Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 94

94 ಯೆಹೋವನೇ, ನೀನು ಸೇಡು ತೀರಿಸಿಕೊಳ್ಳುವ ದೇವರು!
    ಸೇಡು ತೀರಿಸಿಕೊಳ್ಳುವ ದೇವರೇ ಪ್ರತ್ಯಕ್ಷನಾಗು!
ಇಡೀಲೋಕದ ನ್ಯಾಯಾಧಿಪತಿ ನೀನೇ.
    ಅಹಂಕಾರಿಗಳಿಗೆ ತಕ್ಕ ದಂಡನೆಯನ್ನು ಕೊಡು.
ಯೆಹೋವನೇ, ದುಷ್ಟಜನರು ಎಷ್ಟರವರೆಗೆ ಪರಿಹಾಸ್ಯ ಮಾಡುವರು?
    ಇನ್ನೆಷ್ಟರವರೆಗೆ ಪರಿಹಾಸ್ಯ ಮಾಡುವರು?
ಆ ಅಪರಾಧಿಗಳು ತಮ್ಮ ದುಷ್ಕೃತ್ಯಗಳ ಬಗ್ಗೆ
    ಇನ್ನೆಷ್ಟರವರೆಗೆ ಜಂಬ ಕೊಚ್ಚಿಕೊಳ್ಳುವರು?
ಯೆಹೋವನೇ, ಅವರು ನಿನ್ನ ಜನರಿಗೆ ಕೇಡುಮಾಡಿದ್ದಾರೆ.
    ಅವರು ನಿನ್ನ ಜನರನ್ನು ಹಿಂಸೆಪಡಿಸಿದ್ದಾರೆ.
ನಮ್ಮ ದೇಶದಲ್ಲಿ ವಾಸವಾಗಿರುವ ವಿಧವೆಯರನ್ನೂ ವಿದೇಶಿಯರನ್ನೂ ಆ ದುಷ್ಟರು ಕೊಲ್ಲುತ್ತಾರೆ.
    ಅವರು ಅನಾಥ ಮಕ್ಕಳನ್ನೂ ಕೊಲೆ ಮಾಡುವರು.
ಆ ದುಷ್ಕೃತ್ಯಗಳು ಯೆಹೋವನಿಗೆ ಕಾಣದೆಂದು ಅವರು ಹೇಳಿಕೊಳ್ಳುತ್ತಾರೆ.
    ಅವುಗಳು ಇಸ್ರೇಲಿನ ದೇವರಿಗೆ ತಿಳಿಯದೆಂದು ಅವರು ಹೇಳುತ್ತಾರೆ.

ದುಷ್ಟರೇ, ನೀವು ಮೂಢರಾಗಿದ್ದೀರಿ!
    ನೀವು ಪಾಠವನ್ನು ಕಲಿತುಕೊಳ್ಳುವುದು ಯಾವಾಗ?
ದುಷ್ಟರೇ, ನೀವು ಬಹು ದಡ್ಡರಾಗಿದ್ದೀರಿ!
    ಅರ್ಥಮಾಡಿಕೊಳ್ಳಲು ನೀವು ಪ್ರಯತ್ನಿಸಬೇಕು.
ಕಿವಿಗಳನ್ನು ಸೃಷ್ಟಿಸಿದಾತನಿಗೆ, ಕೇಳುವುದಿಲ್ಲವೇ?
    ಕಣ್ಣುಗಳನ್ನು ಸೃಷ್ಟಿಸಿದಾತನಿಗೆ ಕಾಣುವುದಿಲ್ಲವೇ?
10 ಜನಾಂಗಗಳನ್ನು ಶಿಕ್ಷಿಸುವಾತನು ದೇವರೇ.
    ಜನರಿಗೆ ಉಪದೇಶಿಸುವವನೂ ಆತನೇ.
11 ಮನುಷ್ಯರ ಆಲೋಚನೆಗಳೆಲ್ಲಾ ಆತನಿಗೆ ತಿಳಿದಿದೆ.
    ಮನುಷ್ಯರು ಕೇವಲ ಉಸಿರೆಂಬುದು ಆತನಿಗೆ ತಿಳಿದಿದೆ.

12 ಯೆಹೋವನಿಂದ ಶಿಕ್ಷಿಸಲ್ಪಡುವವನು ಭಾಗ್ಯವಂತನೇ ಸರಿ.
    ದೇವರು ಅವನಿಗೆ ನೀತಿಮಾರ್ಗವನ್ನು ಉಪದೇಶಿಸುವನು.
13 ಆಪತ್ತಿನಲ್ಲಿಯೂ ಸಮಾಧಾನದಿಂದಿರಲು ನೀನು ಅವನಿಗೆ ಸಹಾಯಮಾಡುವೆ.
    ದುಷ್ಟರು ಸಮಾಧಿಗಳಿಗೆ ಸೇರುವವರೆಗೆ ಸಮಾಧಾನದಿಂದಿರಲು ನೀನು ಅವನಿಗೆ ನೆರವು ನೀಡುವೆ.
14 ಯೆಹೋವನು ತನ್ನ ಜನರನ್ನು ತೊರೆದುಬಿಡುವುದಿಲ್ಲ.
    ಆತನು ತನ್ನ ಜನರನ್ನು ನಿಸ್ಸಹಾಯಕರನ್ನಾಗಿ ಮಾಡುವುದಿಲ್ಲ.
15 ನ್ಯಾಯವು ನೀತಿಯೊಂದಿಗೆ ಮರಳಿ ಬರುವುದು.
    ಆಗ ಜನರು ಒಳ್ಳೆಯವರೂ ಯಥಾರ್ಥವಂತರೂ ಆಗುವರು.

16 ದುಷ್ಟರಿಗೆ ವಿರೋಧವಾಗಿ ಯಾರೂ ನನಗೆ ಸಹಾಯಮಾಡಲಿಲ್ಲ.
    ದುಷ್ಕೃತ್ಯಗಳನ್ನು ಮಾಡುವವರ ವಿರುದ್ಧವಾಗಿ ಯಾರೂ ನನ್ನೊಂದಿಗೆ ನಿಂತುಕೊಳ್ಳಲಿಲ್ಲ.
17 ಯೆಹೋವನು ನನಗೆ ಸಹಾಯಮಾಡಿಲ್ಲದಿದ್ದರೆ,
    ಇಷ್ಟರಲ್ಲೇ ಸಮಾಧಿ ಸೇರುತ್ತಿದ್ದೆನು.
18 ಯೆಹೋವನೇ, ಜಾರಿಹೋಗುತ್ತಿರುವೆ ಎಂದು ಮೊರೆಯಿಟ್ಟಾಗ
    ಆತನು ನನಗೆ ಆಧಾರ ನೀಡಿದನು.
19 ನಾನು ಚಿಂತೆಗಳಿಂದ ಗಲಿಬಿಲಿಗೊಂಡಿದ್ದಾಗ
    ನೀನು ನನ್ನನ್ನು ಸಂತೈಸಿ ಸಂತೋಷಪಡಿಸಿದೆ.

20 ದೇವರೇ, ಮೋಸಗಾರರಾದ ನ್ಯಾಯಾಧೀಶರಿಗೆ ಸಹಾಯಮಾಡಬೇಡ.
    ಅವರು ಕಾನೂನನ್ನು ಡೊಂಕು ಮಾಡಿ ಜನರನ್ನು ಹಿಂಸಿಸುವರು.
21 ಅವರು ನೀತಿವಂತರಿಗೆ ಎದುರಾಗಿ
    ನಿರಪರಾಧಿಗಳಿಗೆ ಮರಣದಂಡನೆ ವಿಧಿಸುವರು.
22 ನನಗಾದರೋ ಯೆಹೋವನು ಪರ್ವತದ ಮೇಲಿರುವ ಆಶ್ರಯಸ್ಥಾನವಾಗಿದ್ದಾನೆ.
    ನನ್ನ ಬಂಡೆಯಾಗಿರುವ ದೇವರು ನನಗೆ ಆಶ್ರಯಗಿರಿಯಾಗಿದ್ದಾನೆ!
23 ಆತನು ಆ ದುಷ್ಟ ನ್ಯಾಯಾಧೀಶರನ್ನು ಅವರ ದುಷ್ಕೃತ್ಯಗಳ ನಿಮಿತ್ತ ದಂಡಿಸುವನು.
    ಅವರ ಪಾಪಗಳ ನಿಮಿತ್ತ ದೇವರು ಅವರನ್ನು ನಾಶಮಾಡುವನು.
    ನಮ್ಮ ದೇವರಾದ ಯೆಹೋವನು ಆ ದುಷ್ಟ ನ್ಯಾಯಾಧೀಶರನ್ನು ನಾಶಮಾಡುವನು.

ಯೆರೆಮೀಯ 14:1-10

ಕ್ಷಾಮ ಮತ್ತು ಸುಳ್ಳುಪ್ರವಾದಿಗಳು

14 ಇದು ಕ್ಷಾಮದ ಬಗ್ಗೆ ಯೆರೆಮೀಯನಿಗೆ ಯೆಹೋವನು ನುಡಿದ ಸಂದೇಶ:

“ಯೆಹೂದ ಜನಾಂಗವು ಸತ್ತುಹೋದವರಿಗಾಗಿ ಗೋಳಾಡುವುದು.
    ಯೆಹೂದದ ನಗರಗಳಲ್ಲಿದ್ದ ಜನರು ದಿನೇದಿನೇ ನಿಬರ್ಲರಾಗುತ್ತಾರೆ.
    ಆ ಜನರು ನೆಲದ ಮೇಲೆ ಬಿದ್ದು ಬಿಡುತ್ತಾರೆ.
ಜೆರುಸಲೇಮ್ ನಗರದಿಂದ ಜನರು ಸಹಾಯಕ್ಕಾಗಿ ಯೆಹೋವನಿಗೆ ಮೊರೆಯಿಡುತ್ತಾರೆ.
ಜನನಾಯಕರು ನೀರು ತರುವದಕ್ಕಾಗಿ ತಮ್ಮ ಸೇವಕರನ್ನು ಕಳುಹಿಸುತ್ತಾರೆ.
ಆ ಸೇವಕರು ನೀರಿರುವ ಸ್ಥಳಗಳಿಗೆ ಹೋಗುತ್ತಾರೆ.
    ಆದರೆ ಅಲ್ಲಿ ಅವರಿಗೆ ನೀರು ಸಿಕ್ಕುವದಿಲ್ಲ.
ಸೇವಕರು ಕೇವಲ ಪಾತ್ರೆಗಳನ್ನು ತೆಗೆದುಕೊಂಡು ಹಿಂದಿರುಗಿ ಬರುತ್ತಾರೆ.
    ಅವರು ನಾಚಿಕೆಪಟ್ಟುಕೊಳ್ಳುತ್ತಾರೆ ಮತ್ತು ಪೇಚಾಡುತ್ತಾರೆ.
    ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
ಭೂಮಿಗೆ ಮಳೆ ಬೀಳುವದಿಲ್ಲ.
    ಯಾರೂ ಬಿತ್ತನೆಗಾಗಿ ಭೂಮಿಯನ್ನು ಉಳುವದಿಲ್ಲ.
ರೈತರು ಎದೆಗುಂದುತ್ತಾರೆ.
    ಅವರು ನಾಚಿಕೆಯಿಂದ ತಮ್ಮ ಮುಖಗಳನ್ನು ಮುಚ್ಚಿಕೊಳ್ಳುತ್ತಾರೆ.
ಕಾಡಿನಲ್ಲಿ ಹುಲ್ಲು ಇಲ್ಲದ ಕಾರಣ
    ಜಿಂಕೆಯು ತನ್ನ ಮರಿಯನ್ನು ಬಿಟ್ಟುಹೋಗುವದು.
ಕಾಡುಕತ್ತೆಗಳು ಬೋಳುಬೆಟ್ಟಗಳ ಮೇಲೆ ನಿಂತು
    ನರಿಗಳಂತೆ[a] ಗಾಳಿಯನ್ನು ಮೂಸುತ್ತವೆ.
ಆದರೆ ಅವುಗಳಿಗೆ ಆಹಾರ ಕಾಣಿಸುವದಿಲ್ಲ.
    ಏಕೆಂದರೆ ತಿನ್ನಬಹುದಾದ ಸಸಿಗಳು ಬೆಳೆದಿಲ್ಲ.”

“ಯೆಹೋವನೇ, ಅದು ನಮ್ಮ ಪಾಪಗಳ ಫಲವೆಂಬುದು ನಮಗೆ ತಿಳಿದಿದೆ.
    ನಮ್ಮ ಪಾಪಗಳಿಂದಾಗಿ ನಾವು ಈಗ ತೊಂದರೆಗಳನ್ನು ಅನುಭವಿಸುತ್ತಿದ್ದೇವೆ.
    ಯೆಹೋವನೇ, ನಿನ್ನ ಒಳ್ಳೆಯ ಹೆಸರಿಗಾಗಿ ನಮಗೇನಾದರೂ ಸಹಾಯಮಾಡು.
ನಾವು ನಿನ್ನನ್ನು ಅನೇಕ ಸಲ ತ್ಯಜಿಸಿದ್ದೇವೆಂದು ಒಪ್ಪಿಕೊಳ್ಳುತ್ತೇವೆ.
    ನಾವು ನಿನ್ನ ವಿರುದ್ಧ ಪಾಪಮಾಡಿದ್ದೇವೆ.
ಯೆಹೋವನೇ, ನೀನು ಇಸ್ರೇಲರ ಆಶಾಕಿರಣ,
    ಕಷ್ಟಕಾಲದಲ್ಲಿ ಇಸ್ರೇಲನ್ನು ನೀನು ಕಾಪಾಡುವೆ.
ಆದರೆ ಈಗ ನೀನು ಈ ದೇಶದಲ್ಲಿ ಪರದೇಶಿಯಂತೆ ಕಾಣುವೆ.
    ಕೇವಲ ಒಂದು ರಾತ್ರಿ ಮಾತ್ರ ಉಳಿಯುವ ಪ್ರಯಾಣಿಕನಂತೆ ಕಾಣುವೆ.
ನೀನು ಸ್ತಬ್ಧನಾಗಿರುವೆ;
    ಯಾರನ್ನೂ ರಕ್ಷಿಸಲಾಗದ ಸೈನಿಕನಂತಾಗಿರುವೆ.
ಯೆಹೋವನೇ, ನೀನಾದರೋ ನಮ್ಮ ಜೊತೆಯಲ್ಲಿರುವೆ.
    ನಾವು ನಿನ್ನ ಹೆಸರಿನವರಾಗಿದ್ದೇವೆ.
    ಆದ್ದರಿಂದ ನಮ್ಮನ್ನು ಕೈಬಿಡಬೇಡ.”

10 ಯೆಹೂದದ ಜನರ ಬಗ್ಗೆ ಯೆಹೋವನು ಹೀಗೆ ಹೇಳುತ್ತಾನೆ: “ಯೆಹೂದದ ಜನರು ನನ್ನಿಂದ ದೂರವಾಗಲು ಮನಃಪೂರ್ವಕವಾಗಿ ಇಚ್ಛಿಸುತ್ತಾರೆ. ಅವರು ಮೊದಲಿಂದಲೂ ಹೀಗೆ ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗ ಯೆಹೋವನು ಅವರನ್ನು ಸ್ವಿಕರಿಸುವದಿಲ್ಲ. ಆತನು ಅವರ ದುಷ್ಕೃತ್ಯಗಳನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗಾಗಿ ಅವರನ್ನು ದಂಡಿಸುತ್ತಾನೆ.”

ಯೆರೆಮೀಯ 14:17-22

17 “ಯೆರೆಮೀಯನೇ, ಯೆಹೂದದ ಜನರಿಗೆ
    ಈ ಸಂದೇಶವನ್ನು ಹೇಳು:
‘ನನ್ನ ಕಣ್ಣುಗಳಲ್ಲಿ ಕಣ್ಣೀರು ತುಂಬಿಕೊಂಡಿದೆ. ನಾನು ನಿರಂತರವಾಗಿ ಹಗಲಿರುಳು ಅಳುವೆನು.
ನಾನು ನನ್ನ ಕನ್ಯೆಯಾದ ಮಗಳಿಗಾಗಿ[a] ಅಳುವೆನು. ನಾನು ನನ್ನ ಜನರಿಗಾಗಿ ಅಳುವೆನು.
    ಏಕೆಂದರೆ ಯಾರೋ ಒಬ್ಬರು ಅವರನ್ನು ಹೊಡೆದು ಸದೆಬಡಿದಿದ್ದಾರೆ,
    ಅವರಿಗೆ ಬಹಳ ಗಾಯಗಳಾಗಿವೆ.
18 ನಾನು ನಗರಗಳ ಹೊರಗಡೆ ಹೋದರೆ
    ಖಡ್ಗಗಳಿಗೆ ಆಹುತಿಯಾಗಿ ಸತ್ತವರು ನನ್ನ ಕಣ್ಣಿಗೆ ಬೀಳುತ್ತಾರೆ.
ನಾನು ನಗರಗಳಿಗೆ ಹೋದರೆ ಕ್ಷಾಮದಿಂದ ಬಳಲುವ ಜನರು ನನ್ನ ಕಣ್ಣಿಗೆ ಬೀಳುತ್ತಾರೆ.
    ಅವರಿಗೆ ತಿನ್ನಲು ಅನ್ನವಿಲ್ಲ.
ಯಾಜಕರನ್ನು ಮತ್ತು ಪ್ರವಾದಿಗಳನ್ನು
    ಪರದೇಶಕ್ಕೆ ತೆಗೆದುಕೊಂಡು ಹೋಗಲಾಗಿದೆ.’”

19 ಯೆಹೋವನೇ, ನೀನು ಯೆಹೂದ ಜನಾಂಗವನ್ನು ಸಂಪೂರ್ಣವಾಗಿ ತಿರಸ್ಕರಿಸಿರುವೆಯಾ?
    ಯೆಹೋವನೇ, ನೀನು ಚೀಯೋನನ್ನು ದ್ವೇಷಿಸುವೆಯಾ?
ನಾವು ಪುನಃ ಗುಣಹೊಂದಲಾರದ ಹಾಗೆ ನಮ್ಮನ್ನು ಹೊಡೆದು ಗಾಯಗೊಳಿಸಿರುವೆಯಲ್ಲ.
    ನೀನು ಹೀಗೇಕೆ ಮಾಡಿದೆ?
ನಾವು ನೆಮ್ಮದಿಯನ್ನು ನಿರೀಕ್ಷಿಸಿದೆವು,
    ಆದರೆ ಒಳ್ಳೆಯದೇನೂ ಆಗಲಿಲ್ಲ.
ನಾವು ಕ್ಷೇಮವನ್ನು ಎದುರುನೋಡುತ್ತಿದ್ದೆವು.
    ಆದರೆ ಕೇವಲ ಭಯ ನಮ್ಮೆದುರಿಗೆ ಬಂದಿತು.
20 ಯೆಹೋವನೇ, ನಾವು ಬಹಳ ಕೆಟ್ಟ ಜನರೆಂಬುದು ನಮಗೆ ಗೊತ್ತು.
    ನಮ್ಮ ಪೂರ್ವಿಕರು ದುಷ್ಕೃತ್ಯಗಳನ್ನು ಮಾಡಿದರೆಂಬುದನ್ನು ನಾವು ಬಲ್ಲೆವು.
    ಹೌದು, ನಾವು ನಿನ್ನ ವಿರುದ್ಧ ಪಾಪಮಾಡಿದೆವು.
21 ಯೆಹೋವನೇ, ನಿನ್ನ ಹೆಸರಿನ ಒಳ್ಳೆಯತನ ಉಳಿಸಿಕೊಳ್ಳುವದಕ್ಕಾದರೂ ನಮ್ಮನ್ನು ದೂರ ತಳ್ಳಬೇಡ.
    ನಿನ್ನ ಮಹಿಮೆಯ ಸಿಂಹಾಸನದ ಗೌರವವನ್ನು ಕುಂದಿಸಬೇಡ.
ನೀನು ನಮ್ಮೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಸ್ಮರಿಸಿಕೊ.
    ಆ ಒಡಂಬಡಿಕೆಯನ್ನು ಮುರಿಯಬೇಡ.
22 ಅನ್ಯರ ವಿಗ್ರಹಗಳಿಗೆ ಮಳೆ ಸುರಿಸುವ ಸಾಮರ್ಥ್ಯವಿಲ್ಲ.
    ಆಕಾಶಕ್ಕೆ ಮಳೆಯನ್ನು ಸುರಿಸುವ ಸಾಮರ್ಥ್ಯವಿಲ್ಲ.
ನೀನೊಬ್ಬನೇ ನಮ್ಮ ಆಶಾಕೇಂದ್ರ.
    ನೀನೇ ಈ ಎಲ್ಲವುಗಳನ್ನು ಸೃಷ್ಟಿಸಿದವನು.

ಲೂಕ 22:31-33

ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ!

(ಮತ್ತಾಯ 26:31-35; ಮಾರ್ಕ 14:27-31; ಯೋಹಾನ 13:36-38)

31 “ಒಬ್ಬ ರೈತನು ತನ್ನ ಗೋಧಿಯನ್ನು ತೂರುವಂತೆ ಸೈತಾನನು ನಿಮ್ಮನ್ನು ಶೋಧಿಸಲು ಕೇಳಿಕೊಂಡನು. ಸೀಮೋನನೇ, ಸೀಮೋನನೇ (ಪೇತ್ರ) 32 ನಿನ್ನ ನಂಬಿಕೆಯು ಕುಂದಿಹೋಗಬಾರದೆಂದು ನಾನು ಪ್ರಾರ್ಥಿಸಿದೆನು! ನೀನು ಪರಿವರ್ತನೆಗೊಂಡ ನಂತರ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು.

33 ಅದಕ್ಕೆ ಪೇತ್ರನು ಯೇಸುವಿಗೆ, “ಪ್ರಭುವೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು.

ಲೂಕ 22:54-62

ಪೇತ್ರನ ವಿಶ್ವಾಸದ್ರೋಹ

(ಮತ್ತಾಯ 26:57-58,69-75; ಮಾರ್ಕ 14:53-54,66-72; ಯೋಹಾನ 18:12-18,25-27)

54 ಅವರು ಯೇಸುವನ್ನು ಬಂಧಿಸಿ ಪ್ರಧಾನಯಾಜಕನ ಮನೆಯೊಳಗೆ ಕರೆದುಕೊಂಡು ಬಂದರು. ಪೇತ್ರನು ಅವರನ್ನು ಹಿಂಬಾಲಿಸಿದನು. ಆದರೆ ಅವನು ಯೇಸುವಿನ ಹತ್ತಿರ ಬರಲಿಲ್ಲ. 55 ಸೈನಿಕರು ಅಂಗಳದ ಮಧ್ಯದಲ್ಲಿ ಬೆಂಕಿಯನ್ನು ಹೊತ್ತಿಸಿ ಒಟ್ಟಾಗಿ ಕುಳಿತುಕೊಂಡರು. ಪೇತ್ರನೂ ಅವರ ಜೊತೆ ಕುಳಿತುಕೊಂಡನು. 56 ಪೇತ್ರನು ಅಲ್ಲಿ ಕುಳಿತಿರುವುದನ್ನು ಒಬ್ಬ ಸೇವಕಿ ನೋಡಿದಳು. ಬೆಂಕಿಯ ಬೆಳಕಿನಿಂದ ಆಕೆಯು ಪೇತ್ರನನ್ನು ಗುರುತಿಸಿದಳು. ಅವಳು ಪೇತ್ರನ ಮುಖವನ್ನೇ ಲಕ್ಷ್ಯವಿಟ್ಟು ನೋಡಿ, “ಈ ಮನುಷ್ಯನು ಆತನ (ಯೇಸು) ಸಂಗಡ ಇದ್ದವನು” ಅಂದಳು.

57 ಆದರೆ ಪೇತ್ರನು ಅದು ನಿಜವಲ್ಲವೆಂದು ಹೇಳಿದನು. ಅವನು ಅಕೆಗೆ, “ಅಮ್ಮಾ, ಆತನು ನನಗೆ ಗೊತ್ತೇ ಇಲ್ಲ” ಅಂದನು. 58 ಸ್ವಲ್ಪ ಸಮಯದ ನಂತರ ಇನ್ನೊಬ್ಬ ವ್ಯಕ್ತಿ ಪೇತ್ರನನ್ನು ನೋಡಿ, “ನೀನು ಯೇಸುವನ್ನು ಹಿಂಬಾಲಿಸುತ್ತಿದ್ದ ಜನರಲ್ಲಿ ಒಬ್ಬನಾಗಿದ್ದೆ!” ಎಂದು ಹೇಳಿದನು.

ಆದರೆ ಪೇತ್ರನು, “ನಾನು ಆತನ ಹಿಂಬಾಲಕರಲ್ಲಿ ಒಬ್ಬನಲ್ಲ” ಅಂದನು.

59 ಸುಮಾರು ಒಂದು ತಾಸಿನ ನಂತರ ಇನ್ನೊಬ್ಬನು, “ಅದು ನಿಜ! ಈ ಮನುಷ್ಯನು ಆತನೊಡನೆ ಇದ್ದವನು. ಇವನು ಗಲಿಲಾಯದವನು!” ಎಂದು ದೃಢವಾಗಿ ಹೇಳಿದನು.

60 ಆಗ ಪೇತ್ರನು, “ನೀನು ಏನು ಹೇಳುತ್ತಿದ್ದೀಯೋ ನನಗೆ ಗೊತ್ತಿಲ್ಲ” ಅಂದನು.

ಪೇತ್ರನು ಇನ್ನೂ ಮಾತಾಡುತ್ತಿದ್ದಾಗ ಕೋಳಿ ಕೂಗಿತು. 61 ಆಗ ಪ್ರಭುವು (ಯೇಸು) ಹಿಂತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು. “ಮುಂಜಾನೆ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನನ್ನು ಅರಿಯೆನೆಂಬುದಾಗಿ ಮೂರು ಸಲ ಹೇಳುವೆ” ಎಂದು ಪ್ರಭುವು ಹೇಳಿದ ಮಾತನ್ನು ಪೇತ್ರನು ಆಗ ಜ್ಞಾಪಿಸಿಕೊಂಡನು. 62 ಬಳಿಕ ಪೇತ್ರನು ಹೊರಗೆ ಹೋಗಿ ಬಹು ದುಃಖದಿಂದ ಅತ್ತನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International