Revised Common Lectionary (Semicontinuous)
19 ನನ್ನ ಸಂಕಟವನ್ನು ಮತ್ತು ಮನೆಯಿಲ್ಲದ ಸ್ಥಿತಿಯನ್ನು
ನೆನಸಿಕೊಂಡರೆ ಅದು ಕಹಿ ವಿಷದಂತಿದೆ.
20 ನನ್ನ ಸಂಕಷ್ಟಗಳನ್ನೆಲ್ಲ ನಾನು ಚೆನ್ನಾಗಿ ಜ್ಞಾಪಿಸಿಕೊಳ್ಳುವೆನು,
ಆದ್ದರಿಂದ ನಾನು ತುಂಬಾ ವ್ಯಸನಗೊಂಡಿದ್ದೇನೆ.
21 ಆದರೆ ನಾನು ಬೇರೊಂದನ್ನು ಯೋಚಿಸಿಕೊಂಡಾಗ ನಾನು ನಿರೀಕ್ಷೆಯುಳ್ಳವನಾಗುವೆನು.
ನಾನು ಯೋಚಿಸಿಕೊಳ್ಳುವದೇನೆಂದರೆ:
22 ಯೆಹೋವನ ಪ್ರೀತಿಗೂ ಕರುಣೆಗೂ ಕೊನೆಯೇ ಇಲ್ಲ.
ಆತನ ದಯೆಗೆ ಅಂತ್ಯವೇ ಇಲ್ಲ.
23 ಪ್ರತಿ ಮುಂಜಾನೆಯೂ ಆತನು ಅದನ್ನು ಹೊಸ ರೀತಿಗಳಲ್ಲಿ ತೋರಿಸುವನು.
ಯೆಹೋವನೇ, ನೀನು ಎಷ್ಟೋ ಸತ್ಯವಂತನು ಮತ್ತು ನಂಬಿಗಸ್ತನು!
24 ನಾನು ನನ್ನೊಳಗೆ, “ಯೆಹೋವನೇ ನನ್ನ ಪಾಲು;
ಆದ್ದರಿಂದ ನಾನು ಆತನಲ್ಲಿ ಭರವಸವಿಡುವೆನು” ಎಂದುಕೊಳ್ಳುವೆನು.
25 ಯೆಹೋವನು ತನಗಾಗಿ ಕಾಯುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
ಯೆಹೋವನು ತನ್ನನ್ನು ಎದುರುನೋಡುವ ಜನರಿಗೆ ಒಳ್ಳೆಯವನಾಗಿರುತ್ತಾನೆ.
26 ತನ್ನ ರಕ್ಷಣೆಗಾಗಿ ಯೆಹೋವನಿಗಾಗಿಯೇ
ಮೌನದಿಂದ ಕಾಯುವುದು ಮನುಷ್ಯನಿಗೆ ಒಳ್ಳೆಯದು.
ಜೆರುಸಲೇಮಿನ ಪತನ
52 ಚಿದ್ಕೀಯನು ಯೆಹೂದದ ರಾಜನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದನು. ಚಿದ್ಕೀಯನು ಜೆರುಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿಯ ಹೆಸರು ಹಮೂಟಲ್. ಈಕೆ ಯೆರೆಮೀಯನ[a] ಮಗಳು. ಹಮೂಟಲಳ ಮನೆತನದವರು ಲಿಬ್ನ ಪಟ್ಟಣದ ನಿವಾಸಿಗಳಾಗಿದ್ದರು. 2 ರಾಜನಾದ ಯೆಹೋಯಾಕೀಮನು ಮಾಡಿದಂತೆ ಚಿದ್ಕೀಯನು ದುಷ್ಕೃತ್ಯಗಳನ್ನು ಮಾಡಿದನು. ಚಿದ್ಕೀಯನು ಆ ದುಷ್ಕೃತ್ಯಗಳನ್ನು ಮಾಡಿದ್ದು ಯೆಹೋವನಿಗೆ ಒಪ್ಪಿಗೆಯಾಗಲಿಲ್ಲ. 3 ಯೆಹೋವನಿಗೆ ಅವರ ಮೇಲೆ ಕೋಪ ಬಂದುದರಿಂದ ಜೆರುಸಲೇಮ್ ಮತ್ತು ಯೆಹೂದಗಳಿಗೆ ವಿಪತ್ತುಗಳು ಸಂಭವಿಸಿದವು. ಕೊನೆಗೆ, ಯೆಹೋವನು ಜೆರುಸಲೇಮ್ ಮತ್ತು ಯೆಹೂದದ ಜನರನ್ನು ತನ್ನಿದ ದೂರ ಎಸೆದುಬಿಟ್ಟನು.
ಚಿದ್ಕೀಯನು ಬಾಬಿಲೋನ್ ರಾಜನ ವಿರುದ್ಧವಾಗಿ ದಂಗೆ ಎದ್ದನು. 4 ಆದ್ದರಿಂದ ಚಿದ್ಕೀಯನು ತನ್ನ ಆಳ್ವಿಕೆಯ ಒಂಭತ್ತನೆಯ ವರ್ಷದ ಹತ್ತನೆಯ ತಿಂಗಳಿನ ಹತ್ತನೆಯ ದಿನ[b] ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಜೆರುಸಲೇಮಿನ ವಿರುದ್ಧ ದಂಡಯಾತ್ರೆ ಕೈಗೊಂಡನು. ನೆಬೂಕದ್ನೆಚ್ಚರನ ಸಂಗಡ ಅವನ ಇಡೀ ಸೈನ್ಯವಿತ್ತು. ಬಾಬಿಲೋನ್ ಸೈನ್ಯವು ಜೆರುಸಲೇಮಿನ ಹೊರಭಾಗದಲ್ಲಿ ಬೀಡುಬಿಟ್ಟಿತು. ಆ ನಗರವನ್ನು ಹತ್ತಲು ಅನುಕೂಲವಾಗುವಂತೆ ಅವರು ನಗರದ ಪೌಳಿಗೋಡೆಗೆ ಅಲ್ಲಲ್ಲಿ ಇಳಿಜಾರಾದ ಗೋಡೆಗಳನ್ನು ಕಟ್ಟಿದ್ದರು. 5 ಚಿದ್ಕೀಯನ ಆಳ್ವಿಕೆಯ ಹನ್ನೊಂದನೇ ವರ್ಷದವರೆಗೆ ಬಾಬಿಲೋನಿನ ಸೈನ್ಯವು ಜೆರುಸಲೇಮ್ ನಗರವನ್ನು ಮುತ್ತಿಗೆ ಹಾಕಿತ್ತು. 6 ಆ ವರ್ಷದ ನಾಲ್ಕನೆ ತಿಂಗಳಿನ ಒಂಭತ್ತನೆ ದಿನದವರೆಗೆ ಆ ನಗರದಲ್ಲಿ ಹಸಿವಿನ ಹಾವಳಿ ತುಂಬ ಹೆಚ್ಚಾಗಿತ್ತು. ಆ ನಗರದಲ್ಲಿ ಜನರಿಗೆ ತಿನ್ನಲು ಆಹಾರವೇ ಇರಲಿಲ್ಲ. 7 ಆ ದಿನ ಬಾಬಿಲೋನಿನ ಸೈನ್ಯವು ಜೆರುಸಲೇಮಿನಲ್ಲಿ ನುಗ್ಗಿತ್ತು. ಜೆರುಸಲೇಮಿನ ಸೈನಿಕರು ಓಡಿಹೋದರು. ಅವರು ರಾತ್ರಿಯ ಸಮಯದಲ್ಲಿ ಎರಡು ಗೋಡೆಗಳ ಮಧ್ಯದ ಬಾಗಿಲಿನಿಂದ ನಗರದಿಂದ ಓಡಿಹೋದರು. ಆ ಬಾಗಿಲು ರಾಜನ ಉದ್ಯಾನವನದ ಹತ್ತಿರ ಇತ್ತು. ಬಾಬಿಲೋನಿನ ಸೈನಿಕರು ಜೆರುಸಲೇಮ್ ನಗರವನ್ನು ಮುತ್ತಿದ್ದರೂ ಜೆರುಸಲೇಮಿನ ಸೈನಿಕರು, ಮರುಭೂಮಿಯ ಕಡೆಗೆ ಓಡಿಹೋದರು.
8 ಬಾಬಿಲೋನಿನ ಸೈನಿಕರು ರಾಜನಾದ ಚಿದ್ಕೀಯನನ್ನು ಬೆನ್ನಟ್ಟಿದರು. ಅವರು ಅವನನ್ನು ಜೆರಿಕೊವಿನ ಬಯಲಿನಲ್ಲಿ ಹಿಡಿದರು. ಚಿದ್ಕೀಯನ ಎಲ್ಲಾ ಸೈನಿಕರು ಓಡಿಹೋದರು. 9 ಬಾಬಿಲೋನಿನ ಸೈನಿಕರು ರಾಜನಾದ ಚಿದ್ಕೀಯನನ್ನು ಬಂಧಿಸಿ ಅವನನ್ನು ರಿಬ್ಲದಲ್ಲಿದ್ದ ತಮ್ಮ ರಾಜನ ಬಳಿಗೆ ಹಿಡಿದುಕೊಂಡು ಹೋದರು. ರಿಬ್ಲವು ಹಮಾತ್ ಪ್ರದೇಶದಲ್ಲಿದೆ. ರಿಬ್ಲದಲ್ಲಿ ಬಾಬಿಲೋನಿನ ರಾಜನು ಚಿದ್ಕೀಯನ ಬಗ್ಗೆ ತನ್ನ ತೀರ್ಪನ್ನು ಪ್ರಕಟಪಡಿಸಿದನು. 10 ರಿಬ್ಲ ನಗರದಲ್ಲಿ ಬಾಬೆಲಿನ ರಾಜನು ಚಿದ್ಕೀಯನ ಮಕ್ಕಳನ್ನು ಸಂಹರಿಸಿದನು. ಚಿದ್ಕೀಯನು ತನ್ನ ಮಕ್ಕಳ ಕೊಲೆಯನ್ನು ಕಣ್ಣಾರೆ ನೋಡುವಂತೆ ಮಾಡಲಾಯಿತು. ಬಾಬಿಲೋನಿನ ರಾಜನು ಯೆಹೂದದ ರಾಜನ ಎಲ್ಲಾ ಅಧಿಕಾರಿಗಳನ್ನು ಸಹ ಕೊಲ್ಲಿಸಿದನು. 11 ತರುವಾಯ ಬಾಬಿಲೋನಿನ ರಾಜನು ಚಿದ್ಕೀಯನ ಕಣ್ಣುಗಳನ್ನು ಸಹ ಕೀಳಿಸಿದನು. ಅವನಿಗೆ ಕಂಚಿನ ಸರಪಳಿಗಳನ್ನು ಬಿಗಿಸಿದನು. ಆಮೇಲೆ ಚಿದ್ಕೀಯನನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದನು. ಬಾಬಿಲೋನಿನಲ್ಲಿ ಚಿದ್ಕೀಯನನ್ನು ಸೆರೆಮನೆಯಲ್ಲಿ ಇಟ್ಟನು. ಚಿದ್ಕೀಯನು ಸಾಯುವವರೆಗೆ ಸೆರೆಮನೆಯಲ್ಲಿದ್ದನು.
ಸ್ಮುರ್ನದಲ್ಲಿರುವ ಸಭೆಗೆ ಯೇಸುವಿನ ಪತ್ರ
8 “ಸ್ಮುರ್ನದಲ್ಲಿರುವ ಸಭೆಯ ದೂತನಿಗೆ ಇದನ್ನು ಬರೆ:
“ಆದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ತು ಜೀವಂತವಾಗಿ ಎದ್ದುಬಂದಾತನು ಆತನೇ.
9 “ನಿನ್ನ ಸಂಕಟಗಳನ್ನು ನಾನು ಬಲ್ಲೆನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲವು ಜನರು ಹೇಳುವ ಕೆಟ್ಟ ಸಂಗತಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯೆಹೂದ್ಯರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೆಹೂದ್ಯರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ. 10 ನಿನಗೆ ಸಂಭವಿಸುವ ಸಂಗತಿಗಳ ವಿಷಯದಲ್ಲಿ ಭಯಪಡಬೇಡ. ನಾನು ನಿನಗೆ ಹೇಳುವುದೇನೆಂದರೆ, ಸೈತಾನನು ನಿಮ್ಮಲ್ಲಿ ಕೆಲವರನ್ನು ಪರೀಕ್ಷಿಸುವುದಕ್ಕಾಗಿ ಸೆರೆಮನೆಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಟವನ್ನು ಅನುಭವಿಸುವಿರಿ. ನೀನು ಸಾಯಬೇಕಾದರೂ ನಂಬಿಗಸ್ತನಾಗಿದ್ದರೆ, ನಾನು ನಿನಗೆ ಜೀವವೆಂಬ ಕಿರೀಟವನ್ನು ದಯಪಾಲಿಸುವೆನು.
11 “ಪವಿತ್ರಾತ್ಮನು ಸಭೆಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೊಂದುವವನಿಗೆ ಎರಡನೆಯ ಮರಣದಿಂದ ಕೇಡಾಗುವುದೇ ಇಲ್ಲ.
Kannada Holy Bible: Easy-to-Read Version. All rights reserved. © 1997 Bible League International