Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 2

ಅನ್ಯಜನಾಂಗಗಳು ಕೋಪಗೊಂಡಿರುವುದೇಕೆ?
    ಅವರು ಮೂರ್ಖತನದ ಸಂಚುಗಳನ್ನು ಮಾಡುತ್ತಿರುವುದೇಕೆ?
ಅವುಗಳ ರಾಜರುಗಳೂ ನಾಯಕರುಗಳೂ
    ಯೆಹೋವನಿಗೂ ಆತನಿಂದ ಅಭಿಷೇಕಿಸಲ್ಪಟ್ಟವನಿಗೂ ವಿರೋಧವಾಗಿ ಕೂಡಿಬಂದಿದ್ದಾರೆ.
“ದೇವರಿಗೂ ಆತನು ಅಭಿಷೇಕಿಸಿದ ರಾಜನಿಗೂ ವಿರೋಧವಾಗಿ ದಂಗೆ ಎದ್ದು
    ಸ್ವತಂತ್ರರಾಗೋಣ” ಎಂದು ಅವರು ಮಾತಾಡಿಕೊಳ್ಳುತ್ತಿದ್ದಾರೆ.

ಆದರೆ ಒಡೆಯನೂ ಪರಲೋಕದ ರಾಜನೂ ಅವರನ್ನು ನೋಡಿ ನಗುವನು;
    ಆತನು ಅವರನ್ನು ಪರಿಹಾಸ್ಯಮಾಡುವನು.
5-6 “ಇವನನ್ನು ರಾಜನನ್ನಾಗಿ ಅಭಿಷೇಕಿಸಿದವನು ನಾನೇ.
    ನನ್ನ ಪವಿತ್ರ ಪರ್ವತವಾದ ಚೀಯೋನಿನಲ್ಲಿ ಆಳುವವನು ಇವನೇ”
ಎಂದು ಅವರಿಗೆ ಕೋಪದಿಂದ ಉತ್ತರಿಸುವನು.
    ಆಗ ಅವರೆಲ್ಲರೂ ಭಯಗೊಳ್ಳುವರು.

ಯೆಹೋವನ ಒಡಂಬಡಿಕೆಯ ಕುರಿತು ಹೇಳುತ್ತಿರುವೆ.
    ಆತನು ನನಗೆ, “ಈ ಹೊತ್ತು ನಾನು ನಿನಗೆ ತಂದೆಯಾದೆ! ನೀನೇ ನನ್ನ ಮಗನು.
ನೀನು ಕೇಳಿಕೊಂಡರೆ ಅನ್ಯಜನಾಂಗಗಳನ್ನು ನಿನಗೆ ಅಧೀನಪಡಿಸುವೆನು.
    ಭೂಮಿಯ ಮೇಲಿರುವ ಜನರೆಲ್ಲರೂ ನಿನ್ನವರಾಗುವರು!
ಕಬ್ಬಿಣದ ಗದೆಯು ಮಣ್ಣಿನ ಮಡಿಕೆಯನ್ನು ನುಚ್ಚುನೂರುಮಾಡುವಂತೆ
    ನೀನು ಅನ್ಯಜನಾಂಗಗಳನ್ನು ನಾಶಪಡಿಸುವೆ” ಎಂದು ಹೇಳಿದನು.

10 ಆದ್ದರಿಂದ ರಾಜರುಗಳೇ, ವಿವೇಕಿಗಳಾಗಿರಿ.
    ಅಧಿಪತಿಗಳೇ, ಬುದ್ದಿಮಾತುಗಳಿಗೆ ಕಿವಿಗೊಡಿರಿ.
11 ಯೆಹೋವನಿಗೆ ಭಯಭಕ್ತಿಯಿಂದ ವಿಧೇಯರಾಗಿರಿ,
    ನಡುಗುತ್ತಾ ಉಲ್ಲಾಸಪಡಿರಿ.
12 ಆತನ ಮಗನಿಗೆ ನಂಬಿಗಸ್ತರಾಗಿರಿ,
    ಇಲ್ಲವಾದರೆ ಆತನ ಕೋಪವು ಬೇಗನೆ ತೋರಿಬಂದು
ನಿಮ್ಮನ್ನು ನಾಶಪಡಿಸುವುದು.
    ಯೆಹೋವನನ್ನು ಆಶ್ರಯಿಸಿಕೊಂಡಿರುವವರು ಭಾಗ್ಯವಂತರೇ ಸರಿ!

ಯೆರೆಮೀಯ 18:12-23

12 ಆದರೆ ಯೆಹೂದದ ಜನರು, ‘ಪ್ರಯತ್ನ ಮಾಡುವದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ಮನಸ್ಸಿಗೆ ಬಂದಂತೆ ನಾವು ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ದುಷ್ಟ ಮತ್ತು ಮೊಂಡುಮನಸ್ಸು ಹೇಳಿದಂತೆ ನಡೆಯುವೆವು’ ಎಂಬುದಾಗಿ ಉತ್ತರಿಸುವರು” ಎಂದನು.

13 ಯೆಹೋವನು ಹೇಳುವದನ್ನು ಆಲಿಸಿರಿ:

“ಬೇರೆ ಜನಾಂಗದ ಜನರಿಗೆ ಈ ಪ್ರಶ್ನೆಯನ್ನು ಕೇಳಿರಿ,
    ‘ಇಸ್ರೇಲ್ ಮಾಡಿದಂಥ ದುಷ್ಕೃತ್ಯಗಳನ್ನು ಬೇರೆ ಯಾರಾದರೂ ಮಾಡಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ?’
    ಇಸ್ರೇಲ್ ದೇಶವು ದೇವರ ವಧುವಿನಂತಿದೆ.
14 ಲೆಬನೋನಿನ ಪರ್ವತಗಳ ಮೇಲಿನ ಹಿಮವು ಇಳಿಜಾರಿನ ಬಂಡೆಯಿಂದ ಎಂದಾದರೂ ಕರಗುವುದೇ?
    ಬಹುದೂರದಲ್ಲಿ ಹುಟ್ಟಿ ಹರಿದುಬರುವ ತೊರೆಗಳು ಎಂದಾದರೂ ಹರಿಯದೆ ನಿಂತುಹೋಗುವುದೇ?[a]
15 ಆದರೆ ನನ್ನ ಜನರು ನನ್ನನ್ನು ಮರೆತಿದ್ದಾರೆ.
    ಅವರು ನಿಷ್ಪ್ರಯೋಜಕವಾದ ವಿಗ್ರಹಗಳಿಗೆ ನೈವೇದ್ಯ ಮಾಡುತ್ತಾರೆ.
ನನ್ನ ಜನರು ತಾವು ಮಾಡುವ ಕೆಲಸಗಳಲ್ಲಿ ಮುಗ್ಗರಿಸುತ್ತಾರೆ.
    ಅವರು ತಮ್ಮ ಪೂರ್ವಿಕರ ಹಳೆಯ ಹಾದಿಯಲ್ಲಿಯೇ ಮುಗ್ಗರಿಸುತ್ತಾರೆ.
ನನ್ನ ಜನರು ಒಳ್ಳೆಯ ರಾಜಬೀದಿಯ ಮೇಲೆ ನನ್ನನ್ನು ಹಿಂಬಾಲಿಸುವದನ್ನು
    ತೊರೆದು ಹಾಳಾದ ಹಾದಿಯನ್ನು ಹಿಡಿಯುತ್ತಾರೆ.
16 ಆದ್ದರಿಂದ ಯೆಹೂದ್ಯರ ದೇಶವು ಬರಿದಾದ ಮರುಭೂಮಿಯಾಗುವುದು.
    ಜನರು ಇಲ್ಲಿಂದ ಹಾದುಹೋಗುವಾಗಲೆಲ್ಲಾ ಸಿಳ್ಳುಹಾಕಿ ತಲೆಯಾಡಿಸುವರು.
    ದೇಶವು ಹಾಳಾದುದನ್ನು ನೋಡಿ ಬೆರಗಾಗುವರು.
17 ಪೂರ್ವದಿಂದ ಬರುವ ಗಾಳಿಯಂತೆ
    ಯೆಹೂದದ ಜನರನ್ನು ಅವರ ವೈರಿಗಳ ಎದುರಿನಲ್ಲಿ ಚದರಿಸಿಬಿಡುವೆನು.
ನಾನು ಅವರನ್ನು ನಾಶಮಾಡುವೆನು.
ಆ ಸಮಯದಲ್ಲಿ ಅವರಿಗೆ ಸಹಾಯಮಾಡಲು ನಾನು ಬರುವದಿಲ್ಲ.
    ಇಲ್ಲ! ನಾನು ಬಿಟ್ಟುಹೋಗುವುದನ್ನು ಅವರು ನೋಡುವರು.”

ಯೆರೆಮೀಯನ ನಾಲ್ಕನೇ ದೂರು

18 ಆಗ ಯೆರೆಮೀಯನ ವೈರಿಗಳು ಹೀಗೆಂದರು: “ಬನ್ನಿ, ನಾವು ಯೆರೆಮೀಯನ ವಿರುದ್ಧ ಒಳಸಂಚು ಮಾಡೋಣ. ಯಾಜಕನಿಂದ ಧರ್ಮೋಪದೇಶವು ತಪ್ಪುವದಿಲ್ಲ, ಇದು ಖಂಡಿತ. ಜ್ಞಾನಿಗಳಿಂದ ಮಂತ್ರಾಲೋಚನೆಯು ಇದ್ದೇ ಇರುತ್ತದೆ. ದೈವೋಕ್ತಿಯು ಪ್ರವಾದಿಯಿಂದ ಎಂದಿಗೂ ತಪ್ಪದು. ಆದ್ದರಿಂದ ಅವನ ಬಗ್ಗೆ ಸುಳ್ಳು ಹೇಳಿ ನಾಶಮಾಡೋಣ. ಅವನು ಹೇಳುವ ಯಾವುದಕ್ಕೂ ನಾವು ಗಮನಕೊಡಬೇಕಾಗಿಲ್ಲ.”

19 ಯೆಹೋವನೇ, ನನ್ನ ಮಾತನ್ನು ಆಲಿಸು,
    ನನ್ನ ವಾದವನ್ನು ಆಲಿಸಿ ಯಾರು ಹೇಳುವುದು ಸರಿ ಎನ್ನುವುದನ್ನು ನಿರ್ಣಯಿಸು.
20 ನಾನು ಯೆಹೂದದ ಜನರಿಗೆ ಒಳ್ಳೆಯದನ್ನು ಮಾಡಿದೆನು.
    ಆದರೆ ಅವರೀಗ ನನಗೆ ಕೆಟ್ಟದ್ದನ್ನು ಮಾಡುತ್ತಿದ್ದಾರೆ.
    ಈಗ ಅವರು ನನ್ನನ್ನು ಕೊಲ್ಲುವುದಕ್ಕಾಗಿ ಒಂದು ಗುಂಡಿಯನ್ನು ತೋಡಿದ್ದಾರೆ.
ಯೆಹೋವನೇ, ನಾನು ಮಾಡಿದ್ದು ನಿನ್ನ ಜ್ಞಾಪಕದಲ್ಲಿದೆಯೇ?
    ನಾನು ನಿನ್ನ ಎದುರಿಗೆ ನಿಂತುಕೊಂಡು ಈ ಜನರಿಗೆ ಒಳ್ಳೆಯದನ್ನು ಮಾಡೆಂದೂ
    ಅವರ ಮೇಲೆ ಕೋಪಗೊಳ್ಳಬಾರದೆಂದೂ ನಿನ್ನಲ್ಲಿ ಕೇಳಿಕೊಂಡೆ.
21 ಆದ್ದರಿಂದ ಈಗ ಅವರ ಮಕ್ಕಳು ಕ್ಷಾಮಪೀಡಿತರಾಗಿ ಉಪವಾಸಬೀಳುವಂತೆ ಮಾಡು.
    ಅವರ ಶತ್ರುಗಳು ಅವರನ್ನು ಖಡ್ಗದಿಂದ ಸೋಲಿಸುವಂತೆ ಮಾಡು.
ಅವರ ಹೆಂಡತಿಯರು ಮಕ್ಕಳನ್ನು ಕಳೆದುಕೊಳ್ಳಲಿ ಮತ್ತು ವಿಧವೆಯರಾಗಲಿ.
    ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗದಿಂದ ಹತರಾಗಲಿ.
22 ಅವರ ಮನೆಗಳಲ್ಲಿ ರೋಧನದ ಧ್ವನಿ ಬರಲಿ.
    ನೀನು ಫಕ್ಕನೆ ಅವರ ಮುಂದೆ ಶತ್ರುವನ್ನು ತಂದು ನಿಲ್ಲಿಸಿದಾಗ ಅವರು ಅಳುವಂತಾಗಲಿ.
ನನ್ನ ವೈರಿಗಳು ನನ್ನನ್ನು ಬಲೆಯಲ್ಲಿ ಸಿಕ್ಕಿಸಬೇಕೆಂದು ಪ್ರಯತ್ನ ಮಾಡಿದ್ದಾರೆ.
    ನಾನು ಸಿಕ್ಕಿಹಾಕಿಕೊಳ್ಳುವಂಥ ಮತ್ತು ನನ್ನ ಕಣ್ಣಿಗೆ ಕಾಣದ ಗುಪ್ತವಾದ ಬಲೆಗಳನ್ನು ಅವರು ಹಾಕಿದ್ದಾರೆ.
23 ಯೆಹೋವನೇ, ನನ್ನನ್ನು ಕೊಲ್ಲಲು ಅವರು ಹಾಕಿದ ಯೋಜನೆಗಳನ್ನೆಲ್ಲ ನೀನು ಬಲ್ಲೆ.
    ಅವರ ಅಪರಾಧಗಳನ್ನು ಮನ್ನಿಸಬೇಡ.
ಅವರ ಪಾಪಗಳನ್ನು ಅಳಿಸಬೇಡ.
    ನನ್ನ ವೈರಿಗಳನ್ನು ನಾಶಪಡಿಸು, ನೀನು ಕೋಪದಲ್ಲಿದ್ದಾಗ ಆ ಜನರನ್ನು ಶಿಕ್ಷಿಸು.

1 ತಿಮೊಥೆಯನಿಗೆ 3:14-4:5

ನಮ್ಮ ಜೀವನದ ರಹಸ್ಯ

14 ನಾನು ನಿನ್ನ ಬಳಿಗೆ ಬಹುಬೇಗ ಬರುವೆನೆಂಬ ಭರವಸೆ ನನಗಿದೆ. ಆದರೆ ಈಗ ನಾನು ಈ ಸಂಗತಿಗಳನ್ನು ಬರೆಯುತ್ತಿದ್ದೇನೆ. 15 ನಂತರ ನಾನು ನಿನ್ನ ಬಳಿಗೆ ಬೇಗ ಬಾರದೆ ಇದ್ದರೂ, ದೇವರ ಮನೆಯಲ್ಲಿ ಜನರು ಮಾಡಲೇಬೇಕಾದ ಕಾರ್ಯಗಳ ಬಗ್ಗೆ ನಿನಗೆ ತಿಳಿದಿದೆ. ಆ ಮನೆಯು ಜೀವಂತ ದೇವರ ಸಭೆ. ಅದು ಸತ್ಯದ ಅಡಿಪಾಯವೂ ಆಧಾರವೂ ಆಗಿದೆ. 16 ನಿಸ್ಸಂದೇಹವಾಗಿಯೂ ನಮ್ಮ ಆರಾಧನಾ ಜೀವಿತದ ರಹಸ್ಯವು ಮಹೋನ್ನತವಾದದ್ದು:

ಕ್ರಿಸ್ತನು ಮಾನವ ದೇಹದಲ್ಲಿ ನಮಗೆ ಪ್ರತ್ಯಕ್ಷನಾದನು.
ಆತನೇ ಕ್ರಿಸ್ತನೆಂದು ಪವಿತ್ರಾತ್ಮನು ನಿರೂಪಿಸಿದನು.
ದೇವದೂತರಿಗೆ ಆತನು ಕಾಣಿಸಿಕೊಂಡನು.
ಆತನನ್ನು ಕುರಿತ ಸುವಾರ್ತೆಯನ್ನು ಜನಾಂಗಗಳವರಿಗೆಲ್ಲ (ಯೆಹೂದ್ಯರಲ್ಲದವರಿಗೆ) ಪ್ರಸಿದ್ಧಿಪಡಿಸಲಾಯಿತು.
ಲೋಕದಲ್ಲಿರುವ ಜನರು ಆತನಲ್ಲಿ ನಂಬಿಕೆಯಿಟ್ಟರು.
ಆತನು ಮಹಿಮೆಯೊಂದಿಗೆ ಪರಲೋಕಕ್ಕೆ ಎತ್ತಲ್ಪಟ್ಟನು.

ಸುಳ್ಳುಬೋಧಕರ ಬಗ್ಗೆ ಎಚ್ಚರಿಕೆ

ಮುಂದಿನ ದಿನಗಳಲ್ಲಿ ಕೆಲವು ಜನರು ಸತ್ಯ ಬೋಧನೆಯನ್ನು ನಂಬುವುದಿಲ್ಲವೆಂದು ಪವಿತ್ರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ. ಆ ಜನರು ಸುಳ್ಳಾಡುವ ದುರಾತ್ಮಗಳಿಗೆ ವಿಧೇಯರಾಗುವರು; ದೆವ್ವಗಳ ಬೋಧನೆಯನ್ನು ಅನುಸರಿಸುವರು. ಆ ಬೋಧನೆಗಳು ಸುಳ್ಳು ಹೇಳುವ ಮತ್ತು ವಂಚಿಸುವ ಜನರ ಮೂಲಕ ಬರುತ್ತವೆ. ಅವರು ಸರಿತಪ್ಪುಗಳ ಭೇದವನ್ನು ಗುರುತಿಸುವುದಿಲ್ಲ. ಕಾದ ಕಬ್ಬಿಣದಿಂದ ಸುಟ್ಟು ಬೂದಿಯಾಗುವಂತೆ ಅವರ ವಿವೇಕವು ನಾಶಗೊಂಡಿದೆ. ಜನರು ಮದುವೆಮಾಡಿಕೊಳ್ಳಬಾರದೆಂದೂ ಕೆಲವು ಆಹಾರಪದಾರ್ಥಗಳನ್ನು ತಿನ್ನಬಾರದೆಂದೂ ಅವರು ಹೇಳುತ್ತಾರೆ. ಆದರೆ ನಂಬಿಕೆಯುಳ್ಳವರು ಮತ್ತು ಸತ್ಯವನ್ನು ತಿಳಿದಿರುವವರು ಕೃತಜ್ಞತಾಸ್ತುತಿ ಮಾಡಿ ಆ ಆಹಾರಪದಾರ್ಥಗಳನ್ನು ತಿನ್ನಲಿ. ಏಕೆಂದರೆ ಅವುಗಳನ್ನು ನಿರ್ಮಿಸಿದಾತನು ದೇವರೇ. ಆತನು ನಿರ್ಮಿಸಿದ ಪ್ರತಿಯೊಂದೂ ಉತ್ತಮವಾಗಿರುತ್ತದೆ. ಆತನಿಗೆ ಕೃತಜ್ಞತಾಸ್ತುತಿ ಮಾಡಿ ತೆಗೆದುಕೊಳ್ಳುವ ಯಾವುದನ್ನೇ ಆಗಲಿ ನಿಷಿದ್ಧವೆಂದು ತಿರಸ್ಕರಿಸಬಾರದು. ಏಕೆಂದರೆ ದೇವರ ವಾಕ್ಯದಿಂದ ಮತ್ತು ಪ್ರಾರ್ಥನೆಯಿಂದ ಅದು ಪವಿತ್ರವಾಗಿದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International