Revised Common Lectionary (Semicontinuous)
91 ಮಹೋನ್ನತನ ಮೊರೆಹೊಕ್ಕಿರುವವನು
ಸರ್ವಶಕ್ತನ ಆಶ್ರಯದಲ್ಲಿ ಸುರಕ್ಷಿತನಾಗಿರುವನು.
2 ನಾನು ಯೆಹೋವನಿಗೆ, “ನೀನೇ ನನ್ನ ಆಶ್ರಯಸ್ಥಾನವೂ
ನನ್ನ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ” ಎಂದು ಹೇಳುವೆನು.
3 ನಿನ್ನನ್ನು ಬೇಟೆಗಾರನ ಬಲೆಯಿಂದಲೂ
ಮರಣಕರವಾದ ವ್ಯಾಧಿಯಿಂದಲೂ ತಪ್ಪಿಸುವವನು ಆತನೇ.
4 ಆತನು ನಿನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸಿಕೊಳ್ಳುವನು.
ಆತನ ರೆಕ್ಕೆಗಳನ್ನು ನೀನು ಆಶ್ರಯಿಸಿಕೊಳ್ಳುವೆ.
ಆತನ ನಂಬಿಗಸ್ತಿಕೆಯು ನಿನಗೆ ಗುರಾಣಿಯೂ ಕೋಟೆಯೂ ಆಗಿದೆ.
5 ಇರುಳಲ್ಲಿ ನೀನು ಯಾವುದಕ್ಕೂ ಭಯಪಡಬೇಕಿಲ್ಲ;
ಹಗಲಲ್ಲಿ ಶತ್ರುಗಳ ಬಾಣಗಳಿಗೂ ನೀನು ಹೆದರಬೇಕಿಲ್ಲ.
6 ಕತ್ತಲೆಯಲ್ಲಿ ಬರುವ ರೋಗಗಳಿಗಾಗಲಿ
ಮಧ್ಯಾಹ್ನದಲ್ಲಿ ಬರುವ ಭಯಂಕರ ಕಾಯಿಲೆಗಳಿಗಾಗಲಿ ನೀನು ಹೆದರಬೇಕಿಲ್ಲ.
14 ಯೆಹೋವನು ಹೇಳುವುದೇನೆಂದರೆ: “ನನ್ನಲ್ಲಿ ಭರವಸವಿಡುವವನನ್ನು ರಕ್ಷಿಸುವೆನು;
ನನ್ನ ಹೆಸರನ್ನು ಆರಾಧಿಸುವ ಭಕ್ತರನ್ನು ಸಂರಕ್ಷಿಸುವೆನು.
15 ನನ್ನ ಭಕ್ತರು ಸಹಾಯಕ್ಕಾಗಿ ಮೊರೆಯಿಡುವಾಗ, ಸದುತ್ತರವನ್ನು ದಯಪಾಲಿಸುವೆನು.
ಆಪತ್ತಿನಲ್ಲಿಯೂ ನಾನು ಅವರೊಂದಿಗಿರುವೆನು;
ಅವರನ್ನು ತಪ್ಪಿಸಿ ಘನಪಡಿಸುವೆನು.
16 ನನ್ನ ಭಕ್ತರಿಗೆ ದೀರ್ಘಾಯುಷ್ಯವನ್ನು ನೀಡಿ ತೃಪ್ತಿಪಡಿಸುವೆನು;
ನನ್ನ ವಿಶೇಷವಾದ ರಕ್ಷಣೆಯನ್ನು ತೋರಿಸಿ ಕಾಪಾಡುವೆನು.”
ಒಳ್ಳೆಯ ಮತ್ತು ಕೆಟ್ಟ ಅಂಜೂರದ ಹಣ್ಣುಗಳು
24 ಯೆಹೋವನು ನನಗೆ ಈ ವಸ್ತುಗಳನ್ನು ತೋರಿಸಿದನು: ಯೆಹೋವನು ಪವಿತ್ರಾಲಯದ ಎದುರುಗಡೆಯಲ್ಲಿ ಅಂಜೂರದ ಎರಡು ಬುಟ್ಟಿಗಳನ್ನು ಜೋಡಿಸಿಟ್ಟಿದ್ದು ನನಗೆ ಕಂಡುಬಂತು. (ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನು ಯೆಕೊನ್ಯನನ್ನು ಸೆರೆಹಿಡಿದ ಮೇಲೆ ನಾನು ಈ ದರ್ಶನವನ್ನು ಕಂಡೆ. ಯೆಕೊನ್ಯನು ರಾಜನಾದ ಯೆಹೋಯಾಕೀಮನ ಮಗ. ಯೆಕೊನ್ಯನನ್ನು ಮತ್ತು ಅವನ ಪ್ರಮುಖ ಅಧಿಕಾರಿಗಳನ್ನು ಜೆರುಸಲೇಮಿನಿಂದ ಬಾಬಿಲೋನಿಗೆ ತೆಗೆದುಕೊಂಡು ಹೋಗಲಾಯಿತು. ನೆಬೂಕದ್ನೆಚ್ಚರನು ಯೆಹೂದದ ಎಲ್ಲಾ ಬಡಗಿಗಳನ್ನು ಮತ್ತು ಕಮ್ಮಾರರನ್ನು ತೆಗೆದುಕೊಂಡು ಹೋಗಿದ್ದನು.) 2 ಒಂದು ಬುಟ್ಟಿಯಲ್ಲಿ ಬಹಳ ಉತ್ತಮವಾದ ಅಂಜೂರಗಳಿದ್ದವು. ಆ ಅಂಜೂರಗಳು ಸುಗ್ಗಿಯಲ್ಲಿ ಬೇಗ ಮಾಗುವ ಹಣ್ಣುಗಳಂತಿದ್ದವು. ಆದರೆ ಇನ್ನೊಂದು ಬುಟ್ಟಿಯಲ್ಲಿ ತಿನ್ನಲಾಗದಷ್ಟು ಕೊಳೆತ ಅಂಜೂರಗಳಿದ್ದವು.
3 ಯೆಹೋವನು ನನಗೆ “ಯೆರೆಮೀಯನೇ, ನಿನಗೇನು ಕಾಣುತ್ತಿದೆ?” ಎಂದು ಕೇಳಿದನು.
“ನನಗೆ ಅಂಜೂರಗಳು ಕಾಣುತ್ತಿವೆ. ಒಳ್ಳೆಯ ಅಂಜೂರಗಳು ಬಹಳ ಚೆನ್ನಾಗಿವೆ. ಕೊಳೆತ ಅಂಜೂರಗಳು ತಿನ್ನಲಾಗದಷ್ಟು ಕೊಳೆತಿವೆ” ಎಂದು ನಾನು ಉತ್ತರಿಸಿದೆ.
4 ಆಗ ನನಗೆ ಯೆಹೋವನಿಂದ ಸಂದೇಶ ಬಂದಿತು. 5 ಇಸ್ರೇಲಿನ ದೇವರಾದ ಯೆಹೋವನು ಹೇಳಿದನು: “ಯೆಹೂದದ ಜನರನ್ನು ಅವರ ದೇಶದಿಂದ ತೆಗೆದುಕೊಂಡು ಹೋಗಲಾಯಿತು. ಅವರ ಶತ್ರು ಅವರನ್ನು ಬಾಬಿಲೋನಿಗೆ ತಂದನು. ಆ ಜನರು ಈ ಒಳ್ಳೆಯ ಅಂಜೂರದಂತಿರುವರು. ಆ ಜನರಿಗೆ ನಾನು ದಯೆತೋರುವೆನು. 6 ನಾನು ಅವರನ್ನು ರಕ್ಷಿಸುವೆನು. ನಾನು ಅವರನ್ನು ಪುನಃ ಯೆಹೂದಕ್ಕೆ ಕರೆತರುವೆನು. ನಾನು ಅವರನ್ನು ಬೀಳಿಸುವದಿಲ್ಲ. ನಾನು ಅವರನ್ನು ಅಭಿವೃದ್ಧಿಪಡಿಸುತ್ತೇನೆ. ನಾನು ಅವರನ್ನು ಕೀಳುವದಿಲ್ಲ. ಅವರನ್ನು ನೆಟ್ಟು ಬೆಳೆಯುವದಕ್ಕೆ ಅವಕಾಶ ಮಾಡಿಕೊಡುವೆನು. 7 ಅವರಲ್ಲಿ ನನ್ನನ್ನು ಅರಿತುಕೊಳ್ಳುವ ಬಯಕೆ ಉಂಟಾಗುವಂತೆ ಮಾಡುತ್ತೇನೆ. ನಾನೇ ಯೆಹೋವನು ಎಂಬುದನ್ನು ಅವರು ತಿಳಿದುಕೊಳ್ಳುವರು. ಅವರು ನನ್ನ ಜನರಾಗುವರು ಮತ್ತು ನಾನು ಅವರ ದೇವರಾಗುವೆನು. ನಾನು ಹೀಗೇಕೆ ಮಾಡುತ್ತೇನೆಂದರೆ ಬಾಬಿಲೋನಿನಲ್ಲಿ ಸೆರೆಯಾಳುಗಳಾಗಿದ್ದ ಜನರು ಮನಃಪೂರ್ವಕವಾಗಿ ನನ್ನ ಕಡೆಗೆ ತಿರುಗುತ್ತಾರೆ.
8 “ಆದರೆ ಯೆಹೂದದ ರಾಜನಾದ ಚಿದ್ಕೀಯನು ತಿನ್ನಲು ಬಾರದಷ್ಟು ಕೊಳೆತ ಅಂಜೂರದಂತಾಗುವನು. ಚಿದ್ಕೀಯನೂ ಅವನ ಹಿರಿಯ ಅಧಿಕಾರಿಗಳೂ ಜೆರುಸಲೇಮಿನಲ್ಲಿ ಅಳಿದುಳಿದ ಜನರೂ ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದದ ಜನರೂ ಕೊಳೆತ ಅಂಜೂರದಂತಾಗುವರು. 9 ನಾನು ಆ ಜನರನ್ನು ದಂಡಿಸುವೆನು. ಆ ಶಿಕ್ಷೆಯು ಭೂಲೋಕದ ಎಲ್ಲಾ ಜನರಲ್ಲಿ ಭೀತಿಯನ್ನು ಉಂಟು ಮಾಡುವುದು. ಜನರು ಯೆಹೂದದ ಜನರನ್ನು ಗೇಲಿಮಾಡುವರು. ನಾನು ಅವರನ್ನು ತಳ್ಳಿದ ಎಲ್ಲಾ ದೇಶಗಳಲ್ಲಿ ಜನರು ಅವರ ಬಗ್ಗೆ ಪರಿಹಾಸ್ಯದ ಮಾತುಗಳನ್ನು ಆಡುವರು; ಅವರನ್ನು ಶಪಿಸುವರು. 10 ನಾನು ಖಡ್ಗ, ಕ್ಷಾಮ, ವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು. ಅವರೆಲ್ಲರೂ ಸತ್ತುಹೋಗುವವರೆಗೆ ನಾನು ಅವರ ಮೇಲೆ ಧಾಳಿಮಾಡುವೆನು. ನಾನು ಅವರಿಗೆ ಮತ್ತು ಅವರ ಪೂರ್ವಿಕರಿಗೆ ಕೊಟ್ಟ ಭೂಮಿಯ ಮೇಲೆ ಅವರು ವಾಸಿಸಲಾಗುವದಿಲ್ಲ.”
43 ಜನರೆಲ್ಲರೂ ದೇವರ ಮಹಾಶಕ್ತಿಯನ್ನು ಕಂಡು ಬೆರಗಾದರು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟಣೆ
(ಮತ್ತಾಯ 17:22-23; ಮಾರ್ಕ 9:30-32)
ಯೇಸು ಮಾಡಿದ ಎಲ್ಲಾ ಕಾರ್ಯಗಳ ಬಗ್ಗೆ ಜನರು ಇನ್ನೂ ಆಶ್ಚರ್ಯಚಕಿತರಾಗಿದ್ದರು. ಯೇಸು ತನ್ನ ಶಿಷ್ಯರಿಗೆ, 44 “ಮನುಷ್ಯಕುಮಾರನನ್ನು ಕೆಲವರ ವಶಕ್ಕೆ ಒಪ್ಪಿಸಲಾಗುವುದು. ನೀವು ಇದನ್ನು ಮರೆಯಕೂಡದು” ಎಂದು ಹೇಳಿದನು. 45 ಆದರೆ ಯೇಸುವಿನ ಈ ಮಾತುಗಳು ಶಿಷ್ಯರಿಗೆ ಅರ್ಥವಾಗಲಿಲ್ಲ. ಏಕೆಂದರೆ ಅವುಗಳ ಅರ್ಥವು ಅವರಿಗೆ ಮರೆಯಾಗಿತ್ತು. ಆದರೂ ಯೇಸು ಹೇಳಿದ್ದರ ಬಗ್ಗೆ ಆತನನ್ನು ಕೇಳುವದಕ್ಕೆ ಶಿಷ್ಯರು ಭಯಪಟ್ಟರು.
ಅತ್ಯಂತ ದೊಡ್ಡ ವ್ಯಕ್ತಿ
(ಮತ್ತಾಯ 18:1-5; ಮಾರ್ಕ 9:33-37)
46 ತಮ್ಮಲ್ಲಿ ಯಾವನು ಅತ್ಯಂತ ಪ್ರಮುಖನು ಎಂಬುದರ ಬಗ್ಗೆ ಯೇಸುವಿನ ಶಿಷ್ಯರು ವಾದಮಾಡತೊಡಗಿದರು. 47 ಅವರ ಆಲೋಚನೆಯು ಯೇಸುವಿಗೆ ತಿಳಿದಿತ್ತು. ಆದ್ದರಿಂದ ಯೇಸು ಒಂದು ಚಿಕ್ಕ ಮಗುವನ್ನು ಕರೆದು ತನ್ನ ಬಳಿಯಲ್ಲಿ ನಿಲ್ಲಿಸಿದನು. 48 ಬಳಿಕ ಯೇಸು ತನ್ನ ಶಿಷ್ಯರಿಗೆ, “ಒಬ್ಬನು ನನ್ನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನೇ ಸ್ವೀಕರಿಸಿಕೊಂಡಂತಾಯಿತು. ಒಬ್ಬನು ನನ್ನನ್ನು ಸ್ವೀಕರಿಸಿಕೊಂಡರೆ ಅವನು ನನ್ನನ್ನು ಕಳುಹಿಸಿದಾತನನ್ನೇ (ದೇವರನ್ನು) ಸ್ವೀಕರಿಸಿಕೊಂಡಂತಾಯಿತು. ನಿಮ್ಮಲ್ಲಿ ಯಾವನು ದೀನನಾಗಿದ್ದಾನೋ ಅವನೇ ನಿಮ್ಮಲ್ಲಿ ಪ್ರಮುಖನಾಗಿದ್ದಾನೆ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International