Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 81:1

ರಚನೆಗಾರ: ಆಸಾಫ.

81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
    ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.

ಕೀರ್ತನೆಗಳು 81:10-16

10 ಯೆಹೋವನಾದ ನಾನೇ ನಿನ್ನ ದೇವರು.
    ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
    ಆಗ ನಾನು ನಿನಗೆ ತಿನ್ನಿಸುವೆನು.

11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
    ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
    ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14     ಅವರ ಶತ್ರುಗಳನ್ನು ಸೋಲಿಸುವೆನು;
    ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
    ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
    ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”

ಯೆರೆಮೀಯ 2:1-3

ದೇವ ಜನರ ದೇವದ್ರೋಹವು

ಯೆಹೋವನ ಈ ಸಂದೇಶವು ಯೆರೆಮೀಯನಿಗೆ ಬಂದಿತು: “ಯೆರೆಮೀಯನೇ, ಹೋಗಿ ಜೆರುಸಲೇಮಿನ ಜನರೊಂದಿಗೆ ಮಾತನಾಡು, ಅವರಿಗೆ ಹೀಗೆ ಹೇಳು:

“ಯೆಹೋವನು ಹೀಗೆನ್ನುತ್ತಾನೆ: ‘ನೀವು ಯುವ ರಾಷ್ಟ್ರವಾಗಿದ್ದಾಗ ನನಗೆ ನಂಬಿಗಸ್ತರಾಗಿದ್ದಿರಿ;
    ಯುವತಿಯಾದ ಮದುಮಗಳಂತೆ ನನ್ನನ್ನು ಹಿಂಬಾಲಿಸಿದಿರಿ.
ಎಂದೂ ಬೇಸಾಯಕ್ಕೆ ಬಳಸದ ಭೂಮಿಯಲ್ಲಿಯೂ
    ಮರಳುಗಾಡಿನಲ್ಲಿಯೂ ನನ್ನನ್ನು ಹಿಂಬಾಲಿಸಿದಿರಿ.
ಇಸ್ರೇಲಿನ ಜನರು ಯೆಹೋವನಿಗೆ ಒಂದು ಪವಿತ್ರವಾದ ಕಾಣಿಕೆಯಾಗಿದ್ದರು.
    ಅವರು ಯೆಹೋವನ ಬೆಳೆಯ ಪ್ರಥಮ ಫಲವಾಗಿದ್ದರು.
ಇಸ್ರೇಲಿನ ಜನರನ್ನು ಪೀಡಿಸಲು ಪ್ರಯತ್ನಿಸಿದವರನ್ನು ಯಾರಾದರೂ ಆಗಿರಲಿ, ದೋಷಿಗಳೆಂದು ನಿರ್ಣಯಿಸಲಾಗುತ್ತಿತ್ತು.
    ಆ ಕೆಟ್ಟ ಜನರಿಗೆ ಕೇಡಾಗುತ್ತಿತ್ತು.’”
ಇದು ಯೆಹೋವನ ಸಂದೇಶ.

ಯೆರೆಮೀಯ 2:14-22

14 “ಇಸ್ರೇಲಿನ ಜನರು ಗುಲಾಮರಾಗಿರುವರೇ?
    ಅವರು ಗುಲಾಮರಾಗಿ ಹುಟ್ಟಿದ ಮನುಷ್ಯನಂತಿರುವರೇ?
    ಬೇರೆಯವರು ಇಸ್ರೇಲರ ಸಂಪತ್ತನ್ನು ಏಕೆ ತೆಗೆದುಕೊಂಡರು?
15 ಪ್ರಾಯದಸಿಂಹಗಳು (ವೈರಿಗಳು) ಇಸ್ರೇಲ್ ಜನಾಂಗದ ಮೇಲೆ ಗರ್ಜಿಸುತ್ತಿವೆ.
    ಆ ಸಿಂಹಗಳು ಆರ್ಭಟಿಸುತ್ತಿವೆ; ಇಸ್ರೇಲರ ನಾಡನ್ನು ನಾಶಮಾಡಿವೆ.
ಇಸ್ರೇಲ್‌ನ ನಗರಗಳು ಸುಡಲ್ಪಟ್ಟಿವೆ;
    ಅವುಗಳು ನಿರ್ಜನವಾಗಿವೆ.
16 ಮೆಂಫೀಸ್ ಮತ್ತು ತಹಪನೇಸ್ ನಗರಗಳ ಜನರು
    ನಿನ್ನ ತಲೆಬುರುಡೆಯನ್ನು ಒಡೆದುಬಿಟ್ಟಿದ್ದಾರೆ.
17 ತೊಂದರೆಯು ನಿನ್ನ ತಪ್ಪಿನ ಫಲ.
    ನಿನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತಿದ್ದ
    ನಿನ್ನ ದೇವರಾದ ಯೆಹೋವನಿಗೆ ನೀನು ವಿಮುಖನಾದೆ.
18 ಯೆಹೂದದ ಜನರೇ, ಅದರ ಬಗ್ಗೆ ಯೋಚಿಸಿರಿ.
    ಇದರಿಂದ ನಿಮಗೆ ಈಜಿಪ್ಟಿಗೆ ಹೋಗಲು ಸಹಾಯವಾಯಿತೇ?
    ನೈಲ್ ನದಿಯ ನೀರನ್ನು ಕುಡಿಯಲು ಈಜಿಪ್ಟಿಗೆ ಹೋಗುವುದೇಕೆ?[a]
    ಅವರ ನದಿಯ ನೀರನ್ನು ಕುಡಿಯಲು ಅಸ್ಸೀರಿಯಕ್ಕೆ ಹೋಗುವುದೇಕೆ?
19 ನೀವು ಕೆಟ್ಟದ್ದನ್ನು ಮಾಡಿದರೆ
    ಆ ಕೆಟ್ಟತನ ನಿಮಗೆ ಶಿಕ್ಷೆಯಾಗುವಂತೆ ಮಾತ್ರ ಮಾಡುತ್ತದೆ.
ನಿಮಗೆ ವಿಪತ್ತು ಬರುತ್ತದೆ.
    ಆ ವಿಪತ್ತು ನಿಮಗೊಂದು ಪಾಠವನ್ನು ಕಲಿಸುತ್ತದೆ.
ಅದರ ಬಗ್ಗೆ ಯೋಚಿಸಿರಿ.
    ಆಗ ನಿಮ್ಮ ದೇವರಿಗೆ ವಿಮುಖರಾಗುವುದು ಎಷ್ಟು ಕೆಟ್ಟದ್ದೆಂದು ನಿಮಗೆ ಗೊತ್ತಾಗುತ್ತದೆ.
    ನನಗೆ ಭಯಭಕ್ತಿ ತೋರದೆ ಇರುವದು ತಪ್ಪು.”
ಈ ಸಂದೇಶವು ನನ್ನ ಒಡೆಯನೂ ಸರ್ವಶಕ್ತನೂ ಆಗಿರುವ ಯೆಹೋವನಿಂದ ಬಂದಿತು.
20 “ಯೆಹೂದವೇ, ಬಹಳ ದಿನಗಳ ಹಿಂದೆಯೇ ನೀನು ನಿನ್ನ ನೊಗವನ್ನು ಕಳಚಿ ಎಸೆದುಬಿಟ್ಟೆ.
    ನನ್ನೊಂದಿಗೆ ಬಂಧಿಸಿದ ಕಣ್ಣಿಗಳನ್ನು ಹರಿದುಬಿಟ್ಟೆ.
    ‘ನಾನು ನಿನ್ನನ್ನು ಸೇವಿಸುವದಿಲ್ಲ’ ವೆಂದು ನನಗೆ ಹೇಳಿಬಿಟ್ಟೆ.
ನಿಜವಾಗಿ ನೋಡಿದರೆ ಎತ್ತರವಾದ ಎಲ್ಲಾ ಪರ್ವತಗಳ ಮೇಲೂ ಮತ್ತು ಸೊಂಪಾಗಿ ಬೆಳೆದ ಎಲ್ಲಾ ಮರಗಳ ಕೆಳಗೂ
    ನೀನು ಮಲಗಿಕೊಂಡು ವೇಶ್ಯೆಯರಂತೆ ವರ್ತಿಸಿದೆ.[b]
21 ಯೆಹೂದವೇ, ನಾನು ನಿನ್ನನ್ನು ಅತ್ಯುತ್ತಮ ದ್ರಾಕ್ಷಾಲತೆಯಂತೆ ನೆಟ್ಟೆ.
    ನೀನು ಒಳ್ಳೆಯ ಬೀಜದಂತಿದ್ದಿ.
ನೀನು ಕೆಟ್ಟ ಫಲಗಳನ್ನು ಫಲಿಸುವ ಬೇರೆ ದ್ರಾಕ್ಷಿಯ ಬಳ್ಳಿಯಾದದ್ದು ಹೇಗೆ?
22 ನೀನು ಚೌಳನಿಂದ ತೊಳೆದುಕೊಂಡರೂ
    ಹೆಚ್ಚು ಸೋಪನ್ನು ಉಪಯೋಗಿಸಿದರೂ
    ನಾನು ನಿನ್ನ ದೋಷವನ್ನು ಕಂಡುಹಿಡಿಯಬಲ್ಲೆ” ಅನ್ನುತ್ತಾನೆ ಯೆಹೋವನು.

ಮತ್ತಾಯ 20:20-28

ತಾಯಿಯೊಬ್ಬಳ ವಿಶೇಷ ಕೋರಿಕೆ

(ಮಾರ್ಕ 10:35-45)

20 ಆಗ ಜೆಬೆದಾಯನ ಹೆಂಡತಿಯು ಯೇಸುವಿನ ಬಳಿಗೆ ಬಂದಳು. ಅವಳ ಗಂಡುಮಕ್ಕಳು ಅವಳೊಂದಿಗಿದ್ದರು. ಅವಳು ಯೇಸುವಿನ ಮುಂದೆ ಅಡ್ಡಬಿದ್ದು ತನ್ನ ಕೋರಿಕೆಯನ್ನು ಈಡೇರಿಸಬೇಕೆಂದು ಕೇಳಿಕೊಂಡಳು.

21 ಯೇಸು, “ನಿನ್ನ ಕೋರಿಕೆ ಏನು?” ಎಂದನು.

ಅವಳು, “ನಿನ್ನ ರಾಜ್ಯದಲ್ಲಿ, ನನ್ನ ಗಂಡುಮಕ್ಕಳಲ್ಲಿ ಒಬ್ಬನು ನಿನ್ನ ಬಲಗಡೆಯಲ್ಲಿಯೂ ಮತ್ತೊಬ್ಬನು ನಿನ್ನ ಎಡಗಡೆಯಲ್ಲಿಯೂ ಕುಳಿತುಕೊಳ್ಳುವಂತೆ ವಾಗ್ದಾನಮಾಡು” ಎಂದು ಕೇಳಿಕೊಂಡಳು.

22 ಯೇಸು ಅವಳ ಮಕ್ಕಳಿಗೆ, “ನೀವು ಏನು ಕೇಳಿಕೊಳ್ಳುತ್ತಿದ್ದೀರೆಂಬುದೇ ನಿಮಗೆ ಗೊತ್ತಿಲ. ನಾನು ಅನುಭವಿಸಬೇಕಾಗಿರುವ ಸಂಕಟವನ್ನು ಅನುಭವಿಸಲು ನಿಮಗೆ ಸಾಧ್ಯವೋ?” ಎಂದು ಕೇಳಿದನು.

ಅದಕ್ಕೆ ಅವರು, “ಹೌದು, ನಮಗೆ ಸಾಧ್ಯ” ಎಂದು ಉತ್ತರಕೊಟ್ಟರು.

23 ಯೇಸು ಅವರಿಗೆ, “ನಾನು ಅನುಭವಿಸಲಿರುವ ಸಂಕಟಗಳನ್ನು ನೀವು ನಿಜವಾಗಿಯೂ ಅನುಭವಿಸುವಿರಿ. ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವವನನ್ನು ಆಯ್ಕೆಮಾಡುವವನು ನಾನಲ್ಲ. ನನ್ನ ತಂದೆಯು ಆ ಸ್ಥಳಗಳನ್ನು ಯಾರಿಗಾಗಿ ಕಾಯ್ದಿರಿಸಿದ್ದಾನೋ ಅವರಿಗೇ ಆ ಅವಕಾಶವನ್ನು ಕೊಡುತ್ತಾನೆ” ಎಂದನು.

24 ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಶಿಷ್ಯರ ಮೇಲೆ ಕೋಪಗೊಂಡರು. 25 ಯೇಸು ಶಿಷ್ಯರನ್ನೆಲ್ಲ ಒಟ್ಟಿಗೆ ಕರೆದು, “ಯೆಹೂದ್ಯರಲ್ಲದ ಅಧಿಪತಿಗಳು ಜನರ ಮೇಲೆ ತಮ್ಮ ಅಧಿಕಾರ ತೋರಿಸಲು ಇಷ್ಟಪಡುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಮತ್ತು ಅವರ ಪ್ರಮುಖ ನಾಯಕರು ಜನರ ಮೇಲೆ ತಮ್ಮ ಅಧಿಕಾರವನ್ನೆಲ್ಲಾ ಚಲಾಯಿಸಲು ಇಷ್ಟಪಡುತ್ತಾರೆ. 26 ಆದರೆ ನೀವು ಹಾಗೆ ಮಾಡಬಾರದು. ನಿಮ್ಮಲ್ಲಿ ದೊಡ್ಡವನಾಗಲು ಇಚ್ಫಿಸುವವನು ಸೇವಕನಂತೆ ಸೇವೆ ಮಾಡಬೇಕು. 27 ನಿಮ್ಮಲ್ಲಿ ಮೊದಲನೆಯವನಾಗಲು ಇಚ್ಛಿಸುವವನು ಗುಲಾಮನಂತೆ ಸೇವೆ ಮಾಡಬೇಕು. 28 ಇದೇ ನಿಯಮ ಮನುಷ್ಯಕುಮಾರನಿಗೂ ಅನ್ವಯಿಸುತ್ತದೆ. ಮನುಷ್ಯಕುಮಾರನು ಬೇರೆಯವರಿಂದ ಸೇವೆ ಮಾಡಿಸಿಕೊಳ್ಳಲು ಬರದೆ ಬೇರೆಯವರಿಗೆ ಸೇವೆ ಮಾಡುವುದಕ್ಕಾಗಿ ಮತ್ತು ಅನೇಕ ಜನರನ್ನು ರಕ್ಷಿಸುವುದಕ್ಕಾಗಿ ತನ್ನ ಪ್ರಾಣವನ್ನೇ ಈಡುಕೊಡಲು ಬಂದನು” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International