Revised Common Lectionary (Semicontinuous)
137 ನಾವು ಬಾಬಿಲೋನ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು
ಚೀಯೋನನ್ನು ನೆನಸಿಕೊಳ್ಳುತ್ತಾ ಅತ್ತೆವು.
2 ಸಮೀಪದಲ್ಲಿದ್ದ ನೀರವಂಜಿ ಮರಗಳಿಗೆ ನಾವು ನಮ್ಮ ಹಾರ್ಪ್‌ವಾದ್ಯಗಳನ್ನು ತೂಗುಹಾಕಿದೆವು.
3 ನಮ್ಮನ್ನು ಸೆರೆಹಿಡಿದಿದ್ದ ಜನರು
ಬಾಬಿಲೋನಿನಲ್ಲಿ ನಮಗೆ ಚೀಯೋನಿನ ಕುರಿತು ಹರ್ಷಗೀತೆಗಳನ್ನು ಹಾಡಲು ಹೇಳಿದರು.
4 ಆದರೆ ಪರದೇಶದಲ್ಲಿ
ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ!
5 ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
ನಾನು ಮತ್ತೆಂದಿಗೂ ಹಾಡನ್ನು ಹಾಡದಂತಾಗಲಿ.
6 ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ,
ನಾನು ಮತ್ತೆಂದಿಗೂ ಹಾಡಲು ಶಕ್ತನಾಗದಂತಾಗಲಿ.
ಜೆರುಸಲೇಮೇ, ನಿನ್ನ ವಿಷಯದಲ್ಲೇ
ನಾನು ಅತ್ಯಾನಂದಪಡುವೆನೆಂದು ಪ್ರಮಾಣ ಮಾಡುವೆ.
7 ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು.
ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ
ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ.
ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.
8 ಬಾಬಿಲೋನೇ, ನೀನು ನಾಶವಾಗುವೆ!
ನಿನಗೆ ತಕ್ಕ ದಂಡನೆಯನ್ನು ಕೊಡುವವನು ಧನ್ಯನು.
ನೀನು ನಮ್ಮನ್ನು ನೋಯಿಸಿದಂತೆ ನಿನ್ನನ್ನೂ ನೋಯಿಸುವವನು ಧನ್ಯನು.
9 ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಧನ್ಯನು.
ಯೆಹೋವನಿಗೆ ಪ್ರಾರ್ಥನೆ
5 ಯೆಹೋವನೇ, ನಮಗೆ ಸಂಭವಿಸಿದ್ದನ್ನು ಜ್ಞಾಪಿಸಿಕೊ.
ನಮಗಾಗಿರುವ ಅವಮಾನವನ್ನು ನೋಡು.
2 ನಮ್ಮ ದೇಶವು ಬೇರೆ ಜನಾಂಗಗಳವರ ಪಾಲಾಗಿದೆ.
ನಮ್ಮ ಮನೆಗಳು ಪರದೇಶಿಗಳಿಗೆ ಕೊಡಲ್ಪಟ್ಟಿವೆ.
3 ನಾವು ಅನಾಥರಾಗಿದ್ದೇವೆ. ನಮಗೆ ತಂದೆಯೇ ಇಲ್ಲ.
ನಮ್ಮ ತಾಯಂದಿರು ವಿಧವೆಗಳಂತಾಗಿದ್ದಾರೆ.
4 ನಾವು ಕುಡಿಯುವ ನೀರನ್ನೂ ನಾವು ಕೊಂಡುಕೊಳ್ಳಬೇಕಾಗಿದೆ.
ನಮ್ಮ ಸೌದೆಗೂ ಸಹ ನಾವು ಹಣ ಕೊಡಬೇಕಾಗಿದೆ.
5 ಮರಣದವರೆಗೂ ನಾವು ಹಿಂದಟ್ಟಲ್ಪಟ್ಟಿದ್ದೇವೆ.
ನಾವು ಬಳಲಿಹೋಗಿದ್ದೇವೆ; ನಾವು ವಿಶ್ರಾಂತಿಯನ್ನೇ ಪಡೆದಿಲ್ಲ.
6 ನಾವು ಈಜಿಪ್ಟಿನೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡೆವು.
ಸಾಕಷ್ಟು ಆಹಾರಕ್ಕಾಗಿ ನಾವು ಅಸ್ಸೀರಿಯಾದೊಡನೆ ಒಪ್ಪಂದ ಮಾಡಿಕೊಂಡೆವು.
7 ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ಪಾಪ ಮಾಡಿದರು.
ಈಗ ಅವರು ಸತ್ತುಹೋಗಿದ್ದಾರೆ.
ಆದರೆ ಅವರ ಪಾಪಗಳ ನಿಮಿತ್ತ ನಾವು ಈಗ ಸಂಕಟಪಡುತ್ತಿದ್ದೇವೆ.
8 ಗುಲಾಮರು ನಮ್ಮ ಅಧಿಪತಿಗಳಾಗಿದ್ದಾರೆ.
ನಮ್ಮನ್ನು ಯಾರೂ ಅವರಿಂದ ರಕ್ಷಿಸಲಾರರು.
9 ಆಹಾರಕ್ಕಾಗಿ ನಾವು ನಮ್ಮ ಪ್ರಾಣಗಳನ್ನೇ ಆಪತ್ತಿಗೆ ಗುರಿ ಮಾಡಿಕೊಳ್ಳುತ್ತೇವೆ.
ಊರ ಹೊರಗೆ ಖಡ್ಗಗಳನ್ನು ಹಿಡಿದುಕೊಂಡಿರುವ ಜನರಿದ್ದಾರೆ.
10 ನಮ್ಮ ಚರ್ಮವು ಒಲೆಯಂತೆ ಬಿಸಿಯಾಗಿದೆ.
ಹಸಿವೆಯಿಂದಾಗಿ ಜ್ವರವು ನಮ್ಮನ್ನು ಸುಡುತ್ತಿದೆ.
11 ಚೀಯೋನಿನ ಸ್ತ್ರೀಯರನ್ನು ವೈರಿಗಳು ಅತ್ಯಾಚಾರ ಮಾಡಿದ್ದಾರೆ.
ಯೆಹೂದದ ಪಟ್ಟಣಗಳಲ್ಲಿ ಅವರು ಕನ್ನಿಕೆಯರನ್ನು ಅತ್ಯಾಚಾರ ಮಾಡಿದ್ದಾರೆ.
12 ವೈರಿಗಳು ನಮ್ಮ ರಾಜಕುಮಾರರನ್ನು ಗಲ್ಲಿಗೇರಿಸಿದ್ದಾರೆ.
ಅವರು ನಮ್ಮ ಹಿರಿಯರಿಗೆ ಗೌರವ ಕೊಡಲಿಲ್ಲ.
13 ನಮ್ಮ ಯುವಕರನ್ನು ಬೀಸುವ ಕಲ್ಲುಗಳಿಂದ
ದವಸಧಾನ್ಯಗಳನ್ನು ಬೀಸುವವರನ್ನಾಗಿ ವೈರಿಗಳು ಮಾಡಿದರು.
ನಮ್ಮ ಯುವಕರು
ಶ್ರಮದ ಕೆಲಸದಿಂದ ಮುಗ್ಗರಿಸಿದ್ದಾರೆ.
14 ಪಟ್ಟಣದ ದ್ವಾರಗಳ ಬಳಿಯಿಂದ ಹಿರಿಯರು ಹೊರಟುಹೋಗಿದ್ದಾರೆ.
ಯುವಕರು ಸಂಗೀತ ನುಡಿಸುವುದನ್ನು ನಿಲ್ಲಿಸಿದ್ದಾರೆ.
15 ನಮ್ಮ ಹೃದಯಗಳಲ್ಲಿ ಆನಂದವೇ ಉಳಿದಿಲ್ಲ.
ನಮ್ಮ ನರ್ತನದ ಸ್ಥಾನವನ್ನು ಗೋಳಾಟವು ಆವರಿಸಿಕೊಂಡಿದೆ.
16 ನಮ್ಮ ತಲೆಯಿಂದ ಕಿರೀಟವು ಬಿದ್ದುಹೋಗಿದೆ.
ನಾವು ಪಾಪ ಮಾಡಿದ್ದರಿಂದಲೇ ನಮಗೆ ಕೇಡುಗಳಾಗಿವೆ.
17 ಇವುಗಳ ದೆಸೆಯಿಂದಾಗಿ ನಮ್ಮ ಹೃದಯಗಳು ಎಡಬಿಡದೆ ನೋಯುತ್ತಿವೆ.
ನಮ್ಮ ಕಣ್ಣುಗಳು ಸರಿಯಾಗಿ ಕಾಣದಂತಾಗಿವೆ.
18 ಚೀಯೋನ್ ಪರ್ವತವು ನಿರ್ಜನ ಪ್ರದೇಶವಾಗಿದೆ.
ಚೀಯೋನ್ ಪರ್ವತದ ಸುತ್ತಮುತ್ತಲೆಲ್ಲ ನರಿಗಳು ಓಡಾಡುತ್ತವೆ.
19 ಯೆಹೋವನೇ, ನೀನಾದರೋ ಶಾಶ್ವತವಾಗಿ ಆಳುವೆ.
ನಿನ್ನ ರಾಜಸಿಂಹಾಸನವು ಸದಾಕಾಲವಿರುವುದು.
20 ಯೆಹೋವನೇ, ನೀನು ನಮ್ಮನ್ನು ಶಾಶ್ವತವಾಗಿ ಮರೆತಿರುವುದೇಕೆ?
ನೀನು ನಮ್ಮನ್ನು ದೀರ್ಘಕಾಲದವರೆಗೆ ತೊರೆದುಬಿಟ್ಟಿರುವುದೇಕೆ?
21 ಯೆಹೋವನೇ, ನಮ್ಮನ್ನು ನಿನ್ನ ಬಳಿಗೆ ಮತ್ತೆ ಬರಮಾಡಿಕೋ.
ನಾವು ಸಂತೋಷದಿಂದ ನಿನ್ನ ಬಳಿಗೆ ಬರುತ್ತೇವೆ.
ನಮ್ಮ ಜೀವಿತಗಳನ್ನು ಮೊದಲಿನ ಸ್ಥಿತಿಗೆ ಬರಮಾಡು.
22 ನೀನು ನಮ್ಮನ್ನು ಸಂಪೂರ್ಣವಾಗಿ ತಿರಸ್ಕರಿಸಿರುವಿಯಾ?
ನೀನು ನಮ್ಮ ಮೇಲೆ ಬಹಳವಾಗಿ ಕೋಪಗೊಂಡಿರುವೆ.
ಒಣಗಿಹೋದ ಅಂಜೂರ ಮರ
(ಮತ್ತಾಯ 21:18-19)
12 ಮರುದಿನ, ಯೇಸು ಬೆಥಾನಿಯದಿಂದ ಹೋಗುತ್ತಿರಲು ಆತನಿಗೆ ಹಸಿವಾಗಿತ್ತು. 13 ಆತನು ಎಲೆಗಳಿದ್ದ ಒಂದು ಅಂಜೂರದ ಮರವನ್ನು ನೋಡಿದನು. ಆದ್ದರಿಂದ ಆ ಮರದಲ್ಲಿ ಅಂಜೂರದ ಹಣ್ಣೇನಾದರೂ ಸಿಕ್ಕಬಹುದೆಂದು ಅದರ ಬಳಿಗೆ ಹೋದನು. ಆದರೆ ಆತನು ಆ ಮರದಲ್ಲಿ ಅಂಜೂರದ ಹಣ್ಣುಗಳನ್ನು ಕಾಣಲಿಲ್ಲ. ಅಲ್ಲಿ ಎಲೆಗಳು ಮಾತ್ರ ಇದ್ದವು. ಏಕೆಂದರೆ ಅದು ಅಂಜೂರ ಹಣ್ಣಿನ ಕಾಲವಾಗಿರಲಿಲ್ಲ. 14 ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನಿನ್ನ ಹಣ್ಣನ್ನು ಯಾರೂ ತಿನ್ನದಂತಾಗಲಿ” ಎಂದನು. ಯೇಸುವಿನ ಶಿಷ್ಯರಿಗೂ ಈ ಮಾತು ಕೇಳಿಸಿತು.
ನಂಬಿಕೆಯ ಶಕ್ತಿ
(ಮತ್ತಾಯ 21:20-22)
20 ಮರುದಿನ ಬೆಳಿಗ್ಗೆ, ಯೇಸು ತನ್ನ ಶಿಷ್ಯರೊಂದಿಗೆ ಹೋಗುತ್ತಿದ್ದನು. ಹಿಂದಿನ ದಿನ ಯೇಸು ಶಪಿಸಿದ ಅಂಜೂರದ ಮರವನ್ನು ಶಿಷ್ಯರು ನೋಡಿದರು. ಅಂಜೂರದ ಮರವು ಬೇರುಸಹಿತ ಒಣಗಿಹೋಗಿತ್ತು. 21 ಪೇತ್ರನು ಆ ಮರವನ್ನು ಜ್ಞಾಪಿಸಿಕೊಂಡು, ಯೇಸುವಿಗೆ, “ಗುರುವೇ, ನೋಡು! ನಿನ್ನೆ ನೀನು ಶಪಿಸಿದ ಅಂಜೂರದ ಮರ ಒಣಗಿಹೋಗಿದೆ!” ಎಂದನು.
22 ಯೇಸು, “ದೇವರಲ್ಲಿ ನಂಬಿಕೆ ಇಡಿರಿ. 23 ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದೊಳಗೆ ಬೀಳು’ ಎಂದು ಹೇಳಿ, ಸಂಶಯವನ್ನೇಪಡದೆ, ನೀವು ಹೇಳಿದ್ದು ಖಂಡಿತವಾಗಿ ನೆರವೇರುತ್ತದೆ ಎಂದು ನಂಬಿದರೆ, ದೇವರು ಅದನ್ನು ನಿಮಗಾಗಿ ಮಾಡುತ್ತಾನೆ. 24 ಆದ್ದರಿಂದ ನೀವು ಪ್ರಾರ್ಥನೆಯಲ್ಲಿ ಬೇಡಿಕೊಂಡು, ಅದನ್ನೆಲ್ಲಾ ಹೊಂದಿಕೊಂಡಾಯಿತೆಂದು ನಂಬಿದರೆ, ಅದೆಲ್ಲಾ ನಿಮ್ಮದಾಗುತ್ತವೆ ಎಂದು ನಾನು ನಿಮಗೆ ಹೇಳುತ್ತೇನೆ.
Kannada Holy Bible: Easy-to-Read Version. All rights reserved. © 1997 Bible League International