Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಪ್ರಲಾಪಗಳು 3:19-26

19 ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು
    ನೆನಸಿಕೊಂಡರೆ ಅದು ಕಹಿ ವಿಷದಂತಿದೆ.
20 ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು,
    ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ.
21 ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು.
    ನಾನು ಯೋಚಿಸಿಕೊಳ್ಳುವದೇನೆಂದರೆ:
22 ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ.
    ಆತನ ದಯೆಗೆ ಅಂತ್ಯವೇ ಇಲ್ಲ.
23 ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು.
    ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು!
24 ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು;
    ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.

25 ಯೆಹೋವನು ತನಗಾಗಿ ಕಾಯುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
    ಯೆಹೋವನು ತನ್ನನ್ನು ಎದುರುನೋಡುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
26 ತನ್ನ ರಕ್ಷಣೆಗಾಗಿ ಯೆಹೋವನಿಗಾಗಿಯೇ
    ಮೌನದಿಂದ ಕಾಯುವುದು ಮನುಷ್ಯನಿಗೆ ಒಳ್ಳೆಯದು.

ಯೆರೆಮೀಯ 52:12-30

12 ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಭತ್ತನೆ ವರ್ಷದ ಐದನೆ ತಿಂಗಳಿನ ಹತ್ತನೆ ದಿನ ಬಾಬಿಲೋನಿನ ವಿಶೇಷ ರಕ್ಷಕದಳದ ಅಧಿಪತಿಯಾದ ನೆಬೂಜರದಾನನು ಜೆರುಸಲೇಮಿಗೆ ಬಂದನು. ನೆಬೂಜರದಾನನು ಬಾಬಿಲೋನಿನ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದನು. 13 ನೆಬೂಜರದಾನನು ಯೆಹೋವನ ಆಲಯವನ್ನು ಸುಟ್ಟನು. ಅವನು ಜೆರುಸಲೇಮಿನಲ್ಲಿದ್ದ ಅರಮನೆಯನ್ನು ಮತ್ತು ಉಳಿದೆಲ್ಲ ಮನೆಗಳನ್ನು ಸುಟ್ಟುಬಿಟ್ಟನು. ಅವನು ಜೆರುಸಲೇಮಿನ ಎಲ್ಲಾ ಮುಖ್ಯ ಕಟ್ಟಡಗಳನ್ನು ಸುಟ್ಟುಹಾಕಿದನು. 14 ಬಾಬಿಲೋನಿನ ಇಡೀ ಸೈನ್ಯವು ಜೆರುಸಲೇಮಿನ ಪೌಳಿಗೋಡೆಯನ್ನು ಒಡೆದುಹಾಕಿತು. ಆ ಸೈನ್ಯವು ರಾಜನ ವಿಶೇಷ ರಕ್ಷಕದಳದ ಅಧಿಪತಿಯ ಅಧಿನದಲ್ಲಿತ್ತು. 15 ಸೇನಾಧಿಪತಿಯಾದ ನೆಬೂಜರದಾನನು ಜೆರುಸಲೇಮಿನಲ್ಲಿ ಇನ್ನೂ ಉಳಿದುಕೊಂಡಿದ್ದ ಜನರನ್ನು ಬಂಧಿಗಳನ್ನಾಗಿ ಮಾಡಿಕೊಂಡನು. ಈ ಮುಂಚೆ ಬಾಬಿಲೋನಿನ ರಾಜನಿಗೆ ಶರಣಾಗತರಾದವರನ್ನು ಸಹ ಅವನು ತೆಗೆದುಕೊಂಡು ಹೋದನು. ಜೆರುಸಲೇಮಿನಲ್ಲಿ ಉಳಿದ ಕುಶಲಕರ್ಮಿಗಳನ್ನು ಸಹ ಅವನು ತೆಗೆದುಕೊಂಡು ಹೋದನು. 16 ಆದರೆ ಕೆಲವು ಕಡುಬಡವರನ್ನು ನೆಬೂಜರದಾನನು ಆ ಪ್ರದೇಶದಲ್ಲಿಯೇ ಬಿಟ್ಟುಹೋದನು. ಅವನು ಆ ಜನರನ್ನು ದ್ರಾಕ್ಷಿತೋಟಗಳಲ್ಲಿ ಮತ್ತು ಹೊಲಗಳಲ್ಲಿ ಕೆಲಸ ಮಾಡಲು ಬಿಟ್ಟುಹೋದನು.

17 ಬಾಬಿಲೋನಿನ ಸೈನಿಕರು ಪವಿತ್ರಾಲಯದ ಕಂಚಿನ ಕಂಬಗಳನ್ನು ಮುರಿದರು. ಅವರು ಯೆಹೋವನ ಆಲಯದಲ್ಲಿದ್ದ ಪೀಠಗಳನ್ನು ಮತ್ತು ಕಂಚಿನ ಸರೋವರಗಳನ್ನು ಸಹ ಮುರಿದುಬಿಟ್ಟರು. ಅವರು ಎಲ್ಲಾ ಕಂಚಿನ ವಸ್ತುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 18 ಬಾಬಿಲೋನಿನ ಸೈನಿಕರು ಪವಿತ್ರಾಲಯದಿಂದ ಪಾತ್ರೆಗಳು, ಸಲಿಕೆಗಳು, ಕತ್ತರಿಗಳು, ದೊಡ್ಡ ಬೋಗುಣಿಗಳು, ತಟ್ಟೆಗಳು ಮತ್ತು ಪವಿತ್ರಾಲಯದ ಸೇವೆಗಾಗಿ ಉಪಯೋಗಿಸಲಾಗುವ ಕಂಚಿನ ಸಾಮಾನುಗಳನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 19 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಬೋಗುಣಿಗಳನ್ನು, ಧೂಪಾರತಿಗಳನ್ನು, ದೊಡ್ಡ ಬಟ್ಟಲುಗಳನ್ನು, ಪಾತ್ರೆಗಳನ್ನು, ದೀಪಸ್ತಂಭಗಳನ್ನು, ತಟ್ಟೆಗಳನ್ನು, ಪಾನನೈವೇದ್ಯಕ್ಕೆ ಉಪಯೋಗಿಸುವ ಬೋಗುಣಿಗಳನ್ನು ತೆಗೆದುಕೊಂಡು ಹೋದನು. ಚಿನ್ನ ಅಥವಾ ಬೆಳ್ಳಿಯ ಪ್ರತಿಯೊಂದು ವಸ್ತುವನ್ನು ಅವನು ತೆಗೆದುಕೊಂಡನು. 20 ಎರಡು ಕಂಬಗಳು, ಸಮುದ್ರವೆನಿಸಿಕೊಂಡ ಪಾತ್ರೆಯು, ಅದನ್ನು ಹೊತ್ತುಕೊಂಡಿರುವ ಹನ್ನೆರಡು ಕಂಚಿನ ಹೋರಿಗಳು ಮತ್ತು ಚಲಿಸಬಲ್ಲ ಅಡ್ಡಣಿಗಳು ಬಹಳ ಭಾರವಾಗಿದ್ದವು. ರಾಜನಾದ, ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಆ ವಸ್ತುಗಳನ್ನು ಮಾಡಿಸಿದ್ದನು. ಆ ವಸ್ತುಗಳಿಗಾಗಿ ಉಪಯೋಗಿಸಲಾದ ಕಂಚು ತೂಕ ಮಾಡಲಾರದಷ್ಟು ಭಾರವಾಗಿತ್ತು.

21 ಪ್ರತಿಯೊಂದು ಕಂಚಿನ ಕಂಬ ಇಪ್ಪತ್ತೇಳು ಅಡಿ ಎತ್ತರವಾಗಿದ್ದು ಅದರ ಸುತ್ತಳತೆ ಹದಿನೆಂಟು ಅಡಿ ಇತ್ತು. ಪ್ರತಿಯೊಂದು ಕಂಬ ಟೊಳ್ಳಾಗಿದ್ದು ಅದರ ತಗಡು ನಾಲ್ಕು ಅಂಗುಲ ದಪ್ಪವಾಗಿತ್ತು. 22 ಮೊದಲನೇ ಕಂಬದ ಮೇಲೆ ಏಳುವರೆ ಅಡಿ ಎತ್ತರದ ಕಂಚಿನ ಕಂಬವಿತ್ತು. ಅದು ಅಲ್ಲಲ್ಲಿ ಜಾಲರಿಗಳಿಂದ ಮತ್ತು ಕಂಚಿನ ದಾಳಿಂಬೆಗಳಿಂದ ಅಲಂಕೃತವಾಗಿತ್ತು. ಎರಡನೆಯ ಕಂಬದಲ್ಲಿಯೂ ದಾಳಿಂಬೆಗಳು ಶೋಭಿಸುತ್ತಿದ್ದವು. ಅದು ಮೊದಲನೆ ಕಂಬದಂತೆ ಇತ್ತು. 23 ಕಂಬಗಳ ಪಕ್ಕದಲ್ಲಿ ತೊಂಭತ್ತಾರು ದಾಳಿಂಬೆಗಳಿದ್ದವು. ಜಾಲರಿಯ ಮೇಲೆ ಸುತ್ತಲೂ ಒಟ್ಟಾಗಿ ನೂರು ದಾಳಿಂಬೆ ಹಣ್ಣುಗಳಿದ್ದವು.

24 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಸೆರಾಯ ಮತ್ತು ಚೆಫನ್ಯರನ್ನು ಸೆರೆಹಿಡಿದನು. ಸೆರಾಯನು ಮಹಾ ಯಾಜಕನಾಗಿದ್ದನು ಮತ್ತು ಚೆಫನ್ಯನು ಅವರ ತರುವಾಯದ ಶ್ರೇಷ್ಠ ಯಾಜಕನಾಗಿದ್ದನು. ಮೂರು ಜನ ದ್ವಾರಪಾಲಕರನ್ನು ಕೂಡ ಸೆರೆಹಿಡಿಯಲಾಯಿತು. 25 ರಾಜನ ವಿಶೇಷ ರಕ್ಷಕದಳದ ಅಧಿಪತಿಯು ಸೈನ್ಯದ ವ್ಯವಸ್ಥಾಪಕನ ಅಧಿಕಾರಿಯನ್ನು ಬಂಧಿಸಿದನು. ಅವನು ರಾಜನ ಏಳು ಜನ ಆಪ್ತ ಮಂತ್ರಿಗಳನ್ನು ಸಹ ಸೆರೆಹಿಡಿದನು. ಅವರೆಲ್ಲ ಇನ್ನೂ ಜೆರುಸಲೇಮಿನಲ್ಲಿದ್ದರು. ಯುದ್ಧಕ್ಕೆ ಹೋಗುವವರ ಪಟ್ಟಿಯನ್ನು ಮಾಡುವ ಲಿಪಿಗಾರನನ್ನು ಸಹ ಅವನು ಸೆರೆಹಿಡಿದನು. ನಗರದಲ್ಲಿದ್ದ ಅರವತ್ತು ಮಂದಿ ಜನಸಾಮಾನ್ಯರನ್ನು ಸಹ ಅವನು ಸೆರೆಹಿಡಿದನು. 26-27 ಸೇನಾಧಿಪತಿಯಾದ ನೆಬೂಜರದಾನನು ಆ ಜನರನ್ನೆಲ್ಲ ಸೆರೆಹಿಡಿದನು. ಬಾಬಿಲೋನಿನ ರಾಜನಲ್ಲಿಗೆ ತಂದನು. ಬಾಬಿಲೋನಿನ ರಾಜನು ರಿಬ್ಲ ನಗರದಲ್ಲಿದ್ದನು. ರಿಬ್ಲ ನಗರವು ಹಮಾತ್ ಪ್ರದೇಶದಲ್ಲಿದೆ. ಆ ರಿಬ್ಲ ನಗರದಲ್ಲಿಯೇ ರಾಜನು ಅವರನ್ನೆಲ್ಲ ವಧಿಸಬೇಕೆಂದು ಅಪ್ಪಣೆ ಮಾಡಿದನು. ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. 28 ನೆಬೂಕದ್ನೆಚ್ಚರನು ಸೆರೆಹಿಡಿದುಕೊಂಡವರ ವಿವರ ಹೀಗಿದೆ:

ರಾಜನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಏಳನೇ ವರ್ಷದಲ್ಲಿ[a] ಯೆಹೂದದಿಂದ ಒಯ್ಯಲ್ಪಟ್ಟ ಜನರು 3,023.

29 ನೆಬೂಕದ್ನೆಚ್ಚರನ ಹದಿನೆಂಟನೇ ವರ್ಷದಲ್ಲಿ[b] ಜೆರುಸಲೇಮಿನಿಂದ 832.

30 ನೆಬೂಕದ್ನೆಚ್ಚರನ ಇಪ್ಪತ್ಮೂರನೇ ವರ್ಷದಲ್ಲಿ[c] ನೆಬೂಜರದಾನನು 745 ಜನ ಯೆಹೂದಿಯರನ್ನು ಸೆರೆಹಿಡಿದನು. ನೆಬೂಜರದಾನನು ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು.

ಒಟ್ಟಿನಲ್ಲಿ 4,600 ಜನರನ್ನು ಸೆರೆಹಿಡಿಯಲಾಗಿತ್ತು.

ಪ್ರಕಟನೆ 2:12-29

ಪೆರ್ಗಮದಲ್ಲಿರುವ ಸಭೆಗೆ ಯೇಸುವಿನ ಪತ್ರ

12 “ಪೆರ್ಗಮದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ಹರಿತವಾದ ಇಬ್ಬಾಯಿಖಡ್ಗವನ್ನು ಹೊಂದಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.

13 “ನೀನು ಎಲ್ಲಿ ವಾಸಮಾಡುತ್ತಿರುವೆ ಎಂಬುದು ನನಗೆ ತಿಳಿದಿದೆ. ಸೈತಾನನ ಸಿಂಹಾಸನ ವಿರುವ ಕಡೆಯಲ್ಲಿ ನೀನು ವಾಸಿಸುತ್ತಿರುವೆ. ಆದರೆ ನೀನು ನನಗೆ ನಂಬಿಗಸ್ತನಾಗಿರುವೆ. ಅಂತಿಪನ ಕಾಲದಲ್ಲಿಯೂ ನೀನು ನನ್ನಲ್ಲಿಟ್ಟಿರುವ ನಂಬಿಕೆಯನ್ನು ತಿಳಿಸಲು ನಿರಾಕರಿಸಲಿಲ್ಲ. ನಿನ್ನ ಪಟ್ಟಣದಲ್ಲಿ ಕೊಲ್ಲಲ್ಪಟ್ಟ ಅಂತಿಪನು ನನ್ನ ನಂಬಿಗಸ್ತ ಸಾಕ್ಷಿಯಾಗಿದ್ದನು. ನಿನ್ನ ನಗರ ಸೈತಾನನು ವಾಸಿಸುವ ನಗರವಾಗಿದೆ.

14 “ಆದರೆ ನಿನ್ನ ವಿರುದ್ಧವಾಗಿ ಹೇಳಬೇಕಾದ ಕೆಲವು ಸಂಗತಿಗಳಿವೆ. ನಿನ್ನ ಸಭೆಯಲ್ಲಿ ಬಿಳಾಮನ ದುರ್ಬೋಧನೆಗಳನ್ನು ಅನುಸರಿಸುವ ಜನರಿದ್ದಾರೆ. ಇಸ್ರೇಲಿನ ಜನರನ್ನು ಹೇಗೆ ಪಾಪಕ್ಕೆ ಒಳಗಾಗುವಂತೆ ಮಾಡಬೇಕೆಂಬುದನ್ನು ಬಿಳಾಮನು ಬಾಲಾಕನಿಗೆ ದುರ್ಬೋಧನೆ ಮಾಡಿದನು. ಆದ್ದರಿಂದ ಇಸ್ರೇಲರು ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವುದರ ಮೂಲಕವಾಗಿಯೂ ಲೈಂಗಿಕ ಪಾಪಗಳನ್ನು ಮಾಡುವುದರ ಮೂಲಕವಾಗಿಯೂ ಪಾಪ ಮಾಡಿದರು. 15 ನಿನ್ನ ಸಭೆಯಲ್ಲಿಯೂ ಇದೇ ರೀತಿ ನಡೆಯುತ್ತಿದೆ. ನಿಕೊಲಾಯಿತರ ಬೋಧನೆಗಳನ್ನು ಅನುಸರಿಸುವ ಜನರು ನಿನ್ನಲ್ಲಿದ್ದಾರೆ. 16 ಆದ್ದರಿಂದ ನಿನ್ನ ಮನಸ್ಸನ್ನು ಪರಿವರ್ತಿಸಿಕೊ! ಇಲ್ಲವಾದರೆ, ನಾನು ತ್ವರಿತವಾಗಿ ನಿನ್ನಲ್ಲಿಗೆ ಬಂದು, ನನ್ನ ಬಾಯಿಂದ ಹೊರಗೆ ಬರುವ ಖಡ್ಗದಿಂದ ಆ ಜನರ ವಿರುದ್ಧ ಹೋರಾಡುತ್ತೇನೆ.

17 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

“ಜಯಗಳಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಅಡಗಿಸಿಟ್ಟಿರುವ ಮನ್ನವನ್ನು[a] ಕೊಡುತ್ತೇನೆ. ಅವನಿಗೆ ನಾನು ಬಿಳುಪಾದ ಕಲ್ಲನ್ನು ಕೊಡುತ್ತೇನೆ. ಆ ಕಲ್ಲಿನ ಮೇಲೆ ಹೊಸ ಹೆಸರನ್ನು ಕೆತ್ತಲಾಗಿದೆ. ಈ ಹೊಸ ಹೆಸರು ಯಾರಿಗೂ ತಿಳಿದಿಲ್ಲ. ಈ ಕಲ್ಲನ್ನು ಪಡೆದುಕೊಂಡ ವ್ಯಕ್ತಿಯು ಮಾತ್ರ ಹೊಸ ಹೆಸರನ್ನು ತಿಳಿದುಕೊಳ್ಳುತ್ತಾನೆ.

ಥುವತೈರದಲ್ಲಿರುವ ಸಭೆಗೆ ಯೇಸುವಿನ ಪತ್ರ

18 “ಥುವತೈರದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:

“ದೇವಕುಮಾರನು ಈ ಸಂಗತಿಗಳನ್ನು ಹೇಳುತ್ತಾನೆ. ಬೆಂಕಿಯ ಉರಿಯಂತೆ ಪ್ರಜ್ವಲಿಸುವ ಕಣ್ಣುಗಳೂ ಹೊಳೆಯುವ ತಾಮ್ರದಂತಿರುವ ಪಾದಗಳೂ ಇರುವಾತನು, ನಿನಗೆ ಇವುಗಳನ್ನು ಹೇಳುತ್ತಾನೆ.

19 “ನೀನು ಮಾಡುವ ಕಾರ್ಯಗಳು ನನಗೆ ತಿಳಿದಿವೆ. ನಿನ್ನ ಪ್ರೀತಿ, ನಂಬಿಕೆ, ಸೇವೆ ಮತ್ತು ತಾಳ್ಮೆಗಳು ನನಗೆ ತಿಳಿದಿವೆ. ಈಗ ನೀನು ಮೊದಲಿಗಿಂತ ಹೆಚ್ಚಿಗೆ ಮಾಡುತ್ತಿರುವುದನ್ನೂ ಬಲ್ಲೆನು. 20 ಆದರೆ ನಿನ್ನ ವಿರುದ್ಧವಾಗಿ ಇವುಗಳನ್ನು ಹೇಳಬೇಕಾಗಿದೆ. ಯೆಜೆಬೇಲ್ ಎಂಬ ಸ್ತ್ರೀಯು ತನ್ನ ಇಷ್ಟದಂತೆ ಮಾಡಲು ಅವಕಾಶಕೊಟ್ಟಿರುವೆ. ಆಕೆಯು ತನ್ನನ್ನು ಪ್ರವಾದಿನಿಯೆಂದು ಹೇಳಿಕೊಂಡು ತನ್ನ ಬೋಧನೆಗಳಿಂದ ನನ್ನ ಸೇವಕರನ್ನು ನನ್ನಿಂದ ದೂರ ಸೆಳೆಯುತ್ತಿದ್ದಾಳೆ. ಲೈಂಗಿಕ ಪಾಪಗಳನ್ನು ಮಾಡುವಂತೆಯೂ ವಿಗ್ರಹಗಳಿಗೆ ಅರ್ಪಿತವಾದ ಆಹಾರವನ್ನು ತಿನ್ನುವಂತೆಯೂ ಆಕೆಯು ನನ್ನ ಜನರನ್ನು ಪ್ರೇರೇಪಿಸುತ್ತಿದ್ದಾಳೆ.[b] 21 ತನ್ನ ಮನಸ್ಸನ್ನು ಪರಿವರ್ತಿಸಿಕೊಂಡು ಪಾಪಗಳಿಂದ ದೂರ ಸರಿಯಲು ನಾನು ಆಕೆಗೆ ಸಮಯ ಕೊಟ್ಟರೂ ಪರಿವರ್ತನೆ ಹೊಂದಲು ಆಕೆಗೆ ಇಷ್ಟವಿಲ್ಲ.

22 “ಆದ್ದರಿಂದ ಆಕೆಯು ಮಹಾಸಂಕಟಪಡುತ್ತಾ ಹಾಸಿಗೆಯ ಮೇಲೆ ಬಿದ್ದಿರುವಂತೆ ಮಾಡುತ್ತೇನೆ. ಅವಳ ಜೊತೆಯಲ್ಲಿ ಲೈಂಗಿಕ ಪಾಪ ಮಾಡುವ ಜನರೆಲ್ಲರೂ ಮಹಾಸಂಕಟವನ್ನು ಅನುಭವಿಸುತ್ತಾರೆ. ಅವಳು ಮಾಡುವ ಕಾರ್ಯಗಳಿಗೆ ಅವರು ವಿಮುಖರಾಗದಿದ್ದರೆ ನಾನು ಇದನ್ನು ಈಗಲೇ ಮಾಡುತ್ತೇನೆ. 23 ನಾನು ಅವಳ ಹಿಂಬಾಲಕರನ್ನು ಕೊಲ್ಲುತ್ತೇನೆ. ಮನುಷ್ಯರ ಅಂತರಂಗವನ್ನೂ ಅವರ ಆಲೋಚನೆಗಳನ್ನೂ ತಿಳಿದಿರುವಾತನು ನಾನೇ ಎಂಬುದನ್ನು ಆಗ ಎಲ್ಲಾ ಸಭೆಗಳವರು ತಿಳಿದುಕೊಳ್ಳುವರು. ನಿಮ್ಮಲ್ಲಿ ಪ್ರತಿಯೊಬ್ಬನಿಗೂ ಅವನವನ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತೇನೆ.

24 “ಆದರೆ ಥುವತೈರದಲ್ಲಿರುವ ಇನ್ನಿತರರಿಗೆ ನಾನು ಹೇಳುವುದೇನೆಂದರೆ, ನೀವು ಆಕೆಯ ಬೋಧನೆಗಳನ್ನು ಅನುಸರಿಸಲಿಲ್ಲ, ‘ಸೈತಾನನ ಅಗಾಧವಾದ ರಹಸ್ಯಗಳು’ ಎಂದು ಅವರು ಹೇಳುವ ಸಂಗತಿಗಳನ್ನು ನೀವು ಕಲಿತುಕೊಂಡಿಲ್ಲ. ಆದ್ದರಿಂದ ನಾನು ಬೇರೊಂದು ಹೊರೆಯನ್ನು ನಿಮ್ಮ ಮೇಲೆ ಹೊರಿಸುವುದಿಲ್ಲ. 25 ನಾನು ಬರುವ ತನಕ ಈಗ ನೀವಿರುವಂತೆಯೇ ಇರಿ.

26 “ಜಯಗಳಿಸುವವನಿಗೆ ಮತ್ತು ನಾನು ಅಪೇಕ್ಷಿಸುವುದನ್ನು ಕೊನೆಯವರೆಗೆ ಮಾಡುವವನಿಗೆ ಜನಾಂಗಗಳ ಮೇಲಿನ ಅಧಿಕಾರವನ್ನು ನೀಡುತ್ತೇನೆ: 27 ‘ಅವನು ಕಬ್ಬಿಣದ ಕೋಲಿನಿಂದ ಅವರನ್ನು ಆಳುತ್ತಾನೆ. ಮಣ್ಣಿನ ಕುಡಿಕೆಗಳೋ ಎಂಬಂತೆ ಅವರನ್ನು ಚೂರುಚೂರು ಮಾಡುತ್ತಾನೆ.’[c] 28 ನಾನು ನನ್ನ ತಂದೆಯಿಂದ ಪಡೆದುಕೊಂಡ ಶಕ್ತಿ ಇದೇ. ನಾನು ಅವನಿಗೆ ಉದಯಸೂಚಕ ನಕ್ಷತ್ರವನ್ನು ನೀಡುತ್ತೇನೆ. 29 ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International