಲ. ನೀನೂ ಬದುಕುವೆ ಮತ್ತು ನಿನ್ನ ಕುಟುಂಬದವರೂ ಬದುಕುವರು. 18 ಆದರೆ ನೀನು ಬಾಬಿಲೋನಿನ ಅಧಿಕಾರಿಗಳಿಗೆ ಶರಣಾಗತನಾಗಲು ಒಪ್ಪದ್ದಿದ್ದರೆ, ಜೆರುಸಲೇಮನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ಅವರು ಜೆರುಸಲೇಮನ್ನು ಸುಟ್ಟುಬಿಡುವರು ಮತ್ತು ನೀನು ಸಹ ಅವರಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.’”
19 ಆಗ ಚಿದ್ಕೀಯನು, “ನಾನು ಈಗಾಗಲೇ ಬಾಬಿಲೋನಿನ ಸೈನ್ಯದ ಕಡೆಗೆ ಸೇರಿದ ಯೆಹೂದ್ಯರಿಗೆ ಹೆದರುತ್ತೇನೆ. ಆ ಸೈನಿಕರು ನನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸಿಕೊಡಬಹುದು ಮತ್ತು ಅವರು ನನಗೆ ಕೇಡುಮಾಡಬಹುದು; ನನ್ನನ್ನು ಹಿಂಸಿಸಬಹುದು ಎಂದು ಭಯವಾಗುತ್ತದೆ” ಎಂದು ಯೆರೆಮೀಯನಿಗೆ ಹೇಳಿದನು.
20 ಆದರೆ ಯೆರೆಮೀಯನು, “ರಾಜನಾದ ಚಿದ್ಕೀಯನೇ, ಆ ಸೈನಿಕರು ನಿನ್ನನ್ನು ಯೆಹೂದದ ಆ ಜನರಿಗೆ ಒಪ್ಪಿಸುವುದಿಲ್ಲ. ನಾನು ಹೇಳಿದಂತೆ ಮಾಡಿ ಯೆಹೋವನ ಆಜ್ಞಾಪಾಲನೆ ಮಾಡು. ಆಗ ನಿನಗೆಲ್ಲ ಒಳ್ಳೆಯದಾಗುವುದು ಮತ್ತು ನಿನ್ನ ಪ್ರಾಣ ಉಳಿಯುವುದು. 21 ನೀನು ಬಾಬಿಲೋನಿನ ಸೈನಿಕರಿಗೆ ಶರಣಾಗತನಾಗದಿದ್ದರೆ ಏನಾಗುವದೆಂಬುದನ್ನು ಯೆಹೋವನು ನನಗೆ ತೋರಿಸಿಕೊಟ್ಟಿದ್ದಾನೆ. ಯೆಹೋವನು ನನಗೆ ಹೀಗೆ ಹೇಳಿದ್ದಾನೆ: 22 ಯೆಹೂದದ ರಾಜನ ಅರಮನೆಯಲ್ಲಿ ಉಳಿದ ಎಲ್ಲಾ ಸ್ತ್ರೀಯರನ್ನು ಬಾಬಿಲೋನಿನ ಸೈನ್ಯಾಧಿಕಾರಿಗಳ ಬಳಿಗೆ ತರಲಾಗುವುದು. ನಿನ್ನ ಸ್ತ್ರೀಯರು ಹಾಡನ್ನು ಹಾಡಿ ನಿನ್ನನ್ನು ತಮಾಷೆ ಮಾಡುವರು. ಆ ಸ್ತ್ರೀಯರು ಹೀಗೆ ಹೇಳುವರು:
‘ನಿನಗಿಂತಲೂ ಪ್ರಬಲರಾಗಿದ್ದ ನಿನ್ನ ಒಳ್ಳೆಯ ಸ್ನೇಹಿತರು
ನಿನ್ನನ್ನು ತಪ್ಪುದಾರಿಗೆ ಎಳೆದರು.
ಆ ಸ್ನೇಹಿತರನ್ನು ನೀನು ತುಂಬಾ ನಂಬಿಕೊಂಡಿದ್ದೆ.
ನಿನ್ನ ಪಾದಗಳು ಕೆಸರಿನಲ್ಲಿ ಹೂತಿವೆ.
ನಿನ್ನ ಸ್ನೇಹಿತರು ನಿನ್ನಿದ ದೂರವಾಗಿದ್ದಾರೆ.’
23 “ನಿನ್ನ ಎಲ್ಲಾ ಹೆಂಡತಿಯರನ್ನು ಮತ್ತು ಮಕ್ಕಳನ್ನು ಹೊರತರಲಾಗುವುದು. ಅವರನ್ನು ಬಾಬಿಲೋನಿನ ಸೈನಿಕರಿಗೆ ಒಪ್ಪಿಸಲಾಗುವುದು. ನೀನೂ ಬಾಬಿಲೋನಿನ ಸೈನಿಕರಿಂದ ತಪ್ಪಿಸಿಕೊಳ್ಳಲಾರೆ. ಬಾಬಿಲೋನಿನ ರಾಜನು ನಿನ್ನನ್ನು ವಶಪಡಿಸಿಕೊಳ್ಳುವನು ಮತ್ತು ಜೆರುಸಲೇಮ್ ನಗರವನ್ನು ಸುಟ್ಟುಹಾಕಲಾಗುವುದು” ಎಂದು ಉತ್ತರಿಸಿದನು.
24 ಆಗ ಚಿದ್ಕೀಯನು ಯೆರೆಮೀಯನಿಗೆ ಹೀಗೆ ಹೇಳಿದನು: “ನಾನು ನಿನ್ನ ಸಂಗಡ ಮಾತನಾಡುತ್ತಿದ್ದೆ ಎಂದು ಯಾರಿಗೂ ಹೇಳಬೇಡ. ಇಲ್ಲವಾದರೆ ನೀನು ಸಾಯುವೆ. 25 ನಾನು ನಿನ್ನೊಂದಿಗೆ ಮಾತನಾಡಿದ್ದನ್ನು ಆ ಅಧಿಕಾರಿಗಳು ಪತ್ತೆ ಹಚ್ಚಬಹುದು. ಅವರು ನಿನ್ನ ಹತ್ತಿರ ಬಂದು, ‘ಯೆರೆಮೀಯನೇ, ನೀನು ರಾಜನಾದ ಚಿದ್ಕೀಯನಿಗೆ ಏನು ಹೇಳಿದೆ? ಚಿದ್ಕೀಯನು ನಿನಗೆ ಏನು ಹೇಳಿದನು? ಪ್ರಾಮಾಣಿಕವಾಗಿ ಎಲ್ಲವನ್ನು ನಮಗೆ ಹೇಳು; ಇಲ್ಲವಾದರೆ ನಾವು ನಿನ್ನನ್ನು ಕೊಂದುಬಿಡುತ್ತೇವೆ’ ಎನ್ನಬಹುದು. 26 ಆಗ ನೀನು ಅವರಿಗೆ, ‘ಯೆಹೋನಾಥಾನನ ಮನೆಯ ನೆಲಮಾಳಿಗೆಯ ಕತ್ತಲು ಕೋಣೆಗೆ ನನ್ನನ್ನು ಮತ್ತೆ ಕಳುಹಿಸಬೇಡಿ, ಅಲ್ಲಿಗೆ ಹೋದರೆ ನಾನು ಸತ್ತುಹೋಗುವೆನೆಂದು ರಾಜನಿಗೆ ಪ್ರಾರ್ಥಿಸುತ್ತಿದ್ದೆ’” ಎಂದು ಹೇಳು.
27 ಆ ರಾಜ್ಯಾಧಿಕಾರಿಗಳು ಅವನನ್ನು ಪ್ರಶ್ನಿಸುವದಕ್ಕಾಗಿ ಯೆರೆಮೀಯನಲ್ಲಿಗೆ ಬಂದರು. ರಾಜನು ಆಜ್ಞಾಪಿಸಿದಂತೆ ಯೆರೆಮೀಯನು ಅವರಿಗೆ ಎಲ್ಲವನ್ನು ಹೇಳಿದನು. ಆಗ ಆ ಅಧಿಕಾರಿಗಳು ಯೆರೆಮೀಯನನ್ನು ಬಿಟ್ಟುಹೋದರು. ಯೆರೆಮೀಯನ ಮತ್ತು ರಾಜನ ಸಂಭಾಷಣೆಯನ್ನು ಯಾರೂ ಕೇಳಿರಲಿಲ್ಲ.
28 ಜೆರುಸಲೇಮ್ ನಗರವು ಶತ್ರುಗಳ ವಶವಾಗುವವರೆಗೆ ಯೆರೆಮೀಯನು ಕಾರಾಗೃಹದ ಅಂಗಳದಲ್ಲಿ ವಾಸಮಾಡಿಕೊಂಡಿದ್ದನು.
ಕ್ರೈಸ್ತರ ನಡುವೆ ನ್ಯಾಯನಿರ್ಣಯದ ಸಮಸ್ಯೆಗಳು
6 ನಿಮ್ಮಲ್ಲಿ ಯಾವನಿಗಾದರೂ ಮತ್ತೊಬ್ಬನ ಮೇಲೆ ವಿರೋಧವಿದ್ದರೆ, ನೀವು ನ್ಯಾಯಾಲಯಗಳಿಗೆ ಹೋಗುವುದೇಕೆ? ಅವರು ನೀತಿವಂತರಲ್ಲ. ಹೀಗಿರಲು ನಿಮಗೆ ನ್ಯಾಯತೀರ್ಪು ಮಾಡಲು ಅವರಿಗೆ ನೀವು ಅವಕಾಶ ಮಾಡಿಕೊಡುವುದೇಕೆ? ನಿಮಗೆ ನಾಚಿಕೆಯಾಗಬೇಕು. ನಿಮಗೆ ನ್ಯಾಯತೀರ್ಪು ನೀಡಲು ನೀವು ದೇವಜನರಿಗೆ ಏಕೆ ಅವಕಾಶ ಕೊಡಬಾರದು? 2 ದೇವಜನರು ಲೋಕಕ್ಕೆ ತೀರ್ಪು ಮಾಡುವರೆಂಬುದು ನಿಮಗೆ ತಿಳಿಯದೋ? ದೇವಜನರು ಲೋಕಕ್ಕೆ ನ್ಯಾಯತೀರ್ಪು ಮಾಡುವವರಾಗಿದ್ದರೆ, ಇಂಥ ಚಿಕ್ಕ ಸಂಗತಿಗಳ ಬಗ್ಗೆಯೂ ನ್ಯಾಯತೀರ್ಪು ಮಾಡಬಲ್ಲರೆಂಬುದು ನಿಶ್ಚಯವಾಗಿದೆ. 3 ಮುಂದಿನ ಕಾಲದಲ್ಲಿ ನಾವು ದೇವದೂತರಿಗೂ ನ್ಯಾಯತೀರಿಸುತ್ತೇವೆ ಎಂಬುದು ನಿಮಗೆ ಗೊತ್ತಿದೆ. ಆದ್ದರಿಂದ ಈ ಜೀವಿತದ ಸಂಗತಿಗಳನ್ನು ಕುರಿತು ನಾವು ತೀರ್ಪುಮಾಡಬಲ್ಲೆವು. 4 ಹೀಗಿರಲು, ನಿಮಲ್ಲಿ ಭಿನ್ನಾಭಿಪ್ರಾಯಗಳಿದ್ದು ಅದಕ್ಕೆ ನ್ಯಾಯನಿರ್ಣಯದ ಅಗತ್ಯವಿರುವಾಗ, ಸಭೆಗೆ ಸೇರಿಲ್ಲದ ಜನರ ಬಳಿಗೆ ನೀವು ಆ ಸಂಗತಿಗಳನ್ನು ತೆಗೆದುಕೊಂಡು ಹೋಗುವುದೇಕೆ? ಆ ಜನರಿಗೆ ಸಭೆಯಲ್ಲಿ ಯಾವ ಮಾನ್ಯತೆಯೂ ಇಲ್ಲ. 5 ನಿಮ್ಮನ್ನು ನಾಚಿಕೆಪಡಿಸಲು ಹೀಗೆ ಹೇಳುತ್ತಿದ್ದೇನೆ. ವಿಶ್ವಾಸಿಗಳಾಗಿರುವ ಇಬ್ಬರು ಸಹೋದರರ ನಡುವೆ ಉಂಟಾಗಿರುವ ವ್ಯಾಜ್ಯಕ್ಕೆ ತೀರ್ಪು ನೀಡಬಲ್ಲ ಜ್ಞಾನಿಯೊಬ್ಬನು ನಿಮ್ಮ ಸಭೆಯಲ್ಲಿ ಇಲ್ಲವೇ? 6 ನಿಮ್ಮಲ್ಲಿ ಒಬ್ಬ ಸಹೋದರನು ಮತ್ತೊಬ್ಬ ಸಹೋದರನ ವಿರೋಧವಾಗಿ ನ್ಯಾಯಾಲಯಕ್ಕೆ ಹೋಗುತ್ತಾನೆ. ಅವರ ವ್ಯಾಜ್ಯಕ್ಕೆ ತೀರ್ಪು ನೀಡಲು ಅವಿಶ್ವಾಸಿಗಳಿಗೆ ನೀವು ಅವಕಾಶ ಮಾಡಿಕೊಟ್ಟಿದ್ದೀರಿ!
7 ನೀವು ಆಗಲೇ ಸೋತು ಹೋಗಿದ್ದೀರೆಂಬುದನ್ನು ನಿಮ್ಮ ಮಧ್ಯದಲ್ಲಿರುವ ವ್ಯಾಜ್ಯಗಳೇ ಸೂಚಿಸುತ್ತವೆ. ಅದಕ್ಕಿಂತ, ನೀವು ಕೆಟ್ಟದ್ದನ್ನು ಸಹಿಸಿಕೊಳ್ಳಬೇಕಿತ್ತು; ಮೋಸವನ್ನು ತಾಳಿಕೊಳ್ಳಬೇಕಿತ್ತು. 8 ಆದರೆ ಸ್ವತಃ ನೀವೇ ಕೆಟ್ಟದ್ದನ್ನು ಮಾಡುತ್ತೀರಿ ಮತ್ತು ಮೋಸ ಮಾಡುತ್ತೀರಿ! ಕ್ರಿಸ್ತನಲ್ಲಿ ನಿಮ್ಮ ಸಹೋದರನಾಗಿರುವವನಿಗೇ ನೀವು ಹೀಗೆ ಮಾಡುತ್ತೀರಿ.
9-10 ಅಧರ್ಮಿಗಳು ದೇವರ ರಾಜ್ಯವನ್ನು ಪಡೆಯುವುದಿಲ್ಲವೆಂದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮ್ಮನ್ನು ನೀವೇ ಮೋಸಪಡಿಸಿಕೊಳ್ಳಬೇಡಿ. ದೇವರ ರಾಜ್ಯಕ್ಕೆ ಸೇರದ ಜನರು ಯಾರ್ಯಾರೆಂದರೆ: ಲೈಂಗಿಕ ಪಾಪ ಮಾಡುವವರು, ವಿಗ್ರಹಗಳನ್ನು ಪೂಜಿಸುವವರು, ವ್ಯಭಿಚಾರ ಮಾಡುವವರು, ಸಲಿಂಗಕಾಮಿಗಳು, ಕದಿಯುವವರು, ಸ್ವಾರ್ಥಿಗಳು, ಕುಡುಕರು, ಬೈಯುವವರು ಮತ್ತು ಮೋಸಗಾರರು. 11 ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಪ್ರಭುವಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರಾತ್ಮನ ಮೂಲಕವಾಗಿಯೂ ನೀವು ತೊಳೆಯಲ್ಪಟ್ಟಿರಿ; ಪರಿಶುದ್ಧರಾದಿರಿ ಮತ್ತು ನೀತಿವಂತರೆಂಬ ನಿರ್ಣಯವನ್ನು ಹೊಂದಿಕೊಂಡಿರಿ.
Kannada Holy Bible: Easy-to-Read Version. All rights reserved. © 1997 Bible League International