Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 81:1

ರಚನೆಗಾರ: ಆಸಾಫ.

81 ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
    ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.

ಕೀರ್ತನೆಗಳು 81:10-16

10 ಯೆಹೋವನಾದ ನಾನೇ ನಿನ್ನ ದೇವರು.
    ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
    ಆಗ ನಾನು ನಿನಗೆ ತಿನ್ನಿಸುವೆನು.

11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
    ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
    ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14     ಅವರ ಶತ್ರುಗಳನ್ನು ಸೋಲಿಸುವೆನು;
    ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
    ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
    ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”

ಯೆರೆಮೀಯ 11:1-17

ಒಡಂಬಡಿಕೆಯ ಉಲ್ಲಂಘನೆ

11 ಯೆರೆಮೀಯನಿಗೆ ಈ ಸಂದೇಶ ಯೆಹೋವನಿಂದ ಬಂದಿತು: “ಯೆರೆಮೀಯನೇ, ಈ ಒಡಂಬಡಿಕೆಯ ವಚನಗಳನ್ನು ಕೇಳು, ಈ ವಿಷಯಗಳ ಬಗ್ಗೆ ಯೆಹೂದದ ಜನರಿಗೂ ಜೆರುಸಲೇಮಿನಲ್ಲಿರುವ ಜನರಿಗೂ ಹೇಳು. ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, ‘ಈ ಒಡಂಬಡಿಕೆಯನ್ನು ಪಾಲಿಸದೆ ಇದ್ದವರಿಗೆ ಕೇಡಾಗುತ್ತದೆ.’ ನಾನು ನಿಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯ ಬಗ್ಗೆ ಮಾತನಾಡುತ್ತಿದ್ದೇನೆ. ನಾನು ಈಜಿಪ್ಟಿನಿಂದ ಅವರನ್ನು ಹೊರತಂದಾಗ ನಾನು ಅವರೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡೆ. ಈಜಿಪ್ಟು ಅನೇಕ ಕಷ್ಟಗಳ ನಾಡಾಗಿತ್ತು. ಅದು ಕಬ್ಬಿಣವನ್ನು ಕರಗಿಸುವ ಉರಿಯುವ ಕುಲುಮೆಯಂತಿತ್ತು. ನಾನು ಅವರಿಗೆ, ‘ನನ್ನ ಆಜ್ಞಾಪಾಲನೆಯನ್ನು ಮಾಡಿರಿ ಮತ್ತು ನಾನು ಹೇಳಿದಂತೆ ಎಲ್ಲವನ್ನು ಮಾಡಿರಿ. ಆಗ ನೀವು ನನ್ನ ಭಕ್ತರಾಗುವಿರಿ. ನಾನು ನಿಮ್ಮ ದೇವರಾಗುವೆನು’ ಎಂದೆ.

“ನಾನು ನಿಮ್ಮ ಪೂರ್ವಿಕರಿಗೆ ಮಾಡಿದ ವಾಗ್ದಾನವನ್ನು ನೆರವೇರಿಸಲು ನಾನು ಇದೆಲ್ಲವನ್ನು ಮಾಡಿದೆ. ನಾನು ಅವರಿಗೆ ಫಲವತ್ತಾದ ಭೂಮಿಯನ್ನೂ ಹಾಲು ಮತ್ತು ಜೇನು ಹರಿಯುವ ಪ್ರದೇಶವನ್ನೂ ಕೊಡುವ ವಾಗ್ದಾನ ಮಾಡಿದ್ದೆ. ನೀವು ಈಗ ಈ ಪ್ರದೇಶದಲ್ಲಿ ವಾಸಮಾಡುತ್ತಿದ್ದೀರಿ.”

ನಾನು, “ಯೆಹೋವನೇ ನಿನ್ನ ಅಪ್ಪಣೆಯಂತಾಗಲಿ” ಎಂದು ಉತ್ತರಿಸಿದೆನು.

ಯೆಹೋವನು ನನಗೆ, “ಯೆರೆಮೀಯನೇ, ಯೆಹೂದದ ಪಟ್ಟಣಗಳಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಈ ಸಂದೇಶವನ್ನು ಸಾರು. ಈ ಒಡಂಬಡಿಕೆಯಲ್ಲಿನ ಮಾತುಗಳನ್ನು ಕೇಳಿ ಅನುಸರಿಸಿರಿ. ನಾನು ನಿಮ್ಮ ಪೂರ್ವಿಕರನ್ನು ಈಜಿಪ್ಟಿನಿಂದ ಹೊರತಂದಾಗ ಅವರಿಗೆ ಒಂದು ಮುನ್ನೆಚ್ಚರಿಕೆಯನ್ನು ಕೊಟ್ಟೆನು. ಇಂದಿನವರೆಗೂ ನಾನು ಮತ್ತೆಮತ್ತೆ ಅವರಿಗೆ ಮುನ್ನೆಚ್ಚರಿಕೆಯನ್ನು ಕೊಟ್ಟೆ. ನನ್ನ ಆಜ್ಞಾಪಾಲನೆ ಮಾಡಬೇಕೆಂದು ಅವರಿಗೆ ಹೇಳಿದೆ. ಆದರೆ ನಿಮ್ಮ ಪೂರ್ವಿಕರು ನನ್ನ ಮಾತನ್ನು ಕೇಳಲಿಲ್ಲ. ಅವರು ಮೊಂಡರಾಗಿದ್ದು ತಮ್ಮ ದುಷ್ಟಹೃದಯ ಹೇಳಿದಂತೆ ಮಾಡಿದರು. ಆಜ್ಞಾಪಾಲನೆ ಮಾಡದಿದ್ದರೆ ಅವರಿಗೆ ಕೆಡುಕಾಗುವದೆಂದು ಒಡಂಬಡಿಕೆಯಲ್ಲಿ ಹೇಳಲಾಗಿದೆ. ಅದಕ್ಕಾಗಿ ನಾನು ಅವರಿಗೆ ಕೇಡುಂಟಾಗುವಂತೆ ಮಾಡಿದೆ, ಒಡಂಬಡಿಕೆಯನ್ನು ಪಾಲಿಸಬೇಕೆಂದು ನಾನು ಅವರಿಗೆ ಆಜ್ಞಾಪಿಸಿದೆ ಆದರೆ ಅವರು ಪಾಲಿಸಲಿಲ್ಲ.”

ಯೆಹೋವನು ನನಗೆ, “ಯೆರೆಮೀಯನೇ, ಯೆಹೂದದ ಜನರೂ ಜೆರುಸಲೇಮಿನಲ್ಲಿ ವಾಸಮಾಡುವ ಜನರೂ ಒಳಸಂಚನ್ನು ಮಾಡಿದ್ದಾರೆ. 10 ಅವರು ತಮ್ಮ ಪೂರ್ವಿಕರು ಮಾಡಿದ ಪಾಪಗಳನ್ನೇ ಮಾಡುತ್ತಿದ್ದಾರೆ. ಅವರ ಪೂರ್ವಿಕರು ನನ್ನ ಸಂದೇಶವನ್ನು ಕೇಳಲು ಒಪ್ಪಲಿಲ್ಲ. ಅವರು ಬೇರೆ ದೇವರುಗಳನ್ನು ಅನುಸರಿಸಿ ಪೂಜಿಸಿದರು. ನಾನು ಅವರ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಯೆಹೂದ ಮತ್ತು ಇಸ್ರೇಲ್ ವಂಶದವರು ಮೀರಿದ್ದಾರೆ.”

11 ಯೆಹೋವನು ಹೇಳುತ್ತಾನೆ, “ನಾನು ಶೀಘ್ರವಾಗಿ ಯೆಹೂದದ ಜನರಿಗೆ ಏನಾದರೊಂದು ಭಯಂಕರ ಅನಾಹುತ ಸಂಭವಿಸುವಂತೆ ಮಾಡುತ್ತೇನೆ. ಅವರು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವದಿಲ್ಲ. ಅವರು ಪಶ್ಚಾತ್ತಾಪಪಡುವರು. ಅವರು ಸಹಾಯಕ್ಕಾಗಿ ನನಗೆ ಮೊರೆಯಿಡುವರು. ಆದರೆ ನಾನು ಅವರ ಮೊರೆಯನ್ನು ಕೇಳುವದಿಲ್ಲ. 12 ಯೆಹೂದದ ಪಟ್ಟಣಗಳ ಜನರು ಮತ್ತು ಜೆರುಸಲೇಮ್ ನಗರದ ಜನರು ತಮ್ಮ ವಿಗ್ರಹಗಳ ಹತ್ತಿರ ಹೋಗಿ ಸಹಾಯಕ್ಕಾಗಿ ಪ್ರಾರ್ಥಿಸುವರು. ಆ ವಿಗ್ರಹಗಳ ಮುಂದೆ ಅವರು ಧೂಪ ಹಾಕುವರು. ಆದರೆ ಕೇಡು ಬಂದಾಗ ಯೆಹೂದದ ಜನರಿಗೆ ಸಹಾಯಮಾಡಲು ಆ ವಿಗ್ರಹಗಳಿಗೆ ಸಾಧ್ಯವಾಗುವದಿಲ್ಲ.

13 “ಯೆಹೂದದ ಜನರೇ, ನೀವು ಅನೇಕ ವಿಗ್ರಹಗಳನ್ನು ಇಟ್ಟುಕೊಂಡಿದ್ದೀರಿ. ಯೆಹೂದದಲ್ಲಿ ಎಷ್ಟು ಪಟ್ಟಣಗಳಿವೆಯೋ, ಅಷ್ಟು ವಿಗ್ರಹಗಳಿವೆ. ತುಚ್ಛ ದೇವರಾದ ಬಾಳನನ್ನು ಪೂಜಿಸಲು ನೀವು ಅನೇಕ ಬಲಿಪೀಠಗಳನ್ನು ಕಟ್ಟಿಕೊಂಡಿದ್ದೀರಿ. ಜೆರುಸಲೇಮಿನಲ್ಲಿ ಎಷ್ಟು ಬೀದಿಗಳಿವೆಯೋ ಅಷ್ಟು ಬಲಿಪೀಠಗಳಿವೆ.

14 “ಯೆರೆಮೀಯನೇ, ಈ ಯೆಹೂದದ ಜನರಿಗಾಗಿ ಬೇಡಿಕೊಳ್ಳಬೇಡ. ಅವರಿಗಾಗಿ ಮೊರೆಯಿಡಬೇಡ. ಅವರಿಗಾಗಿ ಪ್ರಾರ್ಥನೆ ಮಾಡಿದರೂ ನಾನು ಕೇಳುವದಿಲ್ಲ. ಆ ಜನರು ತೊಂದರೆಯನ್ನು ಅನುಭವಿಸುವರು. ಆಗ ಅವರು ಸಹಾಯಕ್ಕಾಗಿ ನನಗೆ ಮೊರೆಯಿಡುವರು. ಆದರೆ ನಾನು ಕೇಳುವದಿಲ್ಲ.

15 “ನನ್ನ ಪ್ರೇಯಸಿ (ಯೆಹೂದ) ನನ್ನ ಪವಿತ್ರ ಆಲಯದಲ್ಲಿ ಏಕೆ ಇದ್ದಾಳೆ?
    ಇಲ್ಲಿ ಇರಲು ಅವಳಿಗೆ ಅಧಿಕಾರವಿಲ್ಲ. ಅವಳು ಅನೇಕ ದುಷ್ಕೃತ್ಯಗಳನ್ನು ಮಾಡಿದ್ದಾಳೆ.
ಯೆಹೂದವೇ, ಹರಕೆಗಳಿಂದ ಮತ್ತು ಪ್ರಾಣಿಗಳ ಬಲಿಯಿಂದ ನಿನ್ನ ವಿನಾಶವನ್ನು ತಡೆಯಬಹುದೆಂದು ತಿಳಿದುಕೊಂಡಿರುವಿಯಾ?
    ನನಗೆ ಹೋಮವನ್ನು ಅರ್ಪಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿದುಕೊಂಡಿರುವಿಯಾ?”

16 “ಯೆಹೋವನು ನಿನಗೆ
    ‘ನೋಡಲು ಸುಂದರವಾದ ಹಸಿರು ಆಲೀವ್ ಮರ ಎಂದು’ ಹೆಸರು ಕೊಟ್ಟನು.
ಆದರೆ ಯೆಹೋವನು ಬಿರುಗಾಳಿ ಬೀಸಿ ಆ ಮರಕ್ಕೆ ಬೆಂಕಿ ಇಡುವನು.
    ಆಗ ಅದರ ಕೊಂಬೆಗಳು ಸುಟ್ಟುಹೋಗುವವು.
17 ಸರ್ವಶಕ್ತನಾದ ಯೆಹೋವನು ನಿಮ್ಮನ್ನು ನೆಟ್ಟನು.
    ನಿಮಗೆ ಕೇಡು ಬರುವದೆಂದು ಆತನು ಸಾರಿರುವನು.
ಏಕೆಂದರೆ ಇಸ್ರೇಲ್ ವಂಶವೂ
    ಯೆಹೂದ ವಂಶವೂ ದುಷ್ಕೃತ್ಯಗಳನ್ನು ಮಾಡಿವೆ.
ಬಾಳನಿಗೆ ಹೋಮವನ್ನರ್ಪಿಸಿ
    ನನಗೆ ಕೋಪ ಬರುವಂತೆ ಮಾಡಿವೆ.”

1 ಪೇತ್ರನು 3:8-12

ಒಳ್ಳೆಯದರ ನಿಮಿತ್ತ ಉಂಟಾಗುವ ಸಂಕಟ

ಆದ್ದರಿಂದ ನೀವೆಲ್ಲರೂ ಒಟ್ಟಾಗಿ ಶಾಂತಿಯಿಂದ ಬಾಳಿರಿ; ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ. ಒಬ್ಬರನ್ನೊಬ್ಬರು ಸಹೋದರರಂತೆ ಪ್ರೀತಿಸಿರಿ. ದಯೆ ತೋರುವವರೂ ಮತ್ತು ದೀನತೆ ಉಳ್ಳವರೂ ಆಗಿರಿ. ಅಪಕಾರ ಮಾಡಿದವನಿಗೆ ಅಪಕಾರ ಮಾಡದೆ, ನಿಂದಿಸಿದವನನ್ನು ನಿಂದಿಸದೆ, ಅವನನ್ನು ಆಶೀರ್ವದಿಸುವಂತೆ ದೇವರಲ್ಲಿ ಬೇಡಿಕೊಳ್ಳಿರಿ. ಏಕೆಂದರೆ ಆಶೀರ್ವಾದವನ್ನು ಹೊಂದಿಕೊಳ್ಳಲು ನೀವು ಕರೆಯಲ್ಪಟ್ಟವರಾಗಿದ್ದೀರಿ. 10 ಪವಿತ್ರ ಗ್ರಂಥವು ಹೇಳುವುದೇನೆಂದರೆ,

“ಈ ಜೀವಿತದಲ್ಲಿ ಸಂತೋಷಿಸುತ್ತಾ
    ಸುದಿನಗಳನ್ನು ನೋಡಲು ಅಪೇಕ್ಷಿಸುವವನು
ಕೆಟ್ಟ ಮಾತುಗಳನ್ನಾಡದಿರಲಿ;
    ಸುಳ್ಳನ್ನು ನುಡಿಯದಿರಲಿ.
11 ಅವನು ಕೆಟ್ಟದ್ದನ್ನು ಮಾಡದೆ ಒಳ್ಳೆಯದನ್ನೇ ಮಾಡಲಿ.
    ಅವನು ಶಾಂತಿಯನ್ನು ಎದುರುನೋಡುತ್ತಾ ಅದನ್ನು ಪಡೆಯಲು ಪ್ರಯತ್ನಿಸಲಿ.
12 ನೀತಿವಂತರನ್ನು ಪ್ರಭುವು ಕಾಯುತ್ತಾನೆ;
    ಅವರ ಪ್ರಾರ್ಥನೆಗಳನ್ನು ಆಲಿಸುತ್ತಾನೆ.
ಆದರೆ ಕೆಟ್ಟದ್ದನ್ನು ಮಾಡುವ ಜನರನ್ನು ಪ್ರಭುವು ವಿರೋಧಿಸುತ್ತಾನೆ.”(A)

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International