Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 102:1-17

ಹಿಂಸೆ ಸಂಕಟಗಳಲ್ಲಿರುವವನ ಪ್ರಾರ್ಥನೆ.

102 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು.
    ಸಹಾಯಕ್ಕಾಗಿ ನಾನಿಡುವ ಮೊರೆಯನ್ನು ಲಾಲಿಸು.
ಯೆಹೋವನೇ, ನಾನು ಆಪತ್ತುಗಳಲ್ಲಿರುವಾಗ ನನಗೆ ವಿಮುಖನಾಗಬೇಡ, ನನಗೆ ಕಿವಿಗೊಡು.
    ಸಹಾಯಕ್ಕಾಗಿ ಮೊರೆಯಿಡುವಾಗ ಬೇಗನೆ ಸದುತ್ತರವನ್ನು ದಯಪಾಲಿಸು.
ನನ್ನ ಜೀವಮಾನವು ಹೊಗೆಯಂತೆ ಕಣ್ಮರೆಯಾಗುತ್ತಿದೆ.
    ನನ್ನ ಎಲುಬುಗಳು ಬೆಂಕಿಯಂತೆ ಸುಟ್ಟುಹೋಗುತ್ತಿವೆ.
ನಾನು ನಿರ್ಬಲನಾಗಿ ಒಣಗಿಹೋಗುತ್ತಿರುವ ಹುಲ್ಲಿನಂತಿದ್ದೇನೆ.
    ನಾನು ಊಟವನ್ನೂ ಮರೆತುಬಿಡುವೆನು.
ದೀರ್ಘ ದುಃಖದಿಂದಾಗಿ
    ನನ್ನ ಎಲುಬುಗಳು ಚರ್ಮಕ್ಕೆ ಅಂಟಿಕೊಂಡಿವೆ.
ಅರಣ್ಯದಲ್ಲಿರುವ ಗೂಬೆಯಂತೆ ಒಬ್ಬಂಟಿಗನಾಗಿದ್ದೇನೆ.
    ಪಾಳುಬಿದ್ದ ಕಟ್ಟಡಗಳಲ್ಲಿರುವ ಗೂಬೆಯಂತೆ ನಾನು ಒಬ್ಬಂಟಿಗನಾಗಿದ್ದೇನೆ.
ನನಗೆ ನಿದ್ರೆಯೂ ಬಾರದು.
    ಮೇಲ್ಛಾವಣಿಗೆಯ ಮೇಲಿರುವ ಏಕಾಂಗಿಯಾದ ಪಕ್ಷಿಯಂತೆ ನಾನಿದ್ದೇನೆ.
ನನ್ನ ವೈರಿಗಳು ನನಗೆ ಅವಮಾನ ಮಾಡುತ್ತಲೇ ಇರುವರು.
    ಅವರು ನನ್ನನ್ನು ದೃಷ್ಟಾಂತಮಾಡಿ ಶಪಿಸುವರು.
ನನ್ನ ದುಃಖವೇ ನನಗೆ ಆಹಾರವಾಯಿತು.
    ಕಣ್ಣೀರು ನನ್ನ ಪಾನೀಯದೊಳಗೆ ತೊಟ್ಟಿಕ್ಕುತ್ತಿದೆ.
10 ನೀನು ನನ್ನ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ.
    ನೀನು ನನ್ನನ್ನು ಮೇಲೆತ್ತಿ ಎಸೆದುಬಿಟ್ಟೆಯಲ್ಲಾ!

11 ನನ್ನ ಜೀವಮಾನವು ಸಂಜೆಯ ನೆರಳಿನಂತೆ ಕೊನೆಗೊಂಡಿದೆ.
    ನಾನು ಒಣಗಿ ಸಾಯುತ್ತಿರುವ ಹುಲ್ಲಿನಂತಿದ್ದೇನೆ.
12 ಯೆಹೋವನೇ, ನೀನಾದರೋ ಎಂದೆಂದಿಗೂ ಜೀವಿಸುವೆ!
    ನಿನ್ನ ಹೆಸರು ಶಾಶ್ವತವಾದದ್ದು!
13 ನೀನು ಎದ್ದು ಚೀಯೋನನ್ನು ಸಂತೈಸುವೆ.
    ನೀನು ಚೀಯೋನಿಗೆ ದಯೆತೋರುವ ಕಾಲ ಬರುತ್ತಿದೆ.
14 ನಿನ್ನ ಸೇವಕರು ಆಕೆಯ (ಜೆರುಸಲೇಮಿನ) ಕಲ್ಲುಗಳನ್ನು ಪ್ರೀತಿಸುವರು.
    ಅವರು ಆ ಪಟ್ಟಣದ ಧೂಳನ್ನು ಇಷ್ಟಪಡುವರು!
15 ಜನರು ಯೆಹೋವನ ಹೆಸರನ್ನು ಆರಾಧಿಸುತ್ತಾರೆ.
    ದೇವರೇ, ಭೂರಾಜರುಗಳೆಲ್ಲಾ ನಿನ್ನನ್ನು ಸನ್ಮಾನಿಸುವರು.
16 ಯಾಕೆಂದರೆ, ಯೆಹೋವನು ಚೀಯೋನನ್ನು ಮತ್ತೆ ಕಟ್ಟುವನು.
    ಜನಾಂಗಗಳು ಆಕೆಯ (ಜೆರುಸಲೇಮಿನ) ವೈಭವವನ್ನು ಮತ್ತೆ ನೋಡುವರು.
17 ಆತನು ನಿರ್ಗತಿಕರ ಪ್ರಾರ್ಥನೆಗಳಿಗೆ ಉತ್ತರ ಕೊಡುವನು.
    ಅವರ ಮೊರೆಗಳನ್ನು ಆತನು ತಿರಸ್ಕರಿಸುವುದಿಲ್ಲ.

ಯೆರೆಮೀಯ 29:8-23

ಇಸ್ರೇಲರ ದೇವರೂ, ಸರ್ವಶಕ್ತನೂ ಆಗಿರುವ ಯೆಹೋವನು, ಹೀಗೆನ್ನುತ್ತಾನೆ: “ನಿಮ್ಮ ಪ್ರವಾದಿಗಳು ಮತ್ತು ಮಾಟಮಂತ್ರಗಾರರು ನಿಮ್ಮನ್ನು ಮರುಳುಗೊಳಿಸದಿರಲಿ. ಅವರು ನೋಡುವ ಕನಸುಗಳಿಗೆ ಕಿವಿಗೊಡಬೇಡಿ. ಅವರು ಸುಳ್ಳುಗಳನ್ನು ಬೋಧಿಸುತ್ತಿರುವರು. ಅವರ ಸಂದೇಶವು ನನ್ನಿಂದ ಬಂದಿದೆ ಎಂದು ಅವರು ಹೇಳುತ್ತಿರುವರು. ಆದರೆ ನಾನು ಅದನ್ನು ಕಳುಹಿಸಲಿಲ್ಲ.” ಈ ಸಂದೇಶವು ಯೆಹೋವನಿಂದ ಬಂದದ್ದು.

10 ಯೆಹೋವನು ಹೀಗೆನ್ನುತ್ತಾನೆ: “ಬಾಬಿಲೋನ್ ಎಪ್ಪತ್ತು ವರ್ಷಗಳವರೆಗೆ ಬಲಿಷ್ಠವಾಗಿರುವುದು. ಅನಂತರ ನಾನು ಬಾಬಿಲೋನಿನಲ್ಲಿ ವಾಸಮಾಡುತ್ತಿರುವ ನಿಮ್ಮ ಬಳಿಗೆ ಬಂದು ನನ್ನ ವಾಗ್ದಾನದಂತೆ ನಿಮ್ಮನ್ನು ಜೆರುಸಲೇಮಿಗೆ ಮತ್ತೆ ಕರೆದುಕೊಂಡು ಬರುವೆನು. 11 ನಾನು ನಿಮಗಾಗಿ ಹಾಕಿದ ಯೋಜನೆಗಳು ನನಗೆ ಗೊತ್ತಿರುವುದರಿಂದ ನಾನು ಹೀಗೆ ಹೇಳುತ್ತಿದ್ದೇನೆ.” ಇದು ಯೆಹೋವನ ಸಂದೇಶ. “ನಾನು ನಿಮಗಾಗಿ ಒಳ್ಳೆಯ ಯೋಜನೆಗಳನ್ನು ಹಾಕಿದ್ದೇನೆ. ನಿಮಗೆ ಕೆಟ್ಟದ್ದನ್ನು ಮಾಡುವ ವಿಚಾರ ನನಗಿಲ್ಲ. ನಾನು ನಿಮಗಾಗಿ ಆಶಾದಾಯಕವಾದ ಮತ್ತು ಒಳ್ಳೆಯ ಭವಿಷ್ಯದ ವಿಚಾರಗಳನ್ನಿಟ್ಟುಕೊಂಡಿದ್ದೇನೆ. 12 ಆಗ ನೀವು ನನ್ನಲ್ಲಿ ಮೊರೆಯಿಡುವಿರಿ. ನೀವು ನನ್ನಲ್ಲಿಗೆ ಬಂದು ನನ್ನನ್ನು ಪ್ರಾರ್ಥಿಸಿರಿ; ಆಗ ನಾನು ನಿಮಗೆ ಕಿವಿಗೊಡುವೆನು. 13 ನೀವು ನನ್ನನ್ನು ಹುಡುಕುವಿರಿ. ನೀವು ಮನಃಪೂರ್ವಕವಾಗಿ ಹುಡುಕಿದಾಗ ನನ್ನನ್ನು ಕಂಡುಕೊಳ್ಳುವಿರಿ. 14 ನಾನು ನಿಮಗೆ ದೊರೆಯುವೆನು.” ಇದು ಯೆಹೋವನ ನುಡಿ. “ನಾನು ನಿಮ್ಮನ್ನು ನಿಮ್ಮ ಬಂಧನದಿಂದ ಬಿಡಿಸಿ ಕರೆದುತರುವೆನು. ನಾನು ಈ ಸ್ಥಳವನ್ನು ಬಿಡಲು ನಿಮಗೆ ಒತ್ತಾಯಿಸಿದೆ. ಆದರೆ ನಾನು ನಿಮ್ಮನ್ನು ಕಳುಹಿಸಿದ್ದ ಎಲ್ಲಾ ಜನಾಂಗಗಳಿಂದ ಮತ್ತು ಎಲ್ಲಾ ಸ್ಥಳಗಳಿಂದ ನಿಮ್ಮನ್ನು ಒಟ್ಟುಗೂಡಿಸಿ ಈ ಸ್ಥಳಕ್ಕೆ ಕರೆದು ತರುವೆನು.” ಇದು ಯೆಹೋವನ ನುಡಿ.

15 “ಆದರೆ ಯೆಹೋವನು ನಮಗೆ ಬಾಬಿಲೋನಿನಲ್ಲಿಯೇ ಪ್ರವಾದಿಗಳನ್ನು ಕೊಟ್ಟಿದ್ದಾನೆ” ಎಂದು ನೀವು ಹೇಳಬಹುದು. 16 ಬಾಬಿಲೋನಿಗೆ ತೆಗೆದುಕೊಂಡು ಹೋಗದ ನಿಮ್ಮ ಆಪ್ತರ ಬಗ್ಗೆ ಯೆಹೋವನು ಹೀಗೆನ್ನುತ್ತಾನೆ. ಈಗ ದಾವೀದನ ಸಿಂಹಾಸನಾರೂಢನಾದ ರಾಜನ ವಿಷಯವಾಗಿಯೂ ಇನ್ನೂ ಜೆರುಸಲೇಮ್ ನಗರದಲ್ಲಿಯೇ ಇರುವ ಜನರ ವಿಷಯವಾಗಿಯೂ ಹೇಳುತ್ತಿರುವೆನು. 17 ಸರ್ವಶಕ್ತನಾದ ಯೆಹೋವನು ಹೇಳಿದನು: “ಇನ್ನೂ ಜೆರುಸಲೇಮಿನಲ್ಲಿಯೇ ಇದ್ದ ಜನರ ವಿರುದ್ಧ ನಾನು ಬೇಗನೆ ಖಡ್ಗವನ್ನು, ಹಸಿವನ್ನು ಮತ್ತು ಭಯಂಕರವಾದ ವ್ಯಾಧಿಯನ್ನು ಕಳುಹಿಸುವೆನು. ನಾನು ಅವರನ್ನು, ಅತೀ ಕೊಳೆತು ತಿನ್ನಲಾಗದ ಅಂಜೂರದ ಹಣ್ಣುಗಳಂತೆ ಮಾಡುವೆನು. 18 ಇನ್ನೂ ಜೆರುಸಲೇಮಿನಲ್ಲಿರುವ ಜನರಿಗೆ ಖಡ್ಗ, ಹಸಿವು ಮತ್ತು ಭಯಂಕರವಾದ ವ್ಯಾಧಿಗಳಿಂದೊಡಗೂಡಿ ಬೆನ್ನಟ್ಟುವೆನು. ಆ ಜನರ ದುರ್ಗತಿಯನ್ನು ನೋಡಿ ಭೂಲೋಕದ ಸಮಸ್ತ ರಾಜ್ಯಗಳಿಗೆ ಭಯ ಉಂಟಾಗುವಂತೆ ಮಾಡುವೆನು. ಆ ಜನರನ್ನು ನಾಶಮಾಡುವೆನು. ನಡೆದ ವಿಷಯಗಳ ಬಗ್ಗೆ ಕೇಳಿ ಜನರು ಬೆರಗಾಗಿ ಸಿಳ್ಳುಹಾಕುವರು. ಯಾರಿಗಾದರೂ, ಕೇಡಾಗಲಿ ಎಂದು ಹೇಳಬೇಕಾದರೆ ಜನರು ಅವರ ಉದಾಹರಣೆಯನ್ನು ಕೊಡುವರು. ನಾನು ಅವರನ್ನು ಅಟ್ಟಿದ ಎಲ್ಲೆಡೆಯಲ್ಲಿಯೂ ಜನರು ಅವರನ್ನು ಅವಮಾನಗೊಳಿಸುವರು. 19 ಜೆರುಸಲೇಮಿನವರು ನನ್ನ ಸಂದೇಶಕ್ಕೆ ಕಿವಿಗೊಟ್ಟಿಲ್ಲವಾದ ಕಾರಣ ನಾನು ಹಾಗೆಲ್ಲ ನಡೆಯುವಂತೆ ಮಾಡುವೆನು” ಇದು ಯೆಹೋವನ ನುಡಿ. “ನಾನು ಮತ್ತೆಮತ್ತೆ ನನ್ನ ಸಂದೇಶವನ್ನು ಅವರಿಗೆ ಕೊಟ್ಟೆ. ಆ ಜನರಿಗೆ ಸಂದೇಶಗಳನ್ನು ಕೊಡುವದಕ್ಕಾಗಿ ನನ್ನ ಸೇವಕರಾದ ಪ್ರವಾದಿಗಳನ್ನು ಉಪಯೋಗಿಸಿಕೊಂಡೆ. ಆದರೆ ಆ ಜನರು ಕೇಳಲಿಲ್ಲ.” ಇದು ಯೆಹೋವನ ನುಡಿ. 20 “ನೀವು ಬಂಧಿಗಳು. ನಾನು ನಿಮ್ಮನ್ನು ಜೆರುಸಲೇಮ್ ಬಿಟ್ಟು ಬಾಬಿಲೋನಿಗೆ ಹೋಗುವಂತೆ ಒತ್ತಾಯಿಸಿದೆ. ಆದ್ದರಿಂದ ಯೆಹೋವನ ಸಂದೇಶವನ್ನು ಕೇಳಿರಿ.”

21 ಕೊಲಾಯನ ಮಗನಾದ ಅಹಾಬ ಮತ್ತು ಮಾಸೇಯನ ಮಗನಾದ ಚಿದ್ಕೀಯ ಇವರ ವಿಷಯವಾಗಿ ಸರ್ವಶಕ್ತನಾದ ಯೆಹೋವನು ಹೀಗೆಂದನು: “ಇವರಿಬ್ಬರು ನಿಮಗೆ ಸುಳ್ಳುಪ್ರವಾದನೆ ಮಾಡಿದ್ದಾರೆ. ಅವರ ಸಂದೇಶವು ನನ್ನಿಂದ ಬಂದದ್ದು ಎಂದು ಅವರು ಹೇಳಿದ್ದಾರೆ. ಆದರೆ ಅವರು ಹೇಳಿದ್ದು ಸುಳ್ಳು. ನಾನು ಆ ಇಬ್ಬರು ಪ್ರವಾದಿಗಳನ್ನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನಿಗೆ ಒಪ್ಪಿಸುವೆನು. ನೆಬೂಕದ್ನೆಚ್ಚರನು ಬಾಬಿಲೋನಿನಲ್ಲಿ ಬಂಧಿಯಾಗಿರುವ ನಿಮ್ಮೆಲ್ಲರ ಸಮ್ಮುಖದಲ್ಲಿ ಆ ಇಬ್ಬರು ಪ್ರವಾದಿಗಳನ್ನು ಕೊಲ್ಲುವನು. 22 ಯೆಹೂದದ ಬಂಧಿಗಳೆಲ್ಲಾ ಬೇರೆಯವರಿಗೆ ಕೇಡಾಗಲಿ ಎಂದು ಕೇಳಿಕೊಳ್ಳುವಾಗ ಆ ಜನರ ಉದಾಹರಣೆ ಕೊಡುವರು. ಆ ಬಂಧಿಗಳು ಹೀಗೆನ್ನುವರು: ‘ಬಾಬಿಲೋನಿನ ರಾಜನು ಬೆಂಕಿಯಲ್ಲಿ ಸುಟ್ಟುಬಿಟ್ಟ ಚಿದ್ಕೀಯನ ಮತ್ತು ಅಹಾಬನ ಗತಿಯನ್ನು ಯೆಹೋವನು ನಿನಗೆ ತರಲಿ.’ 23 ಆ ಪ್ರವಾದಿಗಳಿಬ್ಬರು ಇಸ್ರೇಲಿನಲ್ಲಿ ಹೆಚ್ಚಿನ ದುರಾಚಾರವನ್ನು ನಡೆಸಿದರು. ಅವರು ತಮ್ಮ ನೆರೆಯವರ ಹೆಂಡತಿಯರೊಂದಿಗೆ ವ್ಯಭಿಚಾರ ಮಾಡಿದರು. ಅವರು ಸುಳ್ಳುಗಳನ್ನು ಹೇಳಿದರು. ಆ ಸುಳ್ಳುಗಳನ್ನು ಯೆಹೋವನಾದ ನನ್ನ ಸಂದೇಶವೆಂದು ಹೇಳಿದರು. ಹಾಗೆ ಮಾಡಲು ನಾನು ಅವರಿಗೆ ಹೇಳಿಲ್ಲ, ಅವರು ಏನು ಮಾಡಿದ್ದಾರೆಂಬುದನ್ನು ನಾನು ಬಲ್ಲೆ. ಅದಕ್ಕೆ ನಾನೇ ಸಾಕ್ಷಿ.” ಇದು ಯೆಹೋವನ ಸಂದೇಶ.

ಅಪೊಸ್ತಲರ ಕಾರ್ಯಗಳು 26:24-29

ಅಗ್ರಿಪ್ಪನನ್ನು ಒಡಂಬಡಿಸಲು ಪೌಲನ ಪ್ರಯತ್ನ

24 ಪೌಲನು ತನ್ನ ಪರವಾಗಿ ಈ ಸಂಗತಿಗಳನ್ನು ಹೇಳುತ್ತಿರಲು ಫೆಸ್ತನು, “ಪೌಲನೇ, ನೀನು ಹುಚ್ಚನಾಗಿರುವೆ! ಅಧಿಕ ಅಧ್ಯಯನ ನಿನ್ನನ್ನು ಹುಚ್ಚನನ್ನಾಗಿ ಮಾಡಿದೆ!” ಎಂದು ಕೂಗಿ ಹೇಳಿದನು.

25 ಪೌಲನು, “ಮಹಾರಾಜಶ್ರೀಗಳಾದ ಫೆಸ್ತನೇ, ನಾನು ಹುಚ್ಚನಲ್ಲ. ನಾನು ಹೇಳುತ್ತಿರುವುದು ಸತ್ಯಸಂಗತಿಗಳಾಗಿವೆ. ನನ್ನ ಮಾತುಗಳು ಮೂರ್ಖನ ಮಾತುಗಳಲ್ಲ. ನಾನು ಸ್ವಸ್ಥಬುದ್ಧಿಯುಳ್ಳವನಾಗಿದ್ದೇನೆ. 26 ರಾಜನಾದ ಅಗ್ರಿಪ್ಪನಿಗೆ ಈ ಸಂಗತಿಗಳು ತಿಳಿದಿವೆ. ನಾನು ಅವನೊಂದಿಗೆ ಸ್ವತಂತ್ರವಾಗಿ ಮಾತಾಡಬಲ್ಲೆನು. ಈ ಎಲ್ಲಾ ಸಂಗತಿಗಳ ಬಗ್ಗೆ ಅವನು ಕೇಳಿದ್ದಾನೆಂದು ನನಗೆ ಗೊತ್ತಿದೆ. ಯಾಕೆಂದರೆ ಎಲ್ಲಾ ಜನರು ನೋಡಬಹುದಾದ ಸ್ಥಳದಲ್ಲಿ ಈ ಸಂಗತಿಗಳು ನೆರವೇರಿದವು. 27 ರಾಜ ಅಗ್ರಿಪ್ಪನೇ, ಪ್ರವಾದಿಗಳು ಬರೆದ ಸಂಗತಿಗಳನ್ನು ನೀನು ನಂಬುವಿಯಾ? ನೀನು ನಂಬುವೆ ಎಂದು ನನಗೆ ಗೊತ್ತಿದೆ!” ಎಂಬುದಾಗಿ ಹೇಳಿದನು.

28 ರಾಜ ಅಗ್ರಿಪ್ಪನು ಪೌಲನಿಗೆ, “ಬಹು ಸುಲಭವಾಗಿ ನನ್ನನ್ನು ಒಪ್ಪಿಸಿ ಕ್ರೈಸ್ತನನ್ನಾಗಿ ಮಾಡಬಹುದೆಂದು ನೀನು ಯೋಚಿಸಿಕೊಂಡಿರುವಿಯಾ?” ಎಂದು ಕೇಳಿದನು.

29 ಪೌಲನು, “ಸುಲಭವೋ ಕಷ್ಟವೋ ಅದು ನನಗೆ ಮುಖ್ಯವಲ್ಲ. ನೀನು ಮಾತ್ರವಲ್ಲ, ಇಂದು ನನ್ನನ್ನು ಆಲಿಸುತ್ತಿರುವ ಪ್ರತಿಯೊಬ್ಬರೂ ರಕ್ಷಣೆಹೊಂದಿ ನನ್ನಂತೆಯೇ ಆಗಬೇಕೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಆದರೆ ಈ ಸಂಕೋಲೆಗಳು ಮಾತ್ರ ನಿಮಗೆ ಬೇಡ!” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International