Revised Common Lectionary (Semicontinuous)
40 ಆತನು ತನ್ನ ಜನರ ಮೇಲೆ ಕೋಪಗೊಂಡನು;
ಅವರ ವಿಷಯದಲ್ಲಿ ಬೇಸರಗೊಂಡನು!
41 ಆತನು ತನ್ನ ಜನರನ್ನು ಅನ್ಯಜನಾಂಗಗಳಿಗೆ ಒಪ್ಪಿಸಿದನು;
ಅವರ ಮೇಲೆ ದೊರೆತನ ಮಾಡುವಂತೆ ವೈರಿಗಳಿಗೆ ಅವರನ್ನು ಬಿಟ್ಟುಕೊಟ್ಟನು.
42 ಶತ್ರುಗಳು ಅವರನ್ನು ತಮ್ಮ ಅಧೀನದಲ್ಲಿಟ್ಟುಕೊಂಡು
ಅವರ ಜೀವಿತವನ್ನು ಸಂಕಷ್ಟಕ್ಕೆ ಗುರಿಮಾಡಿದರು.
43 ಆತನು ತನ್ನ ಜನರನ್ನು ಅನೇಕ ಸಲ ರಕ್ಷಿಸಿದರೂ
ಅವರು ಆತನಿಗೆ ವಿರೋಧವಾಗಿ ತಿರುಗಿ ತಮ್ಮ ಇಷ್ಟಾನುಸಾರವಾಗಿ ಮಾಡಿದರು.
ಅವರು ಅನೇಕಾನೇಕ ಕೆಟ್ಟಕಾರ್ಯಗಳನ್ನು ಮಾಡಿದರು.
44 ಆದರೆ ಅವರು ಆಪತ್ತಿನಲ್ಲಿದ್ದಾಗಲೆಲ್ಲಾ ದೇವರಿಗೆ ಮೊರೆಯಿಟ್ಟರು;
ಆತನು ಅವರ ಪ್ರಾರ್ಥನೆಗಳಿಗೆ ಸದುತ್ತರವನ್ನು ದಯಪಾಲಿಸಿದನು.
45 ಆತನು ತನ್ನ ಒಡಂಬಡಿಕೆಯನ್ನು ಯಾವಾಗಲೂ ಜ್ಞಾಪಿಸಿಕೊಂಡನು.
ತನ್ನ ಮಹಾಪ್ರೀತಿಯಿಂದ ಅವರನ್ನು ಸಂತೈಸಿದನು.
46 ಅನ್ಯ ಜನಾಂಗಗಳು ಆತನ ಜನರನ್ನು ಸೆರೆಯಾಳುಗಳನ್ನಾಗಿ ಎಳೆದೊಯ್ದರು.
ಅನ್ಯಜನಾಂಗಗಳು ತನ್ನ ಜನರಿಗೆ ದಯೆತೋರುವಂತೆ ಆತನು ಮಾಡಿದನು.
47 ನಮ್ಮ ದೇವರಾದ ಯೆಹೋವನು ನಮ್ಮನ್ನು ರಕ್ಷಿಸಿದನು!
ಅನ್ಯಜನಾಂಗಗಳಿಂದ ನಮ್ಮನ್ನು ಬಿಡಿಸಿಕೊಂಡು ಬಂದನು.
ಆಗ ನಾವು ಆತನ ಪವಿತ್ರ ಹೆಸರನ್ನು ಕೊಂಡಾಡುವುದಕ್ಕೂ
ಆತನನ್ನು ಸಂಕೀರ್ತಿಸುವುದಕ್ಕೂ ಸಾಧ್ಯವಾಯಿತು.
48 ಇಸ್ರೇಲಿನ ದೇವರಾದ ಯೆಹೋವನನ್ನು ಕೊಂಡಾಡಿರಿ.
ಆತನು ಯಾವಾಗಲೂ ಇದ್ದವನೂ ಎಂದೆಂದಿಗೂ ಇರುವಾತನೂ ಆಗಿದ್ದಾನೆ.
“ಆಮೆನ್! ಯೆಹೋವನಿಗೆ ಸ್ತೋತ್ರವಾಗಲಿ!”
ಎಂದು ಜನರೆಲ್ಲರೂ ಹೇಳಲಿ.
12 ಈ ಭೂಮಿಯನ್ನು ಏಕೆ ಹಾಳು ಮಾಡಲಾಯಿತು?
ಇದನ್ನು ಯಾರೂ ಹೋಗದ ಬರಿದಾದ ಮರಳುಗಾಡನ್ನಾಗಿ ಏಕೆ ಮಾಡಲಾಯಿತು?
ಇದನ್ನರಿತ ಜ್ಞಾನಿಯೊಬ್ಬನಿದ್ದಾನೆಯೇ?
ಯೆಹೋವನಿಂದ ತಿಳಿದುಕೊಂಡ ಜ್ಞಾನಿಯೊಬ್ಬನಿದ್ದಾನೆಯೇ?
ಯೆಹೋವನ ಸಂದೇಶವನ್ನು ವಿವರಿಸಬಲ್ಲವನೊಬ್ಬನಿದ್ದಾನೆಯೇ?
13 ಯೆಹೋವನು ಈ ಪ್ರಶ್ನೆಗಳಿಗೆ ಉತ್ತರಕೊಟ್ಟನು:
“ಏಕೆಂದರೆ ಯೆಹೂದದ ಜನರು ನನ್ನ ಉಪದೇಶವನ್ನು ಅನುಸರಿಸಲಿಲ್ಲ.
ನಾನು ಅವರಿಗೆ ಧರ್ಮೋಪದೇಶವನ್ನು ಕೊಟ್ಟರೂ
ಅವರು ನನ್ನ ಮಾತನ್ನು ಕೇಳಲು ಒಪ್ಪಲಿಲ್ಲ.
ಅವರು ನನ್ನ ಧರ್ಮೋಪದೇಶಗಳನ್ನು ಅನುಸರಿಸಲಿಲ್ಲ.
14 ಯೆಹೂದದ ಜನರು ತಮ್ಮದೇ ಆದ ರೀತಿಯಲ್ಲಿ ಜೀವಿಸಿದರು.
ಅವರು ಹಟಮಾರಿಗಳಾಗಿದ್ದರು.
ಅವರು ಸುಳ್ಳುದೇವರಾದ ಬಾಳನನ್ನು ಅನುಸರಿಸಿದರು.
ಅವರ ಪೂರ್ವಿಕರು ಸುಳ್ಳುದೇವರುಗಳ ಸೇವೆ ಮಾಡುವದನ್ನು ಅವರಿಗೆ ಕಲಿಸಿದರು.”
15 ಇಸ್ರೇಲಿನ ದೇವರಾದ ಸರ್ವಶಕ್ತನಾದ ಯೆಹೋವನ ಸಂದೇಶವಿದು:
“ಯೆಹೂದದ ಜನರು ಕಹಿಯಾದ ಆಹಾರವನ್ನು ತಿನ್ನುವಂತೆ ನಾನು ಬೇಗನೆ ಮಾಡುವೆನು;
ಅವರು ವಿಷಮಿಶ್ರಿತ ನೀರನ್ನು ಕುಡಿಯುವಂತೆ ಮಾಡುವೆನು.
16 ನಾನು ಯೆಹೂದದ ಜನರನ್ನು ಬೇರೆ ಜನಾಂಗಗಳಲ್ಲಿ ಚದರಿಸಿಬಿಡುತ್ತೇನೆ.
ಅವರು ಮತ್ತು ಅವರ ತಂದೆಗಳು ಎಂದೂ ಅರಿಯದ
ಅಪರಿಚಿತ ದೇಶಗಳಲ್ಲಿ ಅವರು ವಾಸಿಸುವರು.
ನಾನು ಖಡ್ಗಧಾರಿಗಳಾದ ಜನರನ್ನು ಕಳುಹಿಸುತ್ತೇನೆ.
ಅವರು ಯೆಹೂದದ ಜನರನ್ನು ನಿರ್ಮೂಲವಾಗುವವರೆಗೆ ಕೊಲ್ಲುವರು.”
17 ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ:
“ಈಗ ಈ ವಿಷಯಗಳ ಬಗ್ಗೆ ವಿಚಾರ ಮಾಡಿರಿ,
ಶವಸಂಸ್ಕಾರದ ಸಮಯದಲ್ಲಿ ಕೂಲಿ ಪಡೆದು ಅಳುವ ಹೆಂಗಸರನ್ನು ಕರೆಯಿಸಿರಿ.
18 ‘ಆ ಹೆಂಗಸರು, ಬೇಗನೆ ಬಂದು ನಮಗಾಗಿ ಗೋಳಾಡಲಿ.
ಆಗ ನಮ್ಮ ಕಣ್ಣುಗಳು ಕಣ್ಣೀರಿನಿಂದ ತುಂಬುವವು;
ನಮ್ಮ ಕಣ್ಣುಗಳಿಂದ ನೀರಿನ ಪ್ರವಾಹಗಳು ಹರಿಯುವವು’ ಎನ್ನುವರು.
19 “ಚೀಯೋನಿನಿಂದ ಮಹಾಗೋಳಾಟವು ಕೇಳಿಸುತ್ತಿದೆ:
‘ನಿಜವಾಗಿಯೂ ನಾವು ಹಾಳಾಗಿಹೋದೆವು.
ನಿಜವಾಗಿಯೂ ನಾವು ನಾಚಿಕೆಪಡುವಂತಾಗಿದೆ.
ನಾವು ನಮ್ಮ ನಾಡನ್ನು ಬಿಡಬೇಕು,
ಏಕೆಂದರೆ ನಮ್ಮ ಮನೆಗಳನ್ನು ನಾಶಪಡಿಸಲಾಗಿದೆ.’”
20 ಯೆಹೂದದ ಸ್ತ್ರೀಯರೇ, ಯೆಹೋವನ ಸಂದೇಶವನ್ನು ಕೇಳಿರಿ.
ಯೆಹೋವನ ಬಾಯಿಂದ ಬರುವ ಮಾತುಗಳನ್ನು ಕೇಳಲು ನಿಮ್ಮ ಕಿವಿಗಳನ್ನು ತೆರೆಯಿರಿ.
ಯೆಹೋವನು ಹೇಳುತ್ತಾನೆ, “ಹೇಗೆ ದೊಡ್ಡ ಧ್ವನಿಯಲ್ಲಿ ಅಳಬೇಕೆಂಬುದನ್ನು ನಿಮ್ಮ ಹೆಣ್ಣುಮಕ್ಕಳಿಗೆ ಕಲಿಸಿಕೊಡಿ.
ಪ್ರತಿಯೊಬ್ಬ ಸ್ತ್ರೀಯು ಈ ಶೋಕಗೀತೆಯನ್ನು ಹಾಡಲು ಕಲಿಯಬೇಕು.
21 ಮೃತ್ಯುವು ಬಂದು ನಮ್ಮ ಕಿಟಕಿಗಳಿಂದ ಇಳಿದಿದೆ.
ಮೃತ್ಯುವು ನಮ್ಮ ಅರಮನೆಗಳಲ್ಲಿ ಪ್ರವೇಶ ಮಾಡಿದೆ.
ಬೀದಿಯಲ್ಲಿ ಆಡುವ ನಮ್ಮ ಮಕ್ಕಳಿಗೆ ಮೃತ್ಯುವು ಹಿಡಿದುಕೊಂಡಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸೇರುವ ನಮ್ಮ ಯುವಕರಿಗೆ ಮೃತ್ಯುವು ಹಿಡಿದುಕೊಂಡಿದೆ.”
22 ಯೆರೆಮೀಯನೇ, ಯೆಹೋವನು ಹೀಗೆ ಹೇಳುತ್ತಾನೆಂದು ಹೇಳು:
“‘ಹೊಲಗಳಲ್ಲಿ ಗೊಬ್ಬರ ಬಿದ್ದಂತೆ ಹೆಣಗಳು ಬೀಳುವವು.
ಆ ಶವಗಳು ಹೊಲ ಕೊಯ್ಯುವವನ ಹಿಂದೆ
ಯಾರೂ ಎತ್ತದೆ ಬಿದ್ದಿರುವ ಮೆದೆಗಳಂತೆ ಬಿದ್ದಿರುವವು.’”
23 ಯೆಹೋವನು ಹೇಳುತ್ತಾನೆ,
“ಜ್ಞಾನಿಗಳು ತಮ್ಮ ಜ್ಞಾನದ ಬಗ್ಗೆ
ಜಂಬಕೊಚ್ಚಿಕೊಳ್ಳಬಾರದು.
ಬಲಶಾಲಿಗಳು ತಮ್ಮ ಬಲದ ಬಗ್ಗೆ
ಬಡಾಯಿಕೊಚ್ಚಿಕೊಳ್ಳಬಾರದು.
ಶ್ರೀಮಂತರು ತಮ್ಮ ಸಂಪತ್ತಿನ ಬಗ್ಗೆ
ಜಂಬಕೊಚ್ಚಿಕೊಳ್ಳಬಾರದು.
24 ಯಾವನಾದರೂ ಜಂಬಕೊಚ್ಚಿಕೊಳ್ಳಬೇಕಾದರೆ, ಅವನು ನನ್ನನ್ನು ಅರಿತಿರುವುದಾಗಿಯೂ
ನನ್ನನ್ನು ತಿಳಿದುಕೊಂಡಿರುವುದಾಗಿಯೂ ಜಂಬಪಡಲಿ.
ನಾನೇ ಯೆಹೋವನೆಂದು ತಿಳಿದುಕೊಂಡಿರುವುದಕ್ಕಾಗಿ ಅವನು ಜಂಬಪಡಲಿ.
ನಾನು ದಯಾವಂತನೂ ನ್ಯಾಯವಂತನೂ ಆಗಿರುವೆ,
ನಾನು ಭೂಲೋಕದಲ್ಲಿ ಒಳ್ಳೆಯದನ್ನು ಮಾಡುತ್ತೇನೆ ಎಂದು ತಿಳಿದುಕೊಂಡಿರುವವನು ಹೆಮ್ಮೆಪಡಲಿ.
ಆಗ ನನಗೆ ಸಂತೋಷವಾಗುವುದು.”
ಇದು ಯೆಹೋವನ ನುಡಿ.
25 “ಕೇವಲ ದೈಹಿಕವಾಗಿ ಸುನ್ನತಿಯನ್ನು ಮಾಡಿಕೊಂಡ ಜನರನ್ನು ನಾನು ಶಿಕ್ಷಿಸುವ ಕಾಲ ಬರಲಿದೆ. 26 ನಾನು ಈಜಿಪ್ಟ್, ಯೆಹೂದ, ಎದೋಮ್, ಅಮ್ಮೋನ್, ಮೋವಾಬ್ ಜನಾಂಗಗಳ ಜನರ ಬಗ್ಗೆ ಮತ್ತು ಮರಳು ಪ್ರದೇಶದಲ್ಲಿ ವಾಸಮಾಡುತ್ತಿರುವ ಎಲ್ಲಾ ಜನಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಎಲ್ಲಾ ದೇಶಗಳ ಜನರಿಗೆ ದೈಹಿಕವಾಗಿ ಸುನ್ನತಿ ಆಗಿದ್ದಿಲ್ಲ. ಆದರೆ ಇಸ್ರೇಲ್ ವಂಶದವರು ಹೃದಯ ಸುನ್ನತಿಯಿಲ್ಲದವರು” ಎಂದು ಯೆಹೋವನು ಅನ್ನುತ್ತಾನೆ.
ನ್ಯಾಯಸಭೆಯ ಮುಂದೆ ಪೇತ್ರ ಮತ್ತು ಯೋಹಾನ
4 ಪೇತ್ರ ಮತ್ತು ಯೋಹಾನ ಜನರೊಂದಿಗೆ ಮಾತಾಡುತ್ತಿದ್ದಾಗ, ಕೆಲವು ಜನರು ಅವರ ಬಳಿಗೆ ಬಂದರು. ಅಲ್ಲಿ ಕೆಲವು ಯೆಹೂದ್ಯ ಯಾಜಕರಿದ್ದರು. ಕೆಲವು ಸದ್ದುಕಾಯರಿದ್ದರು ಮತ್ತು ದೇವಾಲಯ ಕಾಯುವ ಸಿಪಾಯಿಗಳ ಅಧಿಪತಿಯೂ ಇದ್ದನು. 2 ಈ ಇಬ್ಬರು ಅಪೊಸ್ತಲರು ಜನರಿಗೆ ಉಪದೇಶ ಮಾಡುತ್ತಿರುವುದನ್ನು ಕಂಡು ಅವರು ಸಿಟ್ಟುಗೊಂಡರು. ಯೇಸುವಿನ ಶಕ್ತಿಯ ಮೂಲಕವಾಗಿ ಜನರು ಪುನರುತ್ಥಾನ ಹೊಂದುತ್ತಾರೆ ಎಂದು ಪೇತ್ರ ಮತ್ತು ಯೋಹಾನ ಬೋಧಿಸುತ್ತಿದ್ದರು. 3 ಯೆಹೂದ್ಯ ನಾಯಕರು ಪೇತ್ರ ಮತ್ತು ಯೋಹಾನರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆಗಲೇ ಕತ್ತಲಾಗಿತ್ತು. ಆದ್ದರಿಂದ ಅವರು ಪೇತ್ರ ಮತ್ತು ಯೋಹಾನರನ್ನು ಮರುದಿನದವರೆಗೆ ಸೆರೆಯಲ್ಲಿಟ್ಟರು. 4 ಆದರೆ ಪೇತ್ರ ಮತ್ತು ಯೋಹಾನರ ಬೋಧನೆಯನ್ನು ಕೇಳಿ ಅನೇಕರು ನಂಬಿಕೊಂಡರು. ಆಗ ಆ ಸಮುದಾಯದಲ್ಲಿ ವಿಶ್ವಾಸಿಗಳ ಸಂಖ್ಯೆ ಐದು ಸಾವಿರಕ್ಕೆ ಏರಿತ್ತು.
5 ಮರುದಿನ ಯೆಹೂದ್ಯನಾಯಕರು, ಯೆಹೂದ್ಯರ ಹಿರಿಯನಾಯಕರು ಮತ್ತು ಧರ್ಮೋಪದೇಶಕರು ಜೆರುಸಲೇಮಿನಲ್ಲಿ ಸಭೆಸೇರಿದರು. 6 ಅಲ್ಲಿ ಅನ್ನನು (ಪ್ರಧಾನ ಯಾಜಕ), ಕಾಯಫ, ಯೋಹಾನ ಮತ್ತು ಅಲೆಕ್ಸಾಂಡರ್ ಇದ್ದರು. ಪ್ರಧಾನಯಾಜಕನ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬರು ಅಲ್ಲಿದ್ದರು. 7 ಅವರು ಪೇತ್ರ ಯೋಹಾನರನ್ನು ಅಲ್ಲಿದ್ದ ಎಲ್ಲಾ ಜನರ ಮುಂದೆ ನಿಲ್ಲಿಸಿದರು. ಯೆಹೂದ್ಯನಾಯಕರು ಅವರನ್ನು “ನೀವು ಈ ಕುಂಟನನ್ನು ಹೇಗೆ ಗುಣಪಡಿಸಿದಿರಿ? ನೀವು ಯಾವ ಶಕ್ತಿಯನ್ನು ಉಪಯೋಗಿಸಿದಿರಿ? ಇದನ್ನು ಯಾರ ಅಧಿಕಾರದಿಂದ ಮಾಡಿದಿರಿ?” ಎಂದು ಅನೇಕ ಸಲ ಕೇಳಿದರು.
8 ಆಗ ಪೇತ್ರನು ಪವಿತ್ರಾತ್ಮಭರಿತನಾದನು. ಅವನು ಅವರಿಗೆ, “ಜನನಾಯಕರೇ ಮತ್ತು ಹಿರಿಯನಾಯಕರೇ, 9 ಈ ಕುಂಟನಿಗಾದ ಒಳ್ಳೆಯದರ ಬಗ್ಗೆ ನೀವು ನಮ್ಮನ್ನು ಕೇಳುತ್ತಿದ್ದೀರಿ. 10 ನಜರೇತಿನ ಯೇಸು ಕ್ರಿಸ್ತನ ಹೆಸರಿನಿಂದ ಈ ಮನುಷ್ಯನಿಗೆ ಗುಣವಾಯಿತೆಂಬುದನ್ನು ನೀವು ಮತ್ತು ಯೆಹೂದ್ಯರೆಲ್ಲರು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ! ನೀವು ಯೇಸುವನ್ನು ಶಿಲುಬೆಗೇರಿಸಿದಿರಿ. ದೇವರು ಆತನನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದನು. ಈ ಮನುಷ್ಯನು ಕುಂಟನಾಗಿದ್ದನು, ಆದರೆ ಈಗ ಇವನು ಗುಣಹೊಂದಿದ್ದಾನೆ ಮತ್ತು ಯೇಸುವಿನ ಹೆಸರಿನಿಂದ ನಿಮ್ಮ ಮುಂದೆ ನಿಂತುಕೊಳ್ಳಲು ಶಕ್ತನಾಗಿದ್ದಾನೆ!
11 ‘ಕಟ್ಟುವವರಾದ ನೀವು ಬೇಡವೆಂದು ಬಿಟ್ಟ ಕಲ್ಲೇ (ಯೇಸು)
ಮುಖ್ಯವಾದ ಮೂಲೆಗಲ್ಲಾಯಿತು.’(A)
12 ರಕ್ಷಣೆಯು ಯೇಸುವಿನಿಂದಲ್ಲದೆ ಬೇರೆ ಯಾರಲ್ಲಿಯೂ ಸಿಕ್ಕುವುದಿಲ್ಲ. ಆತನ ಹೆಸರಿನಿಂದಲೇ ಹೊರತು ಆಕಾಶದ ಕೆಳಗೆ ಮನುಷ್ಯರೊಳಗೆ ಕೊಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವುದಿಲ್ಲ” ಎಂದು ಹೇಳಿದನು.
Kannada Holy Bible: Easy-to-Read Version. All rights reserved. © 1997 Bible League International