Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 79:1-9

ಸ್ತುತಿಗೀತೆ. ರಚನೆಗಾರ: ಆಸಾಫ.

79 ದೇವರೇ, ಅನ್ಯ ಜನಾಂಗಗಳು ನಿನ್ನ ಜನರಿಗೆ ಮುತ್ತಿಗೆ ಹಾಕಿದ್ದಾರೆ.
    ಅವರು ನಿನ್ನ ಪವಿತ್ರಾಲಯವನ್ನು ಹೊಲಸು ಮಾಡಿದರು;
    ಜೆರುಸಲೇಮನ್ನು ನಾಶ ಮಾಡಿದರು.
ಅವರು ನಿನ್ನ ಸೇವಕರ ಸತ್ತದೇಹಗಳನ್ನು ಕ್ರೂರ ಪಕ್ಷಿಗಳಿಗೆ ಆಹಾರ ಮಾಡಿದರು.
    ಅವರು ನಿನ್ನ ಭಕ್ತರ ದೇಹಗಳನ್ನು ಕ್ರೂರ ಪ್ರಾಣಿಗಳಿಗೆ ಹಾಕಿದರು.
ರಕ್ತವು ನೀರಿನಂತೆ ಹರಿಯುವ ತನಕ ಶತ್ರುಗಳು ನಿನ್ನ ಜನರನ್ನು ಕೊಂದುಹಾಕಿದರು.
    ಶವಗಳನ್ನು ಹೂಳಲು ಯಾರೂ ಉಳಿದಿಲ್ಲ.
ನಮ್ಮ ನೆರೆಹೊರೆಯ ದೇಶಗಳವರು ನಮಗೆ ಅವಮಾನ ಮಾಡಿದರು.
    ನಮ್ಮ ಸುತ್ತಮುತ್ತಲಿನ ಜನರೆಲ್ಲರೂ ನಮ್ಮನ್ನು ನೋಡಿ ನಗುತ್ತಾ ಗೇಲಿ ಮಾಡಿದರು.
ದೇವರೇ, ಇನ್ನೆಷ್ಟರವರೆಗೆ ನೀನು ನಮ್ಮ ಮೇಲೆ ಕೋಪದಿಂದಿರುವೆ?
    ನಿನ್ನ ಕೋಪಾಗ್ನಿಯು ಉರಿಯುತ್ತಲೇ ಇರಬೇಕೇ?
ನಿನ್ನನ್ನು ಅರಿಯದ ಜನಾಂಗಗಳ ಮೇಲೆಯೂ
    ನಿನ್ನ ಹೆಸರನ್ನು ಆರಾಧಿಸದ ಜನಾಂಗಗಳ ಮೇಲೆಯೂ ನಿನ್ನ ರೌದ್ರವನ್ನು ಸುರಿದುಬಿಡು.
ಯಾಕೆಂದರೆ ಆ ಜನಾಂಗಗಳು
    ಯಾಕೋಬ್ಯರನ್ನೂ ಅವರ ದೇಶವನ್ನೂ ನಾಶಮಾಡಿದರು.
ನಮ್ಮ ಪೂರ್ವಿಕರು ಮಾಡಿದ ಪಾಪಕ್ಕೆ ಬರಬೇಕಾದ ದಂಡನೆಯನ್ನು ನಮ್ಮ ಮೇಲೆ ಬರಗೊಡಿಸಬೇಡ.
    ಬೇಗನೆ ನಿನ್ನ ಕರುಣೆಯನ್ನು ನಮಗೆ ತೋರು!
    ನೀನು ನಮಗೆ ಎಷ್ಟೋ ಅಗತ್ಯವಾಗಿರುವೆ!
ನಮ್ಮ ರಕ್ಷಕನಾದ ದೇವರೇ, ನಮಗೆ ಸಹಾಯಮಾಡು!
    ನಿನ್ನ ಹೆಸರಿನ ಘನತೆಗಾಗಿ ನಮಗೆ ಸಹಾಯಮಾಡು!
ನಮ್ಮನ್ನು ರಕ್ಷಿಸಿ ನಿನ್ನ ಹೆಸರಿನ ಘನತೆಗೋಸ್ಕರ
    ನಮ್ಮ ಪಾಪಗಳನ್ನು ಅಳಿಸಿಬಿಡು.

ಯೆರೆಮೀಯ 8:1-13

ಯೆಹೋವನು ಹೀಗೆನ್ನುತ್ತಾನೆ: “ಆಗ ಜನರು ಯೆಹೂದದ ರಾಜರ ಮತ್ತು ಪ್ರಮುಖ ಅಧಿಪತಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಯಾಜಕರ ಮತ್ತು ಪ್ರವಾದಿಗಳ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಅವರು ಜೆರುಸಲೇಮಿನ ಎಲ್ಲಾ ಜನರ ಎಲುಬುಗಳನ್ನು ಅವರ ಗೋರಿಗಳಿಂದ ಹೊರತೆಗೆಯುವರು. ಜೆರುಸಲೇಮಿನ ಜನರು ಸೂರ್ಯನನ್ನು, ಚಂದ್ರನನ್ನು, ನಕ್ಷತ್ರಗಣಗಳನ್ನು ಪ್ರೀತಿಸಿ, ಅನುಸರಿಸಿ, ವಿಚಾರಿಸಿ, ಪೂಜಿಸಿದ್ದರಿಂದ ಅವರ ಎಲುಬುಗಳನ್ನು ಅವುಗಳ ಕೆಳಗೆ ಭೂಮಿಯ ಮೇಲೆ ಹರಡುವರು. ಯಾರೊಬ್ಬರೂ ಆ ಎಲುಬುಗಳನ್ನು ಪುನಃ ಒಂದೆಡೆ ಸೇರಿಸಿ ಹೂಳುವುದಿಲ್ಲ. ಆ ಎಲುಬುಗಳು ಭೂಮಿಯ ಮೇಲೆ ಎಸೆದ ಸಗಣಿಯಂತಾಗುವವು.

“ಯೆಹೂದದ ಜನರು ತಮ್ಮ ಮನೆಗಳನ್ನು ಮತ್ತು ಪ್ರದೇಶವನ್ನು ಬಿಡುವಂತೆ ಮಾಡುತ್ತೇನೆ. ಆ ಜನರನ್ನು ಪರದೇಶಕ್ಕೆ ಒಯ್ಯಲಾಗುವುದು. ಯುದ್ಧದಲ್ಲಿ ಮರಣ ಹೊಂದದೆ ಅಳಿದುಳಿದ ಕೆಲವು ಮಂದಿ ಯೆಹೂದಿಯರು ತಾವು ಸತ್ತುಹೋಗಿದ್ದರೆ ಚೆನ್ನಾಗಿತ್ತು ಎಂದುಕೊಳ್ಳುವರು.” ಇದು ಯೆಹೋವನ ನುಡಿ.

ಪಾಪ ಮತ್ತು ಶಿಕ್ಷೆ

“ಯೆರೆಮೀಯನೇ, ಯೆಹೂದದ ಜನರಿಗೆ ಹೀಗೆ ಹೇಳು: ‘ಯೆಹೋವನು ಈ ಮಾತನ್ನು ಹೇಳುತ್ತಾನೆ.

“‘ಒಬ್ಬ ಮನುಷ್ಯನು ಕೆಳಗೆ ಬಿದ್ದರೆ
    ಪುನಃ ಅವನು ಮೇಲಕ್ಕೆ ಏಳುತ್ತಾನೆ;
ಒಬ್ಬ ಮನುಷ್ಯನು ತಪ್ಪುದಾರಿ ಹಿಡಿದರೆ
    ಅವನು ಹಿಂತಿರುಗಿ ಬರುತ್ತಾನೆಂಬುದು ನಿಮಗೆ ಗೊತ್ತು.
ಯೆಹೂದದ ಜನರು ತಪ್ಪುದಾರಿಯನ್ನು ಹಿಡಿದಿದ್ದಾರೆ.
ಆದರೆ ಜೆರುಸಲೇಮಿನ ಜನರು ಆ ತಪ್ಪು ದಾರಿಯ ಮೇಲೆ ನಡೆಯುವದನ್ನು ಏಕೆ ಮುಂದುವರಿಸಿದ್ದಾರೆ?
ತಮ್ಮ ಸುಳ್ಳುಗಳನ್ನೇ ಅವರು ನಂಬಿದ್ದಾರೆ,
    ಅವರು ಹಿಂತಿರುಗಿ ಬರಲು ಸಿದ್ಧರಿಲ್ಲ.
ನಾನು ಎಚ್ಚರವಹಿಸಿ ಅವರು ಹೇಳುವದನ್ನು ಕೇಳಿದ್ದೇನೆ.
    ಆದರೆ ಅವರು ಸರಿಯಾದುದನ್ನು ಹೇಳುವದಿಲ್ಲ.
ತಾವು ಮಾಡಿದ ಪಾಪಕ್ಕಾಗಿ ಅವರು ಪಶ್ಚಾತ್ತಾಪಪಡುವದಿಲ್ಲ.
    ಅವರು ಮಾಡಿದ ದುಷ್ಕೃತ್ಯದ ಬಗ್ಗೆ ಅವರು ಯೋಚಿಸುವದಿಲ್ಲ.
ಜನರು ವಿಚಾರ ಮಾಡದೆ ಕೆಲಸಮಾಡುತ್ತಾರೆ.
    ಅವರು ಯುದ್ಧದಲ್ಲಿ ಓಡುವ ಕುದುರೆಯಂತಿದ್ದಾರೆ.
ಆಕಾಶದಲ್ಲಿ ಹಾರಾಡುವ ಬಕಪಕ್ಷಿಗಳಿಗೂ ಸಹ
    ಆಯಾ ಕೆಲಸ ಮಾಡುವ ಸರಿಯಾದ ಸಮಯ ಗೊತ್ತಿದೆ.
ಬೆಳವಕ್ಕಿಯೂ ಬಾನಕ್ಕಿಯೂ ಕೊಕ್ಕರೆಯೂ
    ಹೊಸ ಮನೆಗೆ ಹೋಗಬೇಕಾದ ಕಾಲವನ್ನು ಬಲ್ಲವು.
ಆದರೆ ನನ್ನ ಜನರಿಗೆ ತಮ್ಮ ಯೆಹೋವನು ಅವರಿಂದ ಏನನ್ನು ಬಯಸುತ್ತಾನೆ ಎಂಬುದು ಗೊತ್ತಿಲ್ಲ.

“‘“ಯೆಹೋವನ ಧರ್ಮಶಾಸ್ತ್ರವು ನಮ್ಮಲ್ಲಿ ಇದೆ.
    ಆದ್ದರಿಂದ ನಾವು ಜ್ಞಾನಿಗಳು” ಎಂದು ನೀವು ಹೇಳುವಿರಿ.
ಆದರೆ ಅದು ನಿಜವಲ್ಲ.
    ಏಕೆಂದರೆ ಲಿಪಿಗಾರರು ತಮ್ಮ ಲೇಖನಿಯಿಂದ ಸುಳ್ಳು ಬರೆದಿದ್ದಾರೆ.
ಆ “ಜ್ಞಾನಿಗಳು” ಯೆಹೋವನ ಉಪದೇಶವನ್ನು ಕೇಳಲು ಒಪ್ಪಲಿಲ್ಲ.
    ಆದ್ದರಿಂದ ಅವರು ನಿಜವಾದ ಜ್ಞಾನಿಗಳಲ್ಲವೇ ಅಲ್ಲ.
ಆ “ಜ್ಞಾನಿಗಳು” ಸಿಕ್ಕಿಹಾಕಿಕೊಂಡಿದ್ದಾರೆ.
    ಅವರು ಗಾಬರಿಪಟ್ಟಿದ್ದಾರೆ ಮತ್ತು ನಾಚಿಕೆಪಟ್ಟಿದ್ದಾರೆ.
    ಅವರ ಜ್ಞಾನವು ಅಪ್ರಯೋಜಕವಾಗಿದೆ.
10 ಆದ್ದರಿಂದ ನಾನು ಅವರ ಹೆಂಡಂದಿರನ್ನು ಬೇರೆಯವರಿಗೆ ಕೊಡುತ್ತೇನೆ.
    ನಾನು ಅವರ ಹೊಲಗಳನ್ನು ಬೇರೆಯವರಿಗೆ ಕೊಡುತ್ತೇನೆ.
ಇಸ್ರೇಲಿನ ಎಲ್ಲಾ ಜನರಿಗೆ ಹೆಚ್ಚಾಗಿ ಹಣಬೇಕು.
    ಸಾಮಾನ್ಯರನ್ನು ಮೊದಲುಗೊಂಡು ಅತ್ಯಂತ ಮುಖ್ಯರಾದವರೆಲ್ಲರೂ ಹೀಗೇ ಇದ್ದಾರೆ.
    ಪ್ರವಾದಿಗಳಿಂದ ಹಿಡಿದು ಯಾಜಕರವರೆಗೆ ಎಲ್ಲರೂ ಸುಳ್ಳು ಹೇಳುತ್ತಾರೆ.
11 ಪ್ರವಾದಿಗಳು ಮತ್ತು ಯಾಜಕರು ನಮ್ಮ ಜನರ ಆಳವಾದ ಗಾಯಗಳನ್ನು
    ಕೇವಲ ಅಲ್ಪಗಾಯಗಳಂತೆ ಪರಿಗಣಿಸಿ ಚಿಕಿತ್ಸೆ ಕೊಡುತ್ತಿದ್ದಾರೆ.
“ಎಲ್ಲಾ ಚೆನ್ನಾಗಿದೆ, ಎಲ್ಲಾ ಚೆನ್ನಾಗಿದೆ” ಎಂದು ಅವರು ಹೇಳುತ್ತಾರೆ.
    ಆದರೆ ಎಲ್ಲಾ ಚೆನ್ನಾಗಿಲ್ಲ.
12 ಅವರು ತಮ್ಮ ದುಷ್ಕೃತ್ಯಗಳಿಗಾಗಿ ನಾಚಿಕೆಪಡಬೇಕು.
    ಆದರೆ ಅವರು ಸ್ವಲ್ಪವೂ ನಾಚಿಕೆಪಡುವುದಿಲ್ಲ.
ಅವರಿಗೆ ನಾಚಿಕೆ ಎಂಬುದೇ ತಿಳಿದಿಲ್ಲ.
    ಆದ್ದರಿಂದ ಉಳಿದೆಲ್ಲರಂತೆ ಅವರಿಗೂ ಶಿಕ್ಷೆ ವಿಧಿಸಲಾಗುವುದು.
    ನಾನು ಅವರನ್ನು ಶಿಕ್ಷಿಸುವಾಗ ಅವರು ಮುಗ್ಗರಿಸಿ ಬೀಳುವರು.’”
ಯೆಹೋವನ ನುಡಿಗಳಿವು.

13 “ನಾನು ಅವರ ಹಣ್ಣುಗಳನ್ನೂ ಬೆಳೆಗಳನ್ನೂ ಕಿತ್ತುಕೊಂಡು
    ಅವರಿಗೆ ಸುಗ್ಗಿಯಾಗದಂತೆ ಮಾಡುತ್ತೇನೆ.” ಇದು ಯೆಹೋವನ ನುಡಿ.
ದ್ರಾಕ್ಷಿಬಳ್ಳಿಯಲ್ಲಿ ದ್ರಾಕ್ಷಿಗಳಿರುವದಿಲ್ಲ.
ಅಂಜೂರದ ಮರದಲ್ಲಿ ಒಂದಾದರೂ ಅಂಜೂರದ ಹಣ್ಣು ಇರುವದಿಲ್ಲ.
    ಎಲೆಗಳು ಸಹ ಒಣಗಿ ಉದುರುವವು.
ನಾನು ಅವರಿಗೆ ಕೊಟ್ಟ ವಸ್ತುಗಳನ್ನು ಕಿತ್ತುಕೊಳ್ಳುವೆನು.

ರೋಮ್ನಗರದವರಿಗೆ 8:31-39

ಕ್ರಿಸ್ತ ಯೇಸುವಿನಲ್ಲಿ ದೇವರ ಪ್ರೀತಿ

31 ಹೀಗಿರುವಲ್ಲಿ ಇದರ ಬಗ್ಗೆ ನಾವು ಏನು ಹೇಳೋಣ? ದೇವರು ನಮ್ಮೊಂದಿಗೆ ಇರುವಾಗ, ನಮ್ಮನ್ನು ಯಾರೂ ಸೋಲಿಸಲಾರರು. 32 ದೇವರು ತನ್ನ ಸ್ವಂತ ಮಗನನ್ನೇ ಉಳಿಸಿಕೊಳ್ಳದೆ ನಮ್ಮೆಲ್ಲರಿಗೊಸ್ಕರ ಕೊಟ್ಟನು. ಆದ್ದರಿಂದ ಈಗ, ದೇವರು ಯೇಸುವಿನೊಂದಿಗೆ ನಮಗೆ ಎಲ್ಲವನ್ನು ಖಂಡಿತವಾಗಿ ಕೊಡುತ್ತಾನೆ. 33 ದೇವರು ಆರಿಸಿಕೊಂಡಿರುವ ಜನರ ಮೇಲೆ ಯಾರು ದೋಷಾರೋಪಣೆ ಮಾಡಬಲ್ಲರು? ಯಾರೂ ಇಲ್ಲ! ಅವರನ್ನು ನೀತಿವಂತರನ್ನಾಗಿ ಮಾಡುವಾತನು ದೇವರೇ. 34 ದೇವಜನರು ದೋಷಿಗಳೆಂದು ಯಾರು ಹೇಳಬಲ್ಲರು? ಯಾರು ಇಲ್ಲ! ಕ್ರಿಸ್ತ ಯೇಸು ನಮಗೋಸ್ಕರ ಪ್ರಾಣಕೊಟ್ಟನು. ಅಷ್ಟೇ ಅಲ್ಲ, ಆತನು ಸತ್ತವರೊಳಗಿಂದ ಜೀವಂತನಾಗಿ ಎದ್ದುಬಂದನು. ಈಗ ಆತನು ದೇವರ ಬಲಗಡೆಯಲ್ಲಿದ್ದಾನೆ ಮತ್ತು ನಮಗೋಸ್ಕರ ದೇವರನ್ನು ಬೇಡಿಕೊಳ್ಳುತ್ತಿದ್ದಾನೆ. 35 ಕ್ರಿಸ್ತನ ಪ್ರೀತಿಯಿಂದ ಯಾವುದು ನಮ್ಮನ್ನು ಬೇರ್ಪಡಿಸಬಲ್ಲದು? ಕಷ್ಟಸಂಕಟಗಳಾಗಲಿ ಇಕ್ಕಟ್ಟುಗಳಾಗಲಿ ಹಿಂಸೆಯಾಗಲಿ ಆಹಾರವಿಲ್ಲದಿರುವುದಾಗಲಿ ಬಟ್ಟೆಯಿಲ್ಲದಿರುವುದಾಗಲಿ ಅಪಾಯವಾಗಲಿ ಮರಣವಾಗಲಿ ನಮ್ಮನ್ನು ಕ್ರಿಸ್ತನ ಪ್ರೀತಿಯಿಂದ ಬೇರ್ಪಡಿಸಬಲ್ಲವೇ? ಇಲ್ಲ! 36 ಪವಿತ್ರ ಗ್ರಂಥದಲ್ಲಿ ಹೀಗೆ ಬರೆಯಲ್ಪಟ್ಟಿದೆ:

“ನಿನಗೋಸ್ಕರವಾಗಿ ನಾವು ಎಲ್ಲಾ ಸಮಯಗಳಲ್ಲಿ ಸಾವಿನ ದವಡೆಯಲ್ಲಿದ್ದೇವೆ.
    ಕೊಯ್ಯಲು ಕೊಂಡೊಯ್ಯುವ ಕುರಿಗಳಿಗಿಂತ ಕಡೆಗಣಿಸಲ್ಪಟ್ಟಿದ್ದೇವೆ.”(A)

37 ಆದರೆ ನಮಗೋಸ್ಕರ ತನ್ನ ಪ್ರೀತಿಯನ್ನು ತೋರಿಸಿದ ದೇವರ ಮೂಲಕವಾಗಿ ಈ ಎಲ್ಲಾ ಸಂಗತಿಗಳಲ್ಲಿ ನಮಗೆ ಪೂರ್ಣ ಜಯವಿದೆ. 38-39 ಹೌದು, ದೇವರ ಪ್ರೀತಿಯಿಂದ ನಮ್ಮನ್ನು ಯಾವುದೂ ಬೇರ್ಪಡಿಸಲಾರದೆಂದು ನನಗೆ ನಿಶ್ಚಯವಾಗಿ ತಿಳಿದಿದೆ. ಮರಣವಾಗಲಿ ಜೀವವಾಗಲಿ ದೇವದೂತರಾಗಲಿ ದುರಾತ್ಮಗಳಾಗಲಿ ಈಗಿನ ಸಂಗತಿಗಳಾಗಲಿ ಮುಂದಿನ ಸಂಗತಿಗಳಾಗಲಿ ಯಾವ ಶಕ್ತಿಗಳೇ ಆಗಲಿ ಮೇಲಿನ ಸಂಗತಿಗಳಾಗಲಿ ಕೆಳಗಿನ ಸಂಗತಿಗಳಾಗಲಿ ಅಥವಾ ಇಡೀ ಜಗತ್ತಿನಲ್ಲಿರುವ ಯಾವುದೇ ಸಂಗತಿಗಳಾಗಲಿ ನಮ್ಮ ಪ್ರಭುವಾದ ಕ್ರಿಸ್ತ ಯೇಸುವಿನಲ್ಲಿ ತೋರಿಬಂದ ದೇವರ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International